ಕನ್ನಡ ಪ್ರಭ ವಾರ್ತೆ ಕಮಲಾಪುರಕನ್ನಡವು ಸಾಹಿತಿಗಳಿಂದ ಉಳಿಯಲು ಸಾಧ್ಯವಿಲ್ಲ. ಕನ್ನಡ ಉಳಿಯುವುದು ಜನಸಾಮಾನ್ಯರು ಕನ್ನಡ ಆಡುವುದರಿಂದ, ಕನ್ನಡ ಪುಸ್ತಕ, ಕನ್ನಡ ದಿನಪತ್ರಿಕೆ ಓದುವುದರಿಂದ ಎಂದು ಸಾಹಿತಿ ಡಾ. ಕಲ್ಯಾಣರಾವ್ ಪಾಟೀಲ್ ಹೇಳಿದರು.ಪಟ್ಟಣದ ತಸಿಲ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಧ್ವಜಾರೋಹಣ ನೆರವೇರಿಸಿ ಕನ್ನಡ ಸಾಹಿತಿಗಳಿಗೆ ಸನ್ಮಾನಿಸಿ ಹಾಗೂ ಶಾಲಾ ಕಾಲೇಜು ಮಕ್ಕಳಿಗೆ ವಿವಿಧ ಕ್ರೀಡೆಯ ಸ್ಪರ್ಧೆಯಲ್ಲಿ ಸ್ಪರ್ಧಿಸಿದ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
1347ರಲ್ಲಿ ಹಸನಗಂಗಾ ಬಹಮನಿ ಹೋಗಿ, 1948 ಸೆಪ್ಟೆಂಬರ್ 17 ವರೆಗೆ ಕನ್ನಡ ಆಡಳಿತದಲ್ಲಿ ಕನ್ನಡ ಶಿಕ್ಷಣ ವ್ಯವಸ್ಥೆ ಇರಲಿಲ್ಲ. ಆದರೂ ಕನ್ನಡ ಉಳಿದಿದೆ ಎಂದರೆ ಅದಕ್ಕೆ ಜನಸಾಮಾನ್ಯರ ಕಾರಣ ಎಂದರು.ಭಾಷಣ ಮಾಡುವುದರಿಂದ ಕನ್ನಡ ಉಳಿಯುವುದಿಲ್ಲ. ಪುಸ್ತಕ ಬರೆಯುವುದರಿಂದ ಕನ್ನಡ ಉಳಿಯುವುದಿಲ್ಲ. ನಮ್ಮ ಹೃದಯದಲ್ಲಿ ಕನ್ನಡ ಉಳಿಯಬೇಕಾದರೆ ನಮ್ಮ ಅನ್ನದ ಭಾಷೆಯಾಗಬೇಕಾಗಿದೆ. ಕನ್ನಡ ನಮ್ಮ ಬದುಕಿಗೆ ಭಾಷೆ ಆಗಬೇಕು. ಕನ್ನಡ ನಮ್ಮ ಜೀವನಕ್ಕೆ ಒಂದು ಪ್ರೇರಣೆ ಕೊಡುವ ಭಾಷೆ ಆಗಬೇಕು. ಆಗ ಮಾತ್ರ ಕನ್ನಡ ಉಳಿಸಲು ಬೆಳೆಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ಕನ್ನಡ ಭಾಷೆ ಮರೆತರೆ ನಮ್ಮ ಹೆತ್ತ ತಾಯಿಯನ್ನೇ ಮರೆತಂತೆ ಹಾಗಾಗಿ ಕನ್ನಡ ನಮ್ಮ ಭಾಷೆ, ನಮಗೆ ಹೆಮ್ಮೆ ಇರಬೇಕು. ಹಾಗೂ ಇವತ್ತು ಚಿನ್ನ ಕೂಡ ನಮ್ಮ ಕನ್ನಡ ನಾಡಿನ ಕೋಲಾರ ಜಿಲ್ಲೆಯಲ್ಲಿ ಸಿಗುವುದು ನಮ್ಮ ಹೆಮ್ಮೆಯ ವಿಷಯವಾಗಿದೆ ಎಂದರು.ತಹಸಿಲ್ದಾರ್ ಮುಸಿನ್ ಅಹಮದ್, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶಾಂತಪ್ಪ ಹಾದಿಮನಿ, ತಾಪಂ ಇಓ ನೀಲಗಂಗಾ ಬಬಲಾದ, ಪಿಎಸ್ಐ ಸಂಗೀತ ಸಿಂಧೆ, ಖಜಾನ ಅಧಿಕಾರಿ ಸವಿತಾ ಚೌಹಾನ್, ಗ್ರೇಟ್ 2 ತಹಸೀಲ್ದಾರ್ ಶಿವಕುಮಾರ, ಜೆಸ್ಕಾಂ ಅಧಿಕಾರಿ ಅರವಿಂದ್ ದೊಮ್ಮಣಿ, ಡಾ. ಅಂಬಿಕಾ ಸಿಂಧನಕೇರ, ಡಾ. ಜ್ಯೋತಿರ್ಮೈ ಕಡಿಕೆ, ಡಾ. ರಾಜಕುಮಾರ ಮಾಳಗೆ, ಡಾ. ಶಿವಕುಮಾರ ಹಾಲಪ್ಪ, ಡಾ. ಶಿವರಾಜ ಶಾಸ್ತ್ರಿ, ಡಾ. ಶರಣಬಸಪ್ಪ ವಡ್ಡನಕೇರಿ, ಶಿಕ್ಷಕರ ಸಂಘದ ಅಧ್ಯಕ್ಷ ಪರಮೆಶ್ವರ ಓಕಳಿ, ಅಮರ್ ಚಿಕ್ಕೆಗೌಡ, ಶಿವಕುಮಾರ ದೋಸೆಟ್ಟಿ, ಮಹೇಶ ಹಾಲು, ಅಶೋಕ ಗೌರೆ, ರಘುನಂದನ ದ್ಯಾಮಣಿ, ಶರಣು ಜಾಲಳಿ ಇದ್ದರು.