ಕನ್ನಡಪ್ರಭ ವಾರ್ತೆ ತುಮಕೂರು
ಸುಮಾರು ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ, ಅತ್ಯಂತ ಶ್ರೀಮಂತ ಭಾಷೆಯಾಗಿರುವ ಹಾಗೂ ಅತಿ ಸುಲಭವಾಗಿ ಉಚ್ಚರಿಸುವ ಭಾಷೆಯಾಗಿರುವ ಕನ್ನಡ ಭಾಷೆಯ ಬಗೆಗಿನ ಪ್ರೀತಿ, ಗೌರವ ಕೇವಲ ನವೆಂಬರ್ ತಿಂಗಳಿನ ರಾಜ್ಯೋತ್ಸವಕ್ಕೆ ಸೀಮಿತವಾಗದೆ, ನಮ್ಮ ದೈನಂದಿನ ಬದುಕಿನಲ್ಲಿ ನಿತ್ಯೋತ್ಸವವಾಗಲಿ ಎಂದು ನಿವೃತ್ತ ತಹಸೀಲ್ದಾರ್ ಹಾಗೂ ಗಾಯತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ವಿ. ಕುಮಾರ್ ಆಶಿಸಿದರು.ಅವರು ತುಮಕೂರಿನ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಮಹಿಳಾ ಸಮಾಜ ಟ್ರಸ್ಟ್‌ನಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಪ್ರತಿ ಮನೆಗಳಲ್ಲೂ ಪೋಷಕರು ತಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಕನ್ನಡ ಭಾಷೆಯ ಹಿರಿಮೆ, ಇತಿಹಾಸ, ಸಂಸ್ಕೃತಿ, ಪರಂಪರೆಯ ಬಗ್ಗೆ ಅರಿವು ಮೂಡಿಸಬೇಕು. ಪ್ರತಿಯೊಬ್ಬರ ಮನೆ- ಮನಗಳಲ್ಲೂ ಕನ್ನಡ ಭಾಷೆ ಪ್ರತಿಧ್ವನಿಸಬೇಕು ಎಂದು ಅಭಿಪ್ರಾಯಪಟ್ಟ ಅವರು, ಇಂದು ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೆ, ದೇಶ- ವಿದೇಶಗಳಲ್ಲೂ ಕನ್ನಡಿಗರು ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ. ಇದು ಹೆಮ್ಮೆಯ ವಿಚಾರವಾಗಿದೆ ಎಂದರು.ಮಹಿಳಾ ಸಮಾಜ ಟ್ರಸ್ಟ್ ನ ಗೌರವ ಕಾರ್ಯದರ್ಶಿ ಸುಭಾಷಿಣಿ ರವೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದಿರುವ, ಪ್ರಾಚೀನ ಹಾಗೂ ಶ್ರೀಮಂತ ಭಾಷೆಯಾಗಿರುವ ಕನ್ನಡ ಭಾಷೆ ನಮ್ಮೆಲ್ಲರ ಜೀವನದಲ್ಲಿ ಹಾಸುಹೊಕ್ಕಾಗಿದೆ ಎಂದರಲ್ಲದೆ, ಮಹಿಳಾ ಸಮಾಜ ಸ್ಥಾಪನೆಯಾಗಿ 89 ವರ್ಷಗಳು ಸಂದಿದ್ದು, ಅಶಕ್ತ ಮಹಿಳೆಯರಿಗೆ ಸಹಾಯ, ಬಡ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ಸೇರಿ ವಿವಿಧ ರೀತಿಯ ಸಹಕಾರ ನೀಡುವುದು, ವಿವಿಧ ಕ್ಷೇತ್ರಗಳ ಪ್ರತಿಭಾವಂತರಿಗೆ ಪ್ರೋತ್ಸಾಹ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳನ್ನು ನಿಯಮಿತವಾಗಿ ಮಾಡುತ್ತಿದ್ದು, ಈ ಬಾರಿ ನಗರದ ಆರ್ಯನ್ ಶಾಲೆಯ ಅತ್ಯಂತ ಬಡವರಾದ ಹತ್ತು ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕವನ್ನು ಪಾವತಿಸಲಾಗಿದೆ ಎಂದರು.
ಮಹಿಳಾ ಸಮಾಜ ಟ್ರಸ್ಟ್ ನ ಗೌರವಾಧ್ಯಕ್ಷೆ ಟಿ.ಎಸ್. ಶೀಲವತಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸದಸ್ಯೆಯರಿಗೆ ಆಶುಭಾಷಣ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಟ್ರಸ್ಟ್ ಸದಸ್ಯೆಯರು ನಾಡಗೀತೆ ಹಾಗೂ ಕನ್ನಡಗೀತೆಗಳನ್ನು ಹಾಡಿದರು. ಕಾರ್ಯದರ್ಶಿ ಶುಭಾ ರಮೇಶ್ ಅತಿಥಿಗಳ ಪರಿಚಯ ಮಾಡಿದರು. ಸುಭಾಷಿಣಿ ರವೀಶ್ ಸ್ವಾಗತಿಸಿದರು. ಮಂಜುಳಾ ಕಾರ್ಯಕ್ರಮ ನಿರೂಪಿಸಿದರು. ಶಾಂತಾ ವಂದಿಸಿದರು.