ಜ್ವಲಂತ ಸಮಸ್ಯೆ ವಿರುದ್ಧ ಹೋರಾಡುವ ಕನ್ನಡ ಸಂಘಟನೆಗಳು: ಶಾಸಕ ನಂಜೇಗೌಡ ಶ್ಲಾಘನೆ

KannadaprabhaNewsNetwork | Published : Oct 4, 2024 1:04 AM

ಸಾರಾಂಶ

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎನ್ನುವ ವೇದ ವ್ಯಾಕದೊಂದಿಗೆ ಶ್ರಮಿಸುತ್ತಿರುವ ನಮ್ಮ ಸಂಘಟನೆ ಕಾರ್ಯಕರ್ತರು ಕನ್ನಡದ ಕಟ್ಟಾಳು ಆಗಿದ್ದಾರೆ. ಕನ್ನಡ ಪರ ಕಾರ‍್ಯಕ್ರಮಗಳ ಜತೆಯಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಕಳಕಳಿಯನ್ನು ಹೊಂದಿ ಶೋಷಿತರನ್ನು ಪ್ರೋತ್ಸಾಹಿಸಿ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಾಲೂರು

ನೆಲ, ಜಲ, ಭಾಷೆ ಸೇರಿದಂತೆ ನಾಡಿನ ಜ್ವಲಂತ ಸಮಸ್ಯೆಗಳಿಗೆ ಹೋರಾಟದ ಮೂಲಕ ಸ್ಪಂದಿಸುವ ರಾಜ್ಯ ಕನ್ನಡ ಪರ ಸಂಘಟನೆಗಳು ರಾಜಕಾರಣದಲ್ಲೂ ತಪ್ಪು ನಡೆದಾಗ ಪಕ್ಷಾತೀತವಾಗಿ ಹೋರಾಟ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಪಟ್ಟಣದ ಅರಳೇರಿ ರಸ್ತೆಯ ಎಚ್.ವಿ.ಆರ್.ಕಲ್ಯಾಣ ಮಂಟಪದಲ್ಲಿ ಪ್ರವೀಣ್‌ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ಗಡಿಭಾಗ ಮಾಲೂರು ಪಕ್ಕದಲ್ಲೇ ತಮೀಳುನಾಡು ,ಆಂಧ್ರ ಇದ್ದರೂ ಮಾಲೂರಿನಲ್ಲಿ ಅನ್ಯಭಾಷೆಯ ಛಾಪು ಇಲ್ಲದಿರುವುದಕ್ಕೆ ಕನ್ನಡ ಸಂಘಟನೆಗಳ ಶಕ್ತಿಯೇ ಪ್ರಮುಖ ಕಾರಣ. ಜಿಲ್ಲೆಯ ಮುಳಬಾಗಿಲು, ಶ್ರೀನಿವಾಸಪುರ , ಕೆಜಿಎಫ್, ಬಂಗಾರಪೇಟೆಗಳಲ್ಲಿ ತಮಿಳು ಇನ್ನೂ ಜೀವಂತವಾಗಿದೆ. ಆದರೆ ಮಾಲೂರಲ್ಲಿ ಮಾತ್ರ ಕನ್ನಡದ ಕಂಪು ಹರಡುತ್ತಿದೆ ಎಂದ ಶಾಸಕರು, ಇಲ್ಲಿನ ಕೈಗಾರಿಕಾ ಪ್ರದೇಶದಲ್ಲೂ ಕನ್ನಡಿಗರಿಗೆ ಮೊದಲ ಆದ್ಯತೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದರು.

ಕರವೇ ರಾಜ್ಯಾಧ್ಯಕ್ಷ ಪ್ರವೀಣ್‌ ಶೆಟ್ಟಿ ಮಾತನಾಡಿ, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎನ್ನುವ ವೇದ ವ್ಯಾಕದೊಂದಿಗೆ ಶ್ರಮಿಸುತ್ತಿರುವ ನಮ್ಮ ಸಂಘಟನೆ ಕಾರ್ಯಕರ್ತರು ಕನ್ನಡದ ಕಟ್ಟಾಳು ಆಗಿದ್ದಾರೆ. ಕನ್ನಡ ಪರ ಕಾರ‍್ಯಕ್ರಮಗಳ ಜತೆಯಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಕಳಕಳಿಯನ್ನು ಹೊಂದಿ ಶೋಷಿತರನ್ನು ಪ್ರೋತ್ಸಾಹಿಸಿ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯೇ ಮಾಲೂರಿನ ನಮ್ಮ ಸಂಘಟನೆಯ ಕ್ರಿಯಾಶೀಲ ಕಾರ್ಯಗಳು ಎಂದರು.

ಎಸ್ಎಸ್ಎಲ್ ಸಿ, ಪಿಯೂಸಿಯಲ್ಲಿ ಕನ್ನಡ ಭಾಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶಾಸಕ ಕೆ.ವೈ.ನಂಜೇಗೌಡ, ಪ್ರವೀಣ್‌ ಶೆಟ್ಟಿ ಸೇರಿ ವೇದಿಕೆ ಮೇಲಿದ್ದ ಗಣ್ಯರನ್ನು ಅತ್ಮೀಯವಾಗಿ ಅಭಿನಂದಿಸಲಾಯಿತು. ಕಸಾಪ ಅಧ್ಯಕ್ಷ ಎಂ.ವಿ.ಹನುಮಂತಯ್ಯ, ಪುರಸಭೆ ಅಧ್ಯಕ್ಷೆ ಕೋಮಲ, ಸಂಘಟನೆಯ ರಾಜ್ಯ ಉಪಾಧ್ಯಕ್ಷ ಶಿವರಾಜ ಗೌಡ, ಮಂಜೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ , ಚಾಕನಹಳ್ಳಿ ನಾಗರಾಜ್‌, ದಯಾನಂದ್‌, ದೊಡ್ಡಶಿವಾರ ನಾಣಿ, ಮಾದನಹಟ್ಟಿ ಹರೀಶ್‌, ದಾಕ್ಷಾಯಿಣಿ, ಕೊಪ್ಪಚಂದ್ರು , ಪಾಪರೆಡ್ಡಿ, ಡಾ.ನಾ.ಮುನಿರಾಜು, ಆನೇಪುರ ದೇವರಾಜ್‌ , ಚಂಪಕಮಾಲ, ಎಂ.ಎಸ್.ಮಣಿಗಂಡನ್‌, ಕಿರಣ್‌, ಅಮರಾವತಿ ಇನ್ನಿತರರು ಇದ್ದರು.

--------

Share this article