ಶೃಂಗೇರಿ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಆವರಣದಲ್ಲಿ 69 ನೇ ಕನ್ನಡ ರಾಜ್ಯೋತ್ಸವ
ಕನ್ನಡಪ್ರಭ ವಾರ್ತೆ, ಶೃಂಗೇರಿಶತ ಶತಮಾನಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ, ಸಂಸ್ಕೃತಿ, ನೆಲ, ಜಲ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಡಾ.ಬಿ.ಆರ್.ಗಂಗಾಧರಪ್ಪ ಹೇಳಿದರು.
ಪಟ್ಟಣದ ಶೃಂಗೇರಿ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕನ್ನಡ ಭಾಷೆ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದ್ದು, ಇದು ಭಾಷಾ ಭಂಡಾರ ವಾಗಿದೆ. ಕನ್ನಡ ನಾಡನ್ನು ಆಳಿದ ಎಲ್ಲಾ ರಾಜಮನೆತನಗಳು ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡಿ ಪೋಷಿಸಿ ಬೆಳೆಸಿದೆ.ಕವಿರಾಜ ಮಾರ್ಗ, ವಡ್ಡಾರಾಧನೆಯಂತಹ ಅದ್ಭುತ ಗ್ರಂಥಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಬ್ರಿಟೀಷರ ಆಳ್ವಿಕೆಯಲ್ಲಿ ವಿವಿಧ ಪ್ರದೇಶಗಳಲ್ಲಿ ಹಂಚಿ ಹೋಗಿದ್ದ ಕನ್ನಡ ಪ್ರದೇಶಗಳಲ್ಲಿ ಕನ್ನಡಿಗರು, ಕನ್ನಡ ಭಾಷೆ, ಸಂಸ್ಕೃತಿಗಳ ಮೇಲೆ ಅನ್ಯ ಭಾಷಿಗರ ದಬ್ಬಾಳಿಕೆ ನಿರಂತರವಾಗಿತ್ತು. ಕನ್ನಡಿಗರ ನಿರಂತರ ಹೋರಾಟದ ಫಲವಾಗಿ 1956 ನವೆಂಬರ್ 1 ರಂದು ವಿಶಾಲ ಮೈಸೂರು ರಾಜ್ಯ ಉದಯವಾಯಿತು. 1973 ನವೆಂಬರ್ 1 ರಂದು ಕರ್ನಾಟಕ ರಾಜ್ಯ ಎಂದು ನಾಮಕರಣವಾಯಿತು. ಅನೇಕ ಹೋರಾಟಗಾರರ ಪರಿಶ್ರಮ, ತ್ಯಾಗ ಇದರ ಹಿಂದಿದೆ.
ಕನ್ನಡ ಭಾಷೆ ಇಂದು ಕನ್ನಡಿಗರಿಂದಲೇ ನಿರ್ಲಕ್ಷಕ್ಕೆ ಒಳಗಾಗುತ್ತಿದೆ. ಇಂಗ್ಲೀಷ್ ವ್ಯಾಮೋಹದಿಂದ ಕನ್ನಡವನ್ನು ಕಡೆಗಣಿಸಲಾಗುತ್ತಿದೆ. ದೇಶದ ಸ್ವಾತಂತ್ರ ಹೋರಾಟದಲ್ಲಿ ಕನ್ನಡಿಗರ ಪಾತ್ರ ಮಹತ್ತರವಾಗಿದೆ. ಬ್ರಿಟೀಷರ ವಿರುದ್ಧ ಸಶಸ್ತ್ರ ಬಂಡಾಯ, ಅಹಿಂಸಾತ್ಮಕ ಹೋರಾಟ ನಡೆಸುವ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಪ್ರಮುಖ ಪಾತ್ರ ಕರ್ನಾಟಕದ್ದಾಗಿದೆ. ನಮ್ಮ ಮಾತೃಭಾಷೆ ಕನ್ನಡ ನಿರ್ಲಕ್ಷ್ಯ ಸಲ್ಲದು. ಅನ್ಯ ಭಾಷೆಗಳು ಬೇಕು. ಆದರೆ ನಮ್ಮ ಕನ್ನಡತನ, ಕನ್ನಡವನ್ನು ಎಂದಿಗೂ ನಿರ್ಲಕ್ಷಿಸಬಾರದು. ಪ್ರತಿಯೊಬ್ಬ ಕನ್ನಡಿಗ ಭಾಷಾಭಿಮಾನ, ಸಂಸ್ಕೃತಿ, ಕನ್ನಡಭಿಮಾನ ಬೆಳೆಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಬಿಆರ್ ಪಿ ಸುಂದರೇಶ್, ಪ್ರಜ್ವಲ್, ನಾಗರತ್ನ, ಪವಿತ್ರ ಮತ್ತಿತರರು ಉಪಸ್ಥಿತರಿದ್ದರು.
1 ಶ್ರೀ ಚಿತ್ರ 1-ಶೃಂಗೇರಿ ಪಟ್ಟಣದ ಕ್ಷೇತ್ರ ಸಮನ್ವಯ ಕಚೇರಿ ಆವರಣದಲ್ಲಿ 69 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕ್ಷೇತ್ರ ಸಮನ್ವಯಾಧಿಕಾರಿ ಡಾ.ಬಿ.ಆರ್.ಗಂಗಾಧರಪ್ಪ ಧ್ವಜಾರೋಹಣ ನೆರವೇರಿಸಿದರು.ಸುಂದರೇಶ್,ಪವಿತ್ರ ಮತ್ತಿತರರು ಇದ್ದರು.