ಕನ್ನಡಪ್ರಭ ವಾರ್ತೆ ಮಳವಳ್ಳಿ
ಸರ್ಕಾರದ ಗಮನಕ್ಕೆ ತಂದು ಮೈಕ್ರೋ ಫೈನಾನ್ಸ್ ಹಾವಳಿಯನ್ನು ಸಂಪೂರ್ಣವಾಗಿ ತಡೆಗಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂಭಾಗ ಡಿಸಿಸಿ ಬ್ಯಾಂಕ್ ವ್ಯಾಪ್ತಿಯ ಮಳವಳ್ಳಿ ಶಾಖೆ ಹಾಗೂ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸಹಯೋಗದೊಂದಿಗೆ 128 ಮಹಿಳಾ ಸ್ವ-ಸಹಾಯ ಸಂಘಗಳ ಫಲಾನುಭವಿಗಳಿಗೆ 7.70 ಕೋಟಿ ಸಾಲದ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.
ಪ್ರತಿಯೊಂದು ಹಳ್ಳಿಗಳಲ್ಲಿಯೂ ಮೈಕ್ರೋ ಫೈನಾನ್ಸ್ ಹಾವಳಿ ಮಿತಿ ಮೀರಿದೆ. ಹೆಚ್ಚು ಬಡ್ಡಿ ಕಟ್ಟುತ್ತಿರುವ ಬಡವರ ಬದುಕು ದುಸ್ತರವಾಗಿದೆ. ಗ್ರಾಮೀಣ ಮಹಿಳೆಯರು ಒಗ್ಗಟ್ಟಿನಿಂದ ಹೋರಾಟಕ್ಕೆ ಕೈಜೋಡಿಸಿದರೆ ಇಂಥ ಸಮಸ್ಯೆಯನ್ನು ಬುಡಸಮೇತ ಕಿತ್ತುಹಾಕಬಹುದು ಎಂದರು.ಸರ್ಕಾರ ಸ್ತ್ರೀಶಕ್ತಿ ಸಂಘಗಳ ಮೂಲಕ ಮಹಿಳೆಯರು ಸ್ವಾಭಿಮಾನದ ಜೀವನ ನಡೆಸಲು ಅನುಕೂಲವಾಗುವಂತೆ ಡಿಸಿಸಿ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೀಡುತ್ತಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದು ಕರೆ ನೀಡಿದರು.
ಮೈಕ್ರೋ ಫೈನಾನ್ಸ್ ವಿರುದ್ಧ ಎತ್ತಿರುವ ಧ್ವನಿಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಮುಂದಿನ ದಿನಗಳಲ್ಲಿ ನನ್ನ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ. ಬಡ ಜನರನ್ನು ಶೋಷಣೆ ಮಾಡುತ್ತಿರುವ ಮೈಕ್ರೋ ಫೈನಾನ್ಸ್ ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನನ್ನ ಧ್ವನಿಗೆ ಮಹಿಳೆಯರ ಸಹಕಾರ ಮುಖ್ಯವಾಗಿದೆ. ಸದ್ಯದಲ್ಲಿಯೇ ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.ಸರ್ಕಾರ ಮಹಿಳೆಯರಿಗೆ ಬದುಕಿನ ಹೊಸ ರೂಪ ನೀಡುವ ನಿಟ್ಟಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಪ್ರಮುಖವಾಗಿ ಗ್ರಾಮೀಣ ಜನರು ನೆಮ್ಮದಿ ಜೀವನ ನಡೆಸುವಂತಾಗಲಿ ಎನ್ನುವ ದೃಷ್ಟಿಯಿಂದ ಸರ್ಕಾರ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. ಗೃಹ ಬಳಕೆ ವಸ್ತುಗಳ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಸರ್ಕಾರದಿಂದ ನೆರವು ಸಿಗಲಿದೆ. ಮೈಕ್ರೋ ಫೈನಾನ್ಸ್ ನಿಂದ ದೂರ ಉಳಿಯಬೇಕೆಂದು ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕಿ ವನಜಾಕ್ಷ್ಮಿ, ನಿರ್ದೇಶಕ ಅಶ್ವಿನ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಸಿ.ಪಿ.ರಾಜು, ಕೆಪಿಸಿಸಿ ಸದಸ್ಯ ಪುಟ್ಟಸ್ವಾಮಿ, ಪ್ರಮುಖರಾದ ಕೆ.ಜೆ.ದೇವರಾಜು, ಚಂದ್ರಕುಮಾರ್, ಕೆ.ಎಸ್.ದ್ಯಾಪೇಗೌಡ, ಬಿ.ಮಹದೇವು, ದೊಡ್ಡಸ್ವಾಮಿಗೌಡ ಸೇರಿದಂತೆ ಇತರರು ಇದ್ದರು.