ಬೆಳದಿಂಗಳಂತೆ ಬದುಕನ್ನು ಬೆಳಗಬಲ್ಲದು ಕನ್ನಡ ಸಾಹಿತ್ಯ

KannadaprabhaNewsNetwork |  
Published : May 12, 2026, 03:15 AM IST
ಬೆಳಗಾವಿ  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಕನ್ನಡ ಸಾಹಿತ್ಯ-ಸಂಸ್ಕೃತಿ ಜಗತ್ತಿನ ಯಾವ ಭಾಷೆಗೂ ಕಡಿಮೆ ಇಲ್ಲ. ಅದರಲ್ಲಿ ಎಲ್ಲವೂ ಇದೆ. ಅದು ಬೆಳದಿಂಗಳಂತೆ ನಮ್ಮ ಬದುಕನ್ನು ಬೆಳಗಬಲ್ಲದು ಎಂದು ಸಾಹಿತಿ ಡಾ.ಬಸವರಾಜ ಜಗಜಂಪಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕನ್ನಡ ಸಾಹಿತ್ಯ-ಸಂಸ್ಕೃತಿ ಜಗತ್ತಿನ ಯಾವ ಭಾಷೆಗೂ ಕಡಿಮೆ ಇಲ್ಲ. ಅದರಲ್ಲಿ ಎಲ್ಲವೂ ಇದೆ. ಅದು ಬೆಳದಿಂಗಳಂತೆ ನಮ್ಮ ಬದುಕನ್ನು ಬೆಳಗಬಲ್ಲದು ಎಂದು ಸಾಹಿತಿ ಡಾ.ಬಸವರಾಜ ಜಗಜಂಪಿ ಅಭಿಪ್ರಾಯಪಟ್ಟರು.

ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಕನ್ನಡ ಬಳಗದಿಂದ ಶನಿವಾರ ಕನ್ನಡ ಸೌರಭ ಎಂಬ ಪರಿಕಲ್ಪನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಕನ್ನಡ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯಕ್ಕೆ ಹಿರಿದಾದ ಇತಿಹಾಸವಿದೆ. ನಮ್ಮ ಸಂಸ್ಕೃತಿಯ ಸಾರ ಜನಪದ ಕಾವ್ಯದಲ್ಲಿದೆ. ಜಾನಪದವು ನಮ್ಮ ಬದುಕಿನ ಮೂಲ ಧಾತು. ಜಾಗತಿಕ ಭರಾಟೆಯಲ್ಲಿ ನಮ್ಮ ಜನಪದ ಸಂಸ್ಕೃತಿಯು ಅಳಿವಿನಂಚಿನಲ್ಲಿದೆ. ಅದನ್ನು ಉಳಿಸಿ ಮುಂದಿನ ಜನಾಂಗಕ್ಕೆ ವರ್ಗಾಯಿಸುವ ಬಹು ದೊಡ್ಡ ಜವಾಬ್ದಾರಿ ನಮ್ಮ ಇಂದಿನ ಪೀಳಿಗೆ ಮೇಲಿದೆ ಎಂದು ಹೇಳಿದರು.ಭಾಷೆಗೆ ಶಕ್ತಿ ತುಂಬ ಬೇಕು. ಭಾಷೆ ಬಳಸದೇ ಇದ್ದರೆ ಭಾಷೆ ಬೆಳೆಯಲು ಸಾಧ್ಯವಿಲ್ಲ. ನಾವು ಎಷ್ಟು ಭಾಷೆಯನ್ನಾದರೂ ಕಲಿಯೋಣ. ಆದರೆ ನಮ್ಮ ಮನೆಯಲ್ಲಿ, ನಮ್ಮ ನಾಡಿನಲ್ಲಿ ಕನ್ನಡ ವಾತಾವರಣ ಸದಾ ಹಚ್ಚ ಹಸುರಾಗಿರಬೇಕು. ಅದು ನಮ್ಮ ಆತ್ಮಗೌರವದ ಸಂಕೇತ. ಅದಕ್ಕೆ ಧಕ್ಕೆಯಾದರೆ ನಮ್ಮ ಆತ್ಮ ಗೌರವಕ್ಕೆ ಧಕ್ಕೆಯಾಗದಂತೆ. ನಮ್ಮ ಹಿರಿಯರು ಭಾಷೆಯ ಮೂಲಕ ನಮ್ಮ ಸಾಂಸ್ಕೃತಿಕ ಸಂಪತ್ತನ್ನು ಕೊಟ್ಟಿದ್ದಾರೆ. ಅದನ್ನು ಜೋಪಾನವಾಗಿ ಸಂರಕ್ಷಿಸೋಣ. ನಮ್ಮಿಂದ ಕನ್ನಡಕ್ಕೆ ಏನೂ ಆಗುವುದಿಲ್ಲ. ಆದರೆ ಕನ್ನಡದಿಂದ ನಮ್ಮ ಗೌರವ ಹೆಚ್ಚುತ್ತದೆ. ಗಡಿಭಾಗದಲ್ಲಿ ಇಂಥ ಕಾರ್ಯಕ್ರಮಗಳು ಕನ್ನಡದ ಬೇರುಗಳನ್ನು ಗಟ್ಟಿಗೊಳಿಸುತ್ತವೆ ಎಂದರು.

ಮಹಾವಿದ್ಯಾಲಯದ ಉಪಪ್ರಾಚಾರ್ಯ ಡಾ.ಅರ್ಜುನ ಜಂಬಗಿ ಕನ್ನಡ ನಾಡು , ನುಡಿ ಸಂಸ್ಕೃತಿ ಬೆಳೆಸಬೇಕು. ಅದರಿಂದ ನಮ್ಮತನ ಉಳಿಯುತ್ತದೆ. ಕನ್ನಡ ಸಾಹಿತ್ಯದ ಸೌರಭ ಜಗತ್ತಿನ ಎಲ್ಲೆಡೆ ಪಸರಿಸಿದೆ. ಕನ್ನಡ ಉಳಿಸಿದರೆ ಕನ್ನಡ ನಮ್ಮನ್ನು ಉಳಿಸುತ್ತದೆ. ಕನ್ನಡದ ಕಾರ್ಯಕ್ರಮಕ್ಕೆ ನಮ್ಮ ಮಹಾವಿದ್ಯಾಲಯ ಸದಾ ಪ್ರೋತ್ಸಾಹಿಸುತ್ತದೆ. ನಿರಂತರವಾಗಿ ನಮ್ಮ ವಿದ್ಯಾರ್ಥಿಗಳು ಕನ್ನಡವನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅದು ವಿರ್ದ್ಯಾರ್ಥಿಗಳೇ ಸ್ವ-ಇಚ್ಛೆಯಿಂದ ಈ ಕಾರ್ಯಕ್ರಮ ಮಾಡಿರುವುದರಿಂದ ಅವರಲ್ಲಿರುವ ಕನ್ನಡ ಪ್ರೇಮ ಇನ್ನಷ್ಟು ಜಾಗೃತವಾಗಿದೆ. ಗಡಿ ಭಾಗದಲ್ಲಿ ಇಂತಹ ಕನ್ನಡ ಕಾರ್ಯಕ್ರಮದ ಅವಶ್ಯಕತೆಯಿದೆ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪಿ.ನಾಗರಾಜ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಕಾಲೇಜಿನ ಐಕ್ಯೂಎಸಿ ಸಂಯೋಜಕ ಡಾ. ಮುಕುಂದ ಮುಂಡರಗಿ, ವಿದ್ಯಾರ್ಥಿಗಳ ಪ್ರತಿನಿಧಿಗಳಾದ ನಾಗಲಿಂಗ ಕಂಬಾರ, ಮೇಘ ಪಾಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಕನ್ನಡ ಹಾಡುಗಳನ್ನು ಹಾಡಿ ನೃತ್ಯ ಮಾಡಿ ಸಂಭ್ರಮಿಸಿದರು. ಜಾನಪದದ ವಿವಿಧ ಪ್ರಾಕಾರಗಳ ಕುಣಿತ, ಯಕ್ಷಗಾನ, ಜಾನಪದ ಗೀತೆಗಳನ್ನು ಹಾಡುವುದರ ಮೂಲಕ ಕನ್ನಡ ವಾತಾವರಣ ಸೃಷ್ಟಿಸಿದರು.

ವಿದ್ಯಾರ್ಥಿನಿಯರಾದ ಸೃಷ್ಟಿ ಬಸ್ತವಾಡ ಸ್ವಾಗತಿಸಿದರು, ಪ್ರಿಯಾಂಕ ತಿಲಗಾರ ಪ್ರಾರ್ಥಿಸಿದರು, ಸುನಿತಾ ಕೊಳವಿ ನಿರೂಪಿಸಿದರು, ಹರ್ಷಿತಾ ಮರಳಿ ವಂದಿಸಿದರು, ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆತ್ಮ ವಿಶ್ವಾಸದಿಂದ ಜೀವನ ರೂಪಿಸಿಕೊಳ್ಳಿ
ಮಹಾನ್ ಪುರುಷರನ್ನು ಜಾತಿಗೆ ಸೀಮಿತಗೊಳಿಸಬೇಡಿ