)
ಆತ್ಮಭೂಷಣ್
ಕೇರಳ ಸರ್ಕಾರ ಜಾರಿಗೊಳಿಸಿದ ಕಡ್ಡಾಯ ಕಲಿಕೆಯ ಮಲಯಾಳಂ ಭಾಷಾ ಮಸೂದೆ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ಗಡಿನಾಡು ಕಾಸರಗೋಡಿನ ಕನ್ನಡಿಗರು ನಿರ್ಧರಿಸಿದ್ದಾರೆ. ಇದಕ್ಕೆ ಕೋರ್ಟ್ ಹೋರಾಟಕ್ಕೆ ತಗಲುವ ವೆಚ್ಚ ಭರಿಸಲು ಧನಸಹಾಯ ಸಂಗ್ರಹದ ಮೊರೆ ಹೋಗಿದ್ದು, ಧನಸಂಗ್ರಹ ಅಭಿಯಾನ ಕೈಗೆತ್ತಿಕೊಂಡಿದ್ದಾರೆ.
ಈ ಹಿಂದೆ ಗಡಿನಾಡು ಅಡೂರಿನ ಅಂಗನವಾಡಿಗೆ ಮಲಯಾಳಿ ಭಾಷಿಕ ಶಿಕ್ಷಕಿಯ ನೇಮಕ ವೇಳೆಯೂ ಹೋರಾಟಕ್ಕೆ ಕನ್ನಡಿಗರು ಭಿಕ್ಷೆ ಎತ್ತಿದ್ದರು. ಮಾತ್ರವಲ್ಲ ಹೈಕೋರ್ಟ್‌ನಲ್ಲಿ ಕನ್ನಡ ಭಾಷಾ ಶಿಕ್ಷಕರ ನೇಮಕ ಆದೇಶ ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಈಗ ಅದೇ ಮಾದರಿಯಲ್ಲಿ ಗಡಿನಾಡಿನ ಎಲ್ಲ ಕನ್ನಡಿಗರು ಕನ್ನಡ ಉಳಿವಿಗಾಗಿ ಹೋರಾಟದ ಭಿಕ್ಷಾಟನೆಗೆ ಮುಂದಾಗಿದ್ದಾರೆ. ಇದಕ್ಕಾಗಿ ಕೇರಳ ಪ್ರಾಂತ್ಯ ಕನ್ನಡ ಭಾಷಾ ಸಂರಕ್ಷಣಾ ಸಮಿತಿ ಹುಟ್ಟುಹಾಕಿದ್ದಾರೆ. ಏನಿದು ಮಸೂದೆ ತಂದ ಸಂಕಷ್ಟ?: ಕೇರಳಂ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದ ಮಲಯಾಳಂ ಭಾಷೆ ಕಡ್ಡಾಯ ಮಸೂದೆಗೆ ಅಲ್ಲಿನ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ. ಇದರಿಂದಾಗಿ ಮಸೂದೆ ಗಜೆಟ್‌ನಲ್ಲಿ ಪ್ರಕಟವಾಗಿ ಜಾರಿಗೊಳ್ಳಲು ಸನ್ನದ್ಧವಾಗಿದೆ. ಈ ಮಸೂದೆ ಜಾರಿಯಾದರೆ ಗಡಿನಾಡಿನಲ್ಲಿ ಭಾಷಾ ಅಲ್ಪಸಂಖ್ಯಾತರಾಗಿರುವ ಕನ್ನಡಿಗರಿಗೆ ಶೈಕ್ಷಣಿಕವಾಗಿ ಭಾರಿ ತೊಂದರೆಯಾಗಲಿದೆ ಎನ್ನುವುದು ಕನ್ನಡಿಗರ ಆತಂಕ.ಮಲಯಾಳಂ ಭಾಷಾ ಮಸೂದೆಯ ಸೆಕ್ಷನ್ 6 ರಲ್ಲಿ 1ರಿಂದ 10ನೇ ತರಗತಿ ವರೆಗೆ ಒಂದನೇ ಭಾಷೆಯಾಗಿ ಮಲಯಾಳಂನ್ನು ಕಡ್ಡಾಯವಾಗಿ ಕಲಿಯಬೇಕು ಎಂದು ಹೇಳಲಾಗಿದೆ. ಸೆಕ್ಷನ್ 7 ‘ಬಿ’ ಪ್ರಕಾರ ಸೆಕ್ಷನ್ 6ರಲ್ಲಿ ಏನು ಹೇಳಿದ್ದಾರೋ ಅದನ್ನು ಮುಂದುವರಿಸಬೇಕು. ಅಲ್ಲದೆ ಮಲಯಾಳಂ ಭಾಷೆ ಅಲ್ಲದವರಿಗೆ ಅವರ ಮಾತೃ ಭಾಷೆಯನ್ನು ಕಲಿಯಲು ಅವಕಾಶ ಇದೆ ಎಂದು ನಮೂದಿಸಲಾಗಿದೆ. ಅಂದರೆ ಮಲಯಾಳಂ ಭಾಷೆ ಕಡ್ಡಾಯ ಮಾಡಿದರೂ ಕನ್ನಡ ಕಲಿಕೆಗೆ ತೊಡಕು ಇಲ್ಲ ಎಂದು ಸರ್ಕಾರವೇ ಸಮಜಾಯಿಷಿ ನೀಡಿದೆ. ಆದರೆ ಇದನ್ನು ಗಡಿನಾಡ ಕನ್ನಡಿಗರು, ಸಂಘಟನೆಗಳು, ಹೋರಾಟಗಾರರು ನಿರಾಕರಿಸುತ್ತಾರೆ.
ಚುನಾವಣೆ ಬಳಿಕ ಹೋರಾಟ ಕಿಚ್ಚು?: ಪ್ರಸಕ್ತ ಕೇರಳಂನಲ್ಲಿ ಅಸೆಂಬ್ಲಿ ಚುನಾವಣೆ ಘೋಷಣೆಯಾಗಿದ್ದು, ರಾಜಕೀಯ ಪಕ್ಷಗಳು ಪ್ರಚಾರದ ಭರಾಟೆಯಲ್ಲಿ ಇವೆ. ಹಾಗಾಗಿ ಕನ್ನಡಪರ ಸಂಘಟನೆಗಳ ಹೋರಾಟ ಸದ್ಯದ ಮಟ್ಟಿಗೆ ಹಿಂದೆ ಸರಿದಿದೆ. ಏನಿದ್ದರೂ ಚುನಾವಣೆ ಮುಕ್ತಾಯಗೊಂಡ ಬಳಿಕ ಇದರ ಹೋರಾಟ ಕಾವು ಪಡೆದುಕೊಳ್ಳುವ ಸಾಧ್ಯತೆ ಇದೆ.
ದಾವೆಯ ಪ್ರಕ್ರಿಯೆ ಸಿಂಗಲ್ ಬೆಂಚ್ ಅಥವಾ ಡಿವಿಜನ್ ಬೆಂಚ್ ಮುಂದೆ ನಡೆಯಬಹುದಾದ್ದರಿಂದ, ವಕೀಲರ ಶುಲ್ಕ, ದಾಖಲೆ ಸಿದ್ಧತೆ , ನ್ಯಾಯಾಲಯದ ವೆಚ್ಚಗಳು ಹಾಗೂ ಸಂಚಾರ ಖರ್ಚು ಸೇರಿದಂತೆ ವಿವಿಧ ರೀತಿಯ ವೆಚ್ಚಗಳು ಉಂಟಾಗಲಿವೆ. ಪ್ರಸ್ತುತ ಅಂದಾಜಿನ ಪ್ರಕಾರ ಕನಿಷ್ಠ 2 ಲಕ್ಷ ರು. ವರೆಗೆ ವೆಚ್ಚ ಬೇಕಾಗಬಹುದು ಎಂದು ಕನ್ನಡಿಗರು ನಿರ್ಧರಿಸಿ ಧನ ಸಂಗ್ರಹ ಅಭಿಯಾನಕ್ಕೆ ಇಳಿದಿದ್ದಾರೆ.
ನಮ್ಮ ಭಾಷೆ, ನಮ್ಮ ಹಕ್ಕು, ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಹೋರಾಟದ ಒಂದು ಮಹತ್ವದ ಹಂತಕ್ಕೆ ನಾವು ಬಂದಿದ್ದೇವೆ. ಈ ಸದುದ್ದೇಶಕ್ಕಾಗಿ ಕೇರಳ ಉಚ್ಚ ನ್ಯಾಯಾಲಯದ ಮೆಟ್ಟಿಲೇರಲು ನಾವು ಸಿದ್ಧರಾಗಿದ್ದೇವೆ. ಇದು ಕೇವಲ ಒಂದು ದಾವೆ ಅಲ್ಲ, ಇದು ನಮ್ಮ ಅಸ್ತಿತ್ವದ ಪ್ರಶ್ನೆ, ನಮ್ಮ ಭವಿಷ್ಯದ ಹೋರಾಟ. ಏ.10 ರೊಳಗೆ ಹೈಕೋರ್ಟ್‌ಗೆ ರಿಟ್ ದಾಖಲಿಸುತ್ತೇವೆ.-ಮುರಳೀಧರ ಬಳ್ಳಕುರಾಯ, ಅಧ್ಯಕ್ಷರು, ಕಾಸರಗೋಡು ಕರ್ನಾಟಕ ಸಮಿತಿ