ಲಕ್ಷ್ಮೇಶ್ವರ: ಕನ್ನಡ ಸಾಹಿತ್ಯ ಅತ್ಯಂತ ಉತ್ಕೃಷ್ಟ ಸಾಹಿತ್ಯವಾಗಿದೆ. ಕನ್ನಡ ಭಾಷೆಯ ಸೊಗಡು ಎಲ್ಲ ಭಾಷೆಗಳಿಗಿಂತ ಭಿನ್ನವಾಗಿ ಮಧುರವಾಗಿದೆ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಕನ್ನಡ ಸಾಹಿತ್ಯವು ರಾಘವಾಂಕ, ಪಂಪ, ಹರಿಹರ, ಕುಮಾರವ್ಯಾಸ, ನಯಸೇನ, ರನ್ನ, ಷಡಕ್ಷರಿ, ಪೊನ್ನ, ಜನ್ನ, ಮಧುಸೂದನ, ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಅತ್ತಿಮಬ್ಬೆ, ಬಸವಣ್ಣ, ಅಕ್ಕಮಹಾದೇವಿ ಸೇರಿದಂತೆ ವಿವಿಧ ಕಾಲಘಟ್ಟಗಳಲ್ಲಿ ಕನ್ನಡ ಭಾಷೆಯು ಅಮೋಘವಾಗಿ ಬೆಳೆಯುವ ಮೂಲಕ ನಾಡಿಗೆ ಉತ್ತಮ ಹಾಗೂ ಎಂದೂ ಮರೆಯದ ಸಾಹಿತ್ಯ ನೀಡಿರುವ ಹೆಮ್ಮೆ ಕನ್ನಡ ಭಾಷೆಗೆ ಇದೆ. ಕನ್ನಡ ಸಾಹಿತ್ಯವು 8 ಜ್ಞಾನಪೀಠ ಪ್ರಶಸ್ತಿ ಪಡೆಯುವ ಮೂಲಕ ದೇಶದ ಸಾಹಿತ್ಯಕ್ಕೆ ಉತ್ಕೃಷ್ಟ ಸಾಹಿತ್ಯದ ನೆಲೆಗಟ್ಟು ಒದಗಿಸಿದೆ. 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಈ ವರ್ಷ ಮಂಡ್ಯದಲ್ಲಿ ನಡೆಯಲಿದ್ದು. ಮಂಡ್ಯದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸೋಣ ಎಂದರು.
ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್ ಮಾತನಾಡಿ, ಕನ್ನಡ ಜ್ಯೋತಿ ರಥವು ಲಕ್ಷ್ಮೇಶ್ವರ ಪಟ್ಟಣಕ್ಕೆ ಆಗಮಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಕನ್ನಡ ಭಾಷಾ ಬೆಳವಣಿಗೆಯಲ್ಲಿ ಲಕ್ಷ್ಮೇಶ್ವರ ತಾಲೂಕಿನ ಕೊಡುಗೆ ಅಪಾರವಾಗಿದೆ ಎಂದರು.ಈ ವೇಳೆ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ತಹಸೀಲ್ದಾರ್ ವಾಸುದೇವ ಸ್ವಾಮಿ, ತಾಪಂ ಇಓ ಕೃಷ್ಣಪ್ಪ ಧರ್ಮರ ಮಾತನಾಡಿದರು.
ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ ಸ್ವಾಗತಿಸಿದರು. ಕನ್ನಡ ತಾಯಿ ಭುವನೇಶ್ವರಿ ರಥದ ಮೆರವಣಿಗೆಯು ಗೊಜನೂರ ಮಾರ್ಗವಾಗಿ ಮಾಗಡಿಯ ಮೂಲಕ ಶಿರಹಟ್ಟಿ ತಾಲೂಕಿನ ಕಡೆಗೆ ಸಾಗಿತು.