ಕನ್ನಡಪ್ರಭ ವಾರ್ತೆ ಗುಬ್ಬಿ
ಒತ್ತಡದ ಕಾರ್ಯ ಕಲಾಪಗಳ ನಡುವೆಯೂ ವಕೀಲರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅನುಪಮ ತಿಳಿಸಿದರು.ಶನಿವಾರ ನ್ಯಾಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾಷಾಭಿಮಾನ ಇದ್ದಾಗ ಮಾತ್ರ ಇಂತಹ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಗುವುದು. ಮಾತೃಭಾಷೆಯ ಸೊಗಡನ್ನು ಎಂದಿಗೂ ಮರೆಯಲು ಸಾಧ್ಯವಾಗುವುದಿಲ್ಲ. ಅನ್ಯ ಭಾಷಿಕರಿಗೂ ಕನ್ನಡ ಭಾಷೆಯನ್ನು ಕಲಿಸುವ ಮೂಲಕ ಭಾಷೆಯ ಮಹತ್ವವನ್ನು ತಿಳಿಸೋಣ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಎಚ್. ಸಿ. ಯತೀಶ್ ಮಾತನಾಡಿ, ಮಾತೃಭಾಷೆಯಿಂದ ಮಾತ್ರ ಮನದ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುವುದು. ಭಾಷೆಗಳ ರಾಣಿಯಂತಿರುವ ಕನ್ನಡವು ಇಡೀ ವಿಶ್ವದಲ್ಲಿಯೇ ಅತ್ಯುತ್ತಮ ಲಿಪಿಯನ್ನು ಹೊಂದಿದೆ. ದಾಸರ ಕೀರ್ತನೆಗಳು, ಶರಣರ ವಚನಗಳು, ಪಂಪ, ರನ್ನ, ಕುವೆಂಪುರವರ ಕೃತಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ ಎಂದ ಅವರು, ಕನ್ನಡದ ನೆಲ,ಜಲ,ಭಾಷೆ, ಸಾಹಿತ್ಯ,ಸಂಸ್ಕೃತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇರೋಣ ಎಂದು ತಿಳಿಸಿದರು.ಮುಂದಿನ ಪೀಳಿಗೆ ಕನ್ನಡ ಭಾಷೆಯನ್ನು ಬಳಸುವ ಸಾಧ್ಯತೆ ಕಡಿಮೆ ಇರುವುದರಿಂದ ಕನ್ನಡ ಭಾಷೆ ಹಾಗೂ ಸಾಹಿತ್ಯದ ಮಹತ್ವದ ಅರಿವು ಮೂಡಿಸಿ ಎಚ್ಚರಿಸಬೇಕಿದೆ. ಇಲ್ಲವಾದಲ್ಲಿ ಅವರು ಸಂಪೂರ್ಣವಾಗಿ ಕನ್ನಡ ಭಾಷೆಯಿಂದ ವಿಮುಖವಾಗುವ ಸಾಧ್ಯತೆ ಇರುವುದು ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಬಿ. ಕೆ. ಚಿದಾನಂದಮೂರ್ತಿ ಮಾತನಾಡಿ, ಭಾಷಾಭಿಮಾನದಿಂದಲೇ ನ್ಯಾಯಾಲಯದ ಕಲಾಪಗಳ ಮಧ್ಯೆಯೂ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಬೇರೆ ಭಾಷೆಗಳನ್ನು ಕಲಿಯುವ ಜೊತೆಗೆ ಕನ್ನಡ ಭಾಷೆಯನ್ನು ಉಳಿಸಲು ಎಲ್ಲರೂ ಚಿಂತಿಸಬೇಕಿದೆ.ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯದ ಕಲಾಪಗಳು, ತೀರ್ಪುಗಳು ಕನ್ನಡದಲ್ಲಿ ಬರುತ್ತಿರುವುದರಿಂದ ಎಲ್ಲರಿಗೂ ಅನುಕೂಲವಾಗುತ್ತಿದೆ ಎಂದು ಹೇಳಿದರು.ಹಿರಿಯ ಸಿವಿಲ್ ನ್ಯಾಯಾಧೀಶರಾದ ಪೂರ್ಣಿಮಾ ಕೆ. ಯಾದವ್, ಪ್ರಧಾನ ನ್ಯಾಯಾಧೀಶರಾದ ವಿನುತ ಡಿ. ಎಸ್., ಸರ್ಕಾರಿ ವಕೀಲರಾದ ನಿರಂಜನ್ ಮೂರ್ತಿ, ಅಕ್ಷತಾ, ಷಡಕ್ಷರಿ, ವಕೀಲರ ಸಂಘದ ಉಪಾಧ್ಯಕ್ಷ ಶಿವಯೋಗೀಶ್, ಕಾರ್ಯದರ್ಶಿ ಸುರೇಶ್, ಜಂಟಿ ಕಾರ್ಯದರ್ಶಿ ನಂದೀಶ್, ಖಜಾಂಚಿ ಶಿವಾನಂದ್, ಸಂಘದ ಪದಾಧಿಕಾರಿಗಳು, ವಕೀಲರು, ನ್ಯಾಯಾಲಯದ ಸಿಬ್ಬಂದಿ ಹಾಜರಿದ್ದರು.