ಕನ್ನಡಪ್ರಭ ವಾರ್ತೆ ರಾಮನಗರ
ಬಿಡದಿ ಸಮೀಪದ ಕಾಡುಮನೆ ವೃತ್ತದಲ್ಲಿ ಕರ್ನಾಟಕ ನವ ನಿರ್ಮಾಣ ಸೇನೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡ ಭಾಷೆಯನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ ಎಂದರು.
ಶಿಲಾಯುಗದ ಕಾಲದಲ್ಲೇ ಕನ್ನಡ ಭಾಷೆ ಜನಿಸಿತ್ತು. ಕನ್ನಡದ ಉಳಿವಿಗಾಗಿ ಹಲವು ಕವಿಗಳು ಸಾಹಿತ್ಯ ಹಾಗೂ ಲೇಖನಗಳ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ. ಬೇರೆ ಭಾಷೆಗಳನ್ನು ತಿರಸ್ಕರಿಸಬೇಕೆಂದಲ್ಲ. ಇಂದಿನ ಆಧುನಿಕ ಯುಗದಲ್ಲಿ ಉದ್ಯೋಗದ ದೃಷ್ಟಿಯಿಂದ ಅನ್ಯ ಭಾಷೆ ಅಗತ್ಯವಾದರೂ, ಪ್ರತಿ ಮನೆಯಲ್ಲೂ ಕನ್ನಡದಲ್ಲಿ ಮಾತನಾಡುವುದು ನಮ್ಮ ನಾಡು– ನುಡಿಯ ಉಳಿವಿಗೆ ಮೊದಲ ಹೆಜ್ಜೆಯಾಗಿದೆ ಎಂದು ತಿಳಿಸಿದರು.ಕರ್ನಾಟಕದ ಪ್ರತಿಯೊಬ್ಬ ಕನ್ನಡಿಗರೂ ಕನ್ನಡದಲ್ಲಿ ಮಾತನಾಡುವುದು. ಕನ್ನಡದಲ್ಲಿ ಬರೆಯುವುದು ಮತ್ತು ಕನ್ನಡ ಗ್ರಂಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಓದುವ ಅಭ್ಯಾಸ ರೂಢಿಸಿಕೊಂಡಾಗ ಮಾತ್ರ ನಾಡು-ನುಡಿ-ಭಾಷೆ ನಿಜವಾಗಿಯೂ ಬೆಳೆಯಲು ಸಾಧ್ಯ ಎಂದು ಹೇಳಿದರು.
ಕನ್ನಡದ ಭಾಷೆ, ಸಂಸ್ಕೃತಿ ಉಳಿಸಲು ಸರ್ಕಾರವಷ್ಟೇ ಪ್ರಯತ್ನ ಪಟ್ಟರೆ ಸಾಲದು, ಕನ್ನಡಿಗರಾದ ನಾವು ನಮ್ಮ ಕನ್ನಡ ಭಾಷೆ, ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕಿದೆ. ಮನೆಯಲ್ಲಿ ದಿನನಿತ್ಯ ಕನ್ನಡದಲ್ಲಿ ಮಾತನಾಡುವ ಮೂಲಕ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದರು.ಕೇವಲ ನವೆಂಬರ್ ತಿಂಗಳಲ್ಲಿ ರಾಜ್ಯೋತ್ಸವ ಮಾಡಿ ಮುಗಿಸಿದರೆ ಕನ್ನಡ ಭಾಷೆ ಅಭಿಯಾನವಾಗುವುದಿಲ್ಲ. ಕನ್ನಡ ಪುಸ್ತಕ ಮತ್ತು ದಿನ ಪತ್ರಿಕೆಗಳನ್ನು ಓದುವ ಮೂಲಕ ಭಾಷೆಯ ಅಭಿವೃದ್ಧಿಗೆ ಮುಂದಾಗಬೇಕು ಎಂದು ಗಿರೀಶ್ ಹೇಳಿದರು.
ಕರುನಾಡ ಸೇನೆ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಎಂ.ಜಗದೀಶ್ ಮಾತನಾಡಿ, ಕನ್ನಡಿಗರಿಗೆ ಕರ್ನಾಟಕದಲ್ಲಿ ಉದ್ಯೋಗಾವಕಾಶಗಳಲ್ಲಿ ಅನ್ಯಾಯ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಮಕೃಷ್ಣ ಹೆಗಡೆರವರು ಮುಖ್ಯಮಂತ್ರಿಯಾಗಿದ್ದಾಗ ಸರೋಜಿನಿ ಮಹಿಷಿ ನೇತೃತ್ವದಲ್ಲಿ ರಚಿಸಿದ್ದ ಸಮಿತಿಯು ಕನ್ನಡಿಗರಿಗೆ ಉದ್ಯೋಗದಲ್ಲಿ ನ್ಯಾಯವಾದ ಪಾಲು ನೀಡಬೇಕೆಂದು ಹಲವು ಶಿಫಾರಸ್ಸುಗಳನ್ನು ನೀಡಿದೆ. ರಾಜ್ಯ ಸರ್ಕಾರ ಕೂಡಲೇ ಮಹಿಷಿ ವರದಿ ಅನುಷ್ಠಾನ ಮಾಡಬೇಕು ಎಂದು ಒತ್ತಾಯಿಸಿದರು.ಕನ್ನಡ ನೆಲ, ಜಲ, ಭಾಷೆಗಾಗಿ ಅನೇಕ ಮಹಾನೀಯರು ತ್ಯಾಗ, ಬಲಿದಾನ ಮಾಡಿದ್ದಾರೆ. ಕನ್ನಡದ ವಿಚಾರ ಬಂದಾಗ ಎಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕು. ಈಗ ನಾಮಫಲಕದಲ್ಲಿ ಕನ್ನಡ ಕಡ್ಡಾಯವಾಗಿ ಬಳಕೆ ಮಾಡಬೇಕೆಂದು ಅಭಿಯಾನ ಆರಂಭಿಸಿದ್ದೇವೆ. ನಾಮಫಲಕದಲ್ಲಿ ಶೇಕಡ 60ರಷ್ಟು ಕನ್ನಡ ಕಡ್ಡಾಯವಾಗಿ, ಉಳಿದ ಶೇಕಡ 40ರಷ್ಟು ವ್ಯವಹಾರಿಕ ಭಾಷೆ ಬಳಸಬೇಕು . ಇಲ್ಲದಿದ್ದರೆ ಅಂತಹ ನಾಮಫಲಕಗಳಿಗೆ ಮಸಿ ಬಳಿಯಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪತ್ರಿಕಾ ವಿತರಕ ನಂಜುಂಡಯ್ಯ, ಗ್ರಾಪಂ ಅಧ್ಯಕ್ಷೆ ಪವಿತ್ರ ಬಸವರಾಜು, ಹಿರಿಯರಾದ ದೇವರಾವ್ ಅವರನ್ನು ಸನ್ಮಾನಿಸಲಾಯಿತು.ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ನಾರಾಯಣ ಗೌಡ, ಅಧ್ಯಕ್ಷ ಚಂದ್ರುಗೌಡ, ಗೌರವಾಧ್ಯಕ್ಷ ನಾರಾಯಣಸ್ವಾಮಿ, ಪದಾಧಿಕಾರಿಗಳಾದ ಚಂದ್ರು, ಸ್ವಾಮಿ, ಸುರೇಶ್ ಬಾಬು,ಚಂದ್ರಶೇಖರ್ , ಕನ್ನಡ ಮಂಜು, ರಾಜೇಶ್ ಬಾನಂದೂರು ,ನಂದೀಶ್ , ಸಚಿನ್, ಸಂದೀಪ್ ಮಹೇಶ್, ಸುರೇಶ್. ನಾರಾಯಣಸ್ವಾಮಿ,ನಾರಾಯಣ್, ಗಂಗಾಧರ್, ಕುಮಾರ್ ವಿಜಯ್, ಕುಮಾರ್, ಭಾಗ್ಯ ಸುಧಾ, ಅರ್ಜುನ್ ಮತ್ತಿತರರು ಉಪಸ್ಥಿತರಿದ್ದರು.