ಹಳ್ಳಿ ಹಕ್ಕಿ- ಎಚ್. ವಿಶ್ವನಾಥ್‌ ಅವರ ಸಾಹಿತ್ಯ ಮತ್ತು ರಾಜಕಾರಣದ ವಿಮರ್ಶೆ

KannadaprabhaNewsNetwork | Published : Feb 24, 2024 2:32 AM

ಸಾರಾಂಶ

ಎಂ. ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲಿ ಕನ್ನಡ ಮತ್ತು ಸಂಸ್ಕೃತಿ, ಯುವಜನ ಸೇವೆ ಮತ್ತು ಕ್ರೀಡೆ, ಅರಣ್ಯ ಖಾತೆ, ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ, ಸಹಕಾರ ಸಚಿವರಾಗಿ ರಾಜ್ಯದ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳನ್ನು ದಾಖಲಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಪಿರಿಯಾಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಡಾ.ಎನ್. ವಾಸಯ್ಯ ಅವರ ಹಳ್ಳಿ ಹಕ್ಕಿ ಕೃತಿಯು ಎಚ್. ವಿಶ್ವನಾಥ್‌ ಅವರ ಸಾಹಿತ್ಯ ಮತ್ತು ರಾಜಕಾರಣ ಕುರಿತ ವಿಮರ್ಶಾ ಲೇಖನಗಳ ಸಂಗ್ರಹವಾಗಿದೆ. ಮೈಸೂರಿನ ತಾರಾ ಪ್ರಿಂಟ್ಸ್‌ ಈ ಕೃತಿಯನ್ನು ಪ್ರಕಟಿಸಿದೆ.

ವಿಶ್ವನಾಥ್‌ ಅವರ ಜೀವನ, ರಾಜಕೀಯ ಪ್ರವೇಶದ ಹಿನ್ನೆಲೆ, ಕೆ.ಆರ್. ನಗರದಿಂದ ಮೂರು ಬಾರಿ, ಹುಣಸೂರಿನಿಂದ ಒಂದು ಬಾರಿ ವಿಧಾನಸಭಾ ಸದಸ್ಯರು, ಮೈಸೂರಿನಿಂದ ಒಮ್ಮೆ ಲೋಕಸಭಾ ಸದಸ್ಯರು, ಪ್ರಸ್ತುತ ವಿಧಾನ ಪರಿಷತ್‌ ನಾಮನಿರ್ದೇಶಿತ ಸದಸ್ಯರಾದ ರಾಜಕೀಯ ಬೆಳವಣಿಗೆಯ ಇತಿಹಾಸದ ವಿವರ ಇದೆ.

ಎಂ. ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲಿ ಕನ್ನಡ ಮತ್ತು ಸಂಸ್ಕೃತಿ, ಯುವಜನ ಸೇವೆ ಮತ್ತು ಕ್ರೀಡೆ, ಅರಣ್ಯ ಖಾತೆ, ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ, ಸಹಕಾರ ಸಚಿವರಾಗಿ ರಾಜ್ಯದ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳನ್ನು ದಾಖಲಿಸಲಾಗಿದೆ. ಈ ಪೈಕಿ ಮಧ್ಯಾಹ್ನದ ಬಿಸಿಯೂಟ ಯೋಜನೆ, ಮಾಹಿತಿ ಸಿಂಧು, ಪೂರಕ ಪರೀಕ್ಷೆಗಳ ಜಾರಿ, ಚೈತನ್ಯ ಕಾರ್ಯಕ್ರಮ, ಉತ್ತರ ಕರ್ನಾಟಕ ಭಾಗದಲ್ಲಿ ಶಿಕ್ಷಣಕ್ಕೆ ಒತ್ತು, ಉದ್ಯೋಗ ನೇಮಕಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಜಾರಿ, ಬೆಂಗಳೂರಿನ ಕೋರಮಂಗಲ, ಬಿಜಾಪುರದ ಕ್ರೀಡಾಂಗಣಗಳ ಅಭಿವೃದ್ಧಿ, ವನ ಹಾಗೂ ಜಲ ಸಂರಕ್ಷಣೆ, ಗಿರಿಜನರ ಅಭಿವೃದ್ಧಿ, ರಾಜ್ಯದಲ್ಲಿ ಆಡಳಿತ ಭಾಷೆಯಾಗಿ ಕನ್ನಡ, ಕನ್ನಡ ಮತ್ತು ಸಂಸ್ಕೃತಿಗೆ ಪ್ರತ್ಯೇಕ ಸಚಿವಾಲಯ. ರೈತರ ಆರೋಗ್ಯ ಕಲ್ಯಾಣಕ್ಕಾಗಿ ಯಶಸ್ವಿನಿ ಯೋಜನೆ ಜಾರಿ, ಸಹಕಾರ ರತ್ನ ಪ್ರಶಸ್ತಿ ಸ್ಥಾಪನೆ ಪ್ರಸ್ತಾಪಿಸಲಾಗಿದೆ.

ಸಾಹಿತ್ಯದ ಸ್ವರೂಪ ಮತ್ತು ವೈವಿಧ್ಯತೆಯಲ್ಲಿ ಹಳ್ಳಿ ಹಕ್ಕಿಯ ಹಾಡು- ಆತ್ಮಕಥೆ, ಮತ ಸಂತೆ- ಪ್ರಬಂಧ, ದಿ ಟಾಕಿಂಗ್‌ ಶಾಪ್- ಪ್ರವಾಸ ಕಥನ, ಅಪತ್‌ ಸ್ಥಿತಿಯ ಆಲಾಪಗಳು- ಪ್ರಬಂಧ, ಅಥೇನ್ಸ್‌ ರಾಜ್ಯಾಡಳಿತ- ಪ್ರವಾಸ ಕಥನ, ಮಲ್ಲಿಗೆಯ ಮಾತು- ಬಿಡಿ ಬರಹಗಳು ಕುರಿತು ವಿಮರ್ಶಿಸಲಾಗಿದೆ.

ಸಾಹಿತ್ಯದಲ್ಲಿ ಅಭಿವೃದ್ಧಿ ಮತ್ತು ರಾಜಕಾರಣ ಮುಖಾಮುಖಿಯಲ್ಲಿ ಇಂದಿರಾಗಾಂಧಿ ಅವರ ಪ್ರಭಾವ, ಡಿ. ದೇವರಾಜ ಅರಸು ಅವರ ಶಿಷ್ಯ, ಸಮಕಾಲೀನ ರಾಜಕಾರಣಿಗಳ ನಡುವಿನ ಒಡನಾಟ, ಬಾಂಧವ್ಯಗಳು, ಗುಂಡೂರಾವ್, ಕೆಂಗಲ್‌ ಹನುಮಂತಯ್ಯ, ಬಿ. ಬಸವಲಿಂಗಪ್ಪ, ಜೆ.ಎಚ್. ಪಟೇಲ್, ಎಸ್.ಎಂ. ಕೃಷ್ಣ, ಎಂ. ವೀರಪ್ಪ ಮೊಯ್ಲಿ ಅವರೊಂದಿಗೆ ಸಂಬಂಧವನ್ನು ಮೆಲಕು ಹಾಕಲಾಗಿದೆ.

ಇಂಗ್ಲೆಂಡ್‌ ಮತ್ತು ಭಾರತದ ಸಂಸದೀಯ ವ್ಯವಸ್ಥೆಗಳ ತೌನಿಕ ಅಧ್ಯಯನ, ರಾಜಕಾರಣದ ರಚನಾತ್ಮಕ ಅದ್ಯಯನದ ತಾತ್ವಿಕತೆ, ಭಾರತದಲ್ಲಿ ತುರ್ತು ಪರಿಸ್ಥಿತಿ- ದೇಶದ ಅಭಿವೃದ್ಧಿಯ ತಂತ್ರಾವಲೋಕನ, ಡಿ. ದೇವರಾಜ ಅರಸು ಅವರ ಅಭಿವೃದ್ಧಿ ಚಿಂತನೆಗಳ ಬಗ್ಗೆ ಚರ್ಚಿಸಲಾಗಿದೆ.

ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿ, ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರದ ಹಣ ಪೋಲು, ದಲಿತರ ಬಡಾವಣೆಗಳಲ್ಲಿ ಇಂಗ್ಲಿಷ್‌ ಶಾಲೆ, ಉಡುಪಿಯ ಕನಕ ಗೋಪುರ ವಿವಾದ ಕುರಿತ ವಿಶ್ವನಾಥ್‌ ಅವರ ಆಡಳಿತದ ನೀತಿ ನಿರ್ಧಾರಗಳು ಹಾಗೂ ಬಂಡಾಯ ನಿಲುವುಗಳನ್ನು ಕೂಡ ದಾಖಲಿಸಲಾಗಿದೆ.

ವಿಶ್ವನಾಥ್‌ ಅವರ ಸಾಹಿತ್ಯದಲ್ಲಿ ಸಮಕಾಲೀನ ರಾಜಕಾರಣ ಮತ್ತು ನೈತಿಕ ಗುಣಗಳು, ಸಾಹಿತ್ಯದ ಭಾಷೆ ಮತ್ತು ಶೈಲಿಯನ್ನು ಕೂಡ ವಿಮರ್ಶಿಸಲಾಗಿದೆ.

ಒಟ್ಟಾರೆ ವಿಶ್ವನಾಥ್‌ ಅವರ ಈವರೆಗಿನ ರಾಜಕಾರಣ, ಸಾಹಿತ್ಯ ಕುರಿತ ಸಂಪೂರ್ಣ ವಿಮರ್ಶಾ ನೋಟ ಈ ಕೃತಿಯಲ್ಲಿದೆ. ವೃತ್ತಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ಎನ್. ವಾಸಯ್ಯ ಅವರು ತಮ್ಮ ಸಂಶೋಧನಾತ್ಮಕ ದೃಷ್ಟಿಕೋನದಿಂದಲೇ ಈ ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ.

Share this article