ಕನ್ನಡ ಭಾಷೆ ಇಂದು ಹಳ್ಳಿಗಳಲ್ಲಿಯೇ ಹೆಚ್ಚು ಜೀವಂತ: ಅವಿನಾಶ್

KannadaprabhaNewsNetwork |  
Published : Aug 05, 2024, 12:43 AM IST
ಪೋಟೋ: 4ಎಸ್‌ಎಂಜಿಕೆಪಿ03ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಅಜೀಂ ಪ್ರೇಂ ಜೀ ವಿವಿ ಆಯೋಜಿಸಿದ್ದ ಸಾಹಿತ್ಯ ಸಹವಾಸ ಕಾರ್ಯಕ್ರಮದಲ್ಲಿ ಸಮಾರೋಪ ನಡೆಯಿತು. | Kannada Prabha

ಸಾರಾಂಶ

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಅಜೀಂ ಪ್ರೇಮ್‌ ಜೀ ವಿವಿ ಆಯೋಜಿಸಿದ್ದ ಸಾಹಿತ್ಯ ಸಹವಾಸ ಕಾರ್ಯಕ್ರಮದಲ್ಲಿ ಸಮಾರೋಪ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಕಾಡೆಮಿಗಳಿಂದ ಆಚೆ ಇರುವವರೇ ಹೆಚ್ಚಾಗಿ ಸಾಹಿತ್ಯಾಭಿಮಾನಿಗಳಾಗಿದ್ದಾರೆ ಎಂದು ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ.ಅವಿನಾಶ್ ಹೇಳಿದರು.

ಇಲ್ಲಿನ ಸಹ್ಯಾದ್ರಿ ಕಾಲೇಜಿನಲ್ಲಿ ಅಜೀಂ ಪ್ರೇಮ್‌ ಜೀ ವಿವಿ ಆಯೋಜಿಸಿದ್ದ ಸಾಹಿತ್ಯ ಸಹವಾಸ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿ ಮಾತನಾಡಿ, ಸಾಹಿತ್ಯ ಎಂಬುದು ಕೇವಲ ಕಲಾ ವಿದ್ಯಾರ್ಥಿಗಳಿಗೇ ಎಂಬ ಮಾತು ನಿಜವಲ್ಲ. ಇಂದು ವಾಣಿಜ್ಯ, ವಿಜ್ಞಾನ, ಕೃಷಿ, ತಂತ್ರಜ್ಞಾನ ಹೀಗೆ ವಿವಿಧ ಕ್ಷೇತ್ರಗಳಲ್ಲಿನ ವಿದ್ಯಾರ್ಥಿಗಳು, ವೃತ್ತಿ ನಿರತರು, ಓದು ನಿಲ್ಲಿಸಿದ ಹಳ್ಳಿಗರು ಸಾಹಿತ್ಯದ ಕೆಲಸ ಮಾಡುತ್ತಿದ್ದಾರೆ. ಭಾಷೆ ಕೂಡ ಹಾಗೆಯೇ. ಕನ್ನಡ ಭಾಷೆ ಇಂದು ಹಳ್ಳಿಗಳಲ್ಲಿಯೇ ಹೆಚ್ಚು ಜೀವಂತವಾಗಿದೆ ಎಂದರು.

ಫೌಂಡೇಷನ್ ರಾಜ್ಯ ಮುಖ್ಯಸ್ಥ ಎಸ್.ರುದ್ರೇಶ್ ಮಾತನಾಡಿ, ನಮ್ಮ ವಿವಿಯು ಸಾಹಿತ್ಯ ಸಹವಾಸ ಎಂಬ ಸಾಹಿತ್ಯಿಕ ಉಪನ್ಯಾಸ ಸರಣಿ ಆಯೋಜಿಸುತ್ತಾ ಬಂದಿದೆ. ಇಂದು ಈ ಕಾರ್ಯಕ್ರಮ ಎಲ್ಲರ ನೆರವಿನಿಂದ ಯಶಸ್ವಿಯಾಗಿದೆ. ಯು.ಆರ್.ಅನಂತಮೂರ್ತಿ ಅವರ ವಿಡಿಯೋ ಉಪನ್ಯಾಸ ಸರಣಿ ಕುರಿತು ಉತ್ತಮ ಚರ್ಚೆಗಳಾಗಿವೆ ಎಂದು ಹೇಳಿದರು.

ಕನ್ನಡ ಸಾಹಿತ್ಯಕ್ಕೆ ಕೊಡುಗೆ ರೂಪದಲ್ಲಿ ನಾವು ಈ ಕೆಲಸ ಮಾಡುತ್ತಿದ್ದೇವೆ. ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದೇವೆ. ಅಜೀಂ ಪ್ರೇಮ್‌ ಜೀ ವಿವಿಯಿಂದ ಸುಮಾರು 55 ಲಕ್ಷ ಮಕ್ಕಳಿಗೆ ಮೊಟ್ಟೆ ಕೊಡಲು ಮೂರು ವರ್ಷದ ಅವಧಿಗೆ ಒಪ್ಪಿಕೊಂಡಿದ್ದೇವೆ ಎಂದರು.

ಇದಕ್ಕೂ ಮೊದಲು ನಡೆದ ಕುವೆಂಪು, ತೇಜಸ್ವಿ, ಲಂಕೇಶ್ ಜೊತೆಗಿನ ಒಡನಾಟದ ನೆನಪುಗಳು ವಿಚಾರ ಸಂಕಿರಣದಲ್ಲಿ ಕುವೆಂಪು ವಿವಿ ನಿವೃತ್ತ ಕುಲಪತಿ ಪ್ರೊ.ಚಿದಾನಂದಗೌಡ ಮಾತನಾಡಿ, ಕುವೆಂಪು ಅವರಿಗೆ ಕಾಡೆಂದರೆ ಪ್ರೀತಿ, ಕಾಡಿನ ಕವಿ ಅವರು. ಕಾಡು ನಾಶವಾಗುತ್ತಿರುವುದರ ಬಗ್ಗೆ ಆವಾಗಲೇ ಅವರು ಆತಂಕ ವ್ಯಕ್ತಪಡಿಸಿದ್ದರು ಎಂದರು.

ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಆದರೆ, ‘ನೆನಪಿನ ದೋಣಿ’ ಅವರ ಮದುವೆಯಾಗುವವರೆಗೆ ಮಾತ್ರ ಇದೆ. ಮದುವೆಯಾದ ಮೇಲೆ ಅವರು ಬರೆಯಲಿಲ್ಲ. ಕಾಲ್ಮೋಸಿ ಎಂಬ ಕಾದಂಬರಿ ಅವರು ಬರೆಯಬೇಕಿತ್ತು, ಬರೆಯಲಿಲ್ಲ. ಹಾಗೆಯೇ ಬೆರಳ್ಗೆ ಕೊರಳ್ ನಾಟಕದ ನಂತರ ಕೊರಳಿಗೆ ಉರುಳ್, ಉರುಳಿಗೆ ಸರಳ್ ಎಂಬ ಎರಡು ನಾಟಕಗಳನ್ನು ಬರೆಯಬೇಕಿತ್ತು ಬರೆಯಲಿಲ್ಲ ಎಂದರು.

ಇದೇ ವೇಳೆ ಅನಂತಮೂರ್ತಿ ಅವರ ವಿಡಿಯೋ ಉಪನ್ಯಾಸ ಸರಣಿ ನಿರ್ಮಾಣದ ಅನುಭವದ ಬಗ್ಗೆ ರಾಮಕೃಷ್ಣ ಹೆಗಡೆ ಪೀಠದ ಪ್ರಾಧ್ಯಾಪಕ ಡಾ. ಚಂದನಗೌಡ ಮಾತನಾಡಿದರು. ಲಂಕೇಶ್ ಕುರಿತು ಅಧ್ಯಾಪಕ ಡಾ.ಸುರೇಶ್ ನಾಗಲಮಡಿಕೆ, ಪ್ರಾಧ್ಯಾಪಕಿ ಡಾ.ಶಶಿಕಲಾ ಎಚ್.ಉಪನ್ಯಾಸ ನೀಡಿದರು.

ಇದೇ ವೇಳೆ ವಿಮರ್ಶಾ ಲೇಖನ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಲತಿಕ ಗಣಪತಿ ನಾಯ್ಕ್, ಅಭಿಷೇಕ್ ಎಲ್, ಮದನ್ ಎನ್, ವರುಣ ಜಿ, ರಘು ಎಸ್.ಕೆ, ಪುಷ್ಪಲತಾ ಟಿ.ಜಿ, ಲಾವಣ್ಯ ಎಂ.ಹುರಳಿ, ಶೀವಮೂರ್ತಿ ಜಿ. ಅವರಿಗೆ ಬಹುಮಾನ ವಿತರಿಸಲಾಯಿತು.

ತೀರ್ಪುಗಾರರಾಗಿ ಡಾ. ಕಲೀಂವುಲ್ಲಾ, ಅಕ್ಷತಾ ಕೆ. ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಅಜೀಂ ಪ್ರೇಮ್‌ ಜೀ ವಿವಿ ಸಹ ನಿರ್ದೇಶಕ ಎಸ್.ವಿ. ಮಂಜುನಾಥ್, ಡಾ. ಪ್ರಕಾಶ್ ಮರ್ಗನಳ್ಳಿ, ಡಾ. ಪ್ರೇಮಾ ಜಿ.ಕೆ., ರಾಘವೇಂದ್ರ ಹೇರ್ಳೆ ಮತ್ತಿತರರು ಇದ್ದರು.

PREV

Recommended Stories

ಗೃಹಲಕ್ಷ್ಮೀಯರ ಬಾಕಿ ಹಣ ಬಿಡುಗಡೆಗೆ ಲಕ್ಷ್ಮೀ ತಥಾಸ್ತು : ಸುಳ್ಳಲ್ಲೇ 7 ಗಂಟೆ ರೈಲು ಓಡಿಸಿದ್ರು
ರೈಲಲ್ಲಿ ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ