ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡದ ಪ್ರಾಚೀನ ಹಲ್ಮಿಡಿ ಶಾಸನದಿಂದ ಇಲ್ಲಿಯವರೆಗೆ ಇತಿಹಾಸವಿದೆ. ಪ್ರಸ್ತುತ ಆಧುನಿಕ ಸಾಹಿತಿಗಳು ಸಾವಿರಾರು ಕೃತಿಗಳನ್ನು ರಚಿಸಿದ್ದಾರೆ. ಅಲ್ಲಿರುವ ಚಿಂತನೆಗಳು, ಕನ್ನಡ ಭಾಷಾ ಅಸ್ಮಿತೆ, ಅಭಿಮಾನ ಅಗತ್ಯವಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಹೇಳಿದರು.ತಾಲೂಕು ಆಡಳಿತ, ಕಸಾಪ ತಾಲೂಕು ಘಟಕ ಹಾಗೂ ಭಂಡಾರಿ ಮತ್ತು ರಾಠಿ ಪದವಿ ಕಾಲೇಜುಗಳ ಆಶ್ರಯದಲ್ಲಿ ಶನಿವಾರ ಜರುಗಿದ ನುಡಿಹಬ್ಬ- 2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನಾಡು, ನುಡಿ, ಜಲದ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು. ಕನ್ನಡದಲ್ಲೇ ವ್ಯವಹರಿಸಿ, ಮಾತನಾಡುವ ಮೂಲಕ ಕನ್ನಡ ಅಸ್ಮಿತೆಗೆ ಧಕ್ಕೆ ಬರದಂತೆ ನಾವೆಲ್ಲರೂ ನೋಡಿಕೊಳ್ಳಬೇಕಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಉತ್ತರ ಕರ್ನಾಟಕದ ಉಸಿರಾಗಿದೆ. ಯೋಜನೆ ಸಂಪೂರ್ಣ ಅನುಷ್ಠಾನಕ್ಕೆ ನಾವೆಲ್ಲ ಒಂದಾಗಬೇಕಾಗಿದೆ ಎಂದು ಹೇಳಿದರು.
ಪಿಇ ಟ್ರಸ್ಟಿನ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ ಮಾತನಾಡಿ, ಕನ್ನಡ ಭಾಷೆಯ ಪರಂಪರೆ ಶ್ರೇಷ್ಠವಾಗಿದೆ. ಕಸಾಪ ಉತ್ತಮ ಕೆಲಸ ಮಾಡುತ್ತಿದೆ. ನಮ್ಮ ಸಂಸ್ಥೆ ಕನ್ನಡ ಕೆಲಸಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತದೆ ಎಂದು ಹೇಳಿದರು.ಕೃಷಿ ಅಧಿಕಾರಿ ಆನಂದಗೌಡ ಗೌಡರ ಮಾತನಾಡಿದರು, ನುಡಿಹಬ್ಬದ ಸಂಚಾಲಕ ಡಾ. ಸಿ.ಎಂ,ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಲಯ ಸಾಮಾಜಿಕ ಅರಣ್ಯಾಧಿಕಾರಿ ಎಸ್.ಬಿ.ಪೂಜಾರಿ, ಡಾ.ಪಿ.ಎಸ್.ಪಾಟೀಲ ಉಪಸ್ಥಿತರಿದ್ದರು. ಡಾ.ಸಣ್ಣವೀರಣ್ಣ ದೊಡ್ಡಮನಿ ಸಮಾರೋಪದ ನುಡಿಗಳಾಡಿದರು. ಉಪನ್ಯಾಸ ಮಾಲಿಕೆಯಲ್ಲಿ ಉಪನ್ಯಾಸ ನೀಡಿದ ಸಂಪನ್ಮೂಲ ವ್ಯಕ್ತಿಗಳಿಗೆ, ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿಪತ್ರ ವಿತರಣೆ, ತಾಲೂಕಿನ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳ ತಂಡಗಳಿಂದ ಕನ್ನಡ ಹಾಡುಗಳಿಗೆ ನೃತ್ಯ ಏರ್ಪಡಿಸಲಾಗಿತ್ತು.ಸ್ಪರ್ಧೆಯ ವಿಜೇತ ತಂಡಗಳಿಗೆ ಇದೇ ಸಂದರ್ಭದಲ್ಲಿ ಹನಮಂತ ಮಾವಿನಮರದ ವೈಯಕ್ತಿಕ ನಗದು ಬಹುಮಾನ ನೀಡಿ ಗೌರವಿಸಿದರು. ರಾಠಿ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಚೇರ್ಮನ್ ಅಶೋಕ ಹೆಗಡೆ, ಡಾ.ಬಸವರಾಜ ಚವಡಿ, ಸಂಗಣ್ಣ ಚಿಕ್ಕಾಡಿ, ಶ್ರೀಕಾಂತ ಹುನಗುಂದ, ಈರಣ್ಣ ಅಲದಿ, ಪರಶು ಮಾದರ, ಯಲ್ಲಪ್ಪ ಮನ್ನಿಕಟ್ಟಿ ಕಸಾಪ ತಾಲೂಕಾಧ್ಯಕ್ಷ ಡಾ.ಎಚ್.ಎಸ್.ಘಂಟಿ ಮುಂತಾದವರಿದ್ದರು.