ಕುವೆಂಪು ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ-100 ಮೀಟರ್ ಉದ್ದದ ಕನ್ನಡ ಭಾವುಟದ ಮೆರವಣಿಗೆ
ಕನ್ನಡ ಭಾಷೆ ಸುಂದರವಾದ ಭಾಷೆಯಾಗಿದ್ದು ರಾಷ್ಟದಲ್ಲೇ 3 ನೇ ಸ್ಥಾನದಲ್ಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ತಿಳಿಸಿದರು.
ಶುಕ್ರವಾರ ಕುವೆಂಪು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ದ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕನ್ನಡ ಭಾಷೆಗೆ ಛಂದಸ್ಸು, ಲಿಪಿ, ವ್ಯಾಕರಣವಿದೆ. ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯ, ಜಾನಪದ ಸಾಹಿತ್ಯ ಇದೆ. ಕನ್ನಡ ಭಾಷೆಗೆ ಧಕ್ಕೆ ಬಂದಾಗ ಜಾತಿ, ಮತ, ಧರ್ಮ ಮರೆತು ನಾವು ಕನ್ನಡಿಗರು ಎಂದು ಒಟ್ಟಾಗಿ ಹೋರಾಟಕ್ಕೂ ಸಿದ್ದರಾಗಬೇಕು. ಬೇರೆ ಭಾಷೆ ಗೌರವಿಸಿ. ಆದರೆ, ಕನ್ನಡ ಭಾಷೆ ಪ್ರೀತಿಸಿ. ಪ್ರತಿ ದಿನವೂ ಕನ್ನಡದಲ್ಲೇ ಮಾತನಾಡಿ ಕನ್ನಡ ಭಾಷೆ ಉಳಿಸಿ ಬೆಳೆಸಬೇಕು.ಕನ್ನಡ ಶಾಲೆಗಳನ್ನು ಉಳಿಸುವ ಪ್ರಯತ್ನ ಮಾಡಬೇಕು. ಕನ್ನಡ ಶಾಲೆ ಉಳಿದರೆ ಕನ್ನಡ ಭಾಷೆ ಉಳಿದಂತೆ. ಮುಂದಿನ ದಿನಗಳಲ್ಲಿ ಕನ್ನಡದಲ್ಲಿ 125 ಕ್ಕೆ 125 ಅಂಕ ಪಡೆದ ಮಕ್ಕಳಿಗೆ ಕಸಾಪದಿಂದ ಸನ್ಮಾನಿಸಲಾಗುವುದು. ಜನವರಿ ತಿಂಗಳಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದರು.
ತಹಸೀಲ್ದಾರ್ ತನುಜಾ ಟಿ.ಸವದತ್ತಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ಕಾವ್ಯಕ್ಕೆ ವಿಶ್ವ ಸಾಹಿತ್ಯದಲ್ಲಿ ಒಂದು ಸ್ಥಾನ ದೊರಕಿಸಿ ಕೊಟ್ಟವರು 12 ನೇ ಶತಮಾನದ ಬಸವಾದಿ ಶರಣರು. ಅವರ ವಚನ ಸಾಹಿತ್ಯ ಜಗದ್ವಿಖ್ಯಾತ ವಿನೂತನ ಸಾಹಿತ್ಯ ಪ್ರಾಕಾರವಾಗಿ ಕನ್ನಡದ ಶ್ರೀಮಂತಿಕೆಗೂ ಕಾರಣವಾಯಿತು ಎಂದರು.
ಪಪಂ ಅಧ್ಯಕ್ಷೆ ಸುರೈಯಾಭಾನು, ಮುಖ್ಯ ಅತಿಥಿಗಳಾಗಿ ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯನಂಜುಂಡ ಸ್ವಾಮಿ, ಕರವೇ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಶ್ರೀನಿವಾಸ್, ಪಪಂ ಸದಸ್ಯರಾದ ಜುಬೇದ, ಮುನಾವರ್ ಪಾಷಾ, ಮುಕಂದ, ವಾಸೀಂ, ಪಪಂ ನಾಮಿನಿ ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪಾ, ಎಪಿಎಂಸಿ ನಿರ್ದೇಶಕ ಎಚ್.ಎಂ.ಶಿವಣ್ಣ, ತಾ.ಬಗರ್ ಹುಕಂ ಸಮಿತಿ ಅಧ್ಯಕ್ಷ ಇ.ಸಿ,ಜೋಯಿ, ಡಿಎಸ್‌ಎಸ್ ಮುಖಂಡರಾದ ವಾಲ್ಮೀಕಿ ಶ್ರೀನಿವಾಸ್, ಡಿ.ರಾಮು, ಭವಾನಿ, ಶೆಟ್ಟಿಕೊಪ್ಪ ಮಹೇಶ್, ಭದ್ರಾ ಸಹಕಾರ ಸಂಘದ ಉಪಾಧ್ಯಕ್ಷ ಬಿಳಾಲುಮನೆ ಉಪೇಂದ್ರ ಮತ್ತಿತರರು ಇದ್ದರು.