ಮಕ್ಕಳ ಕಲಾಲೋಕಕ್ಕೆ ಕನ್ನಡಪ್ರಭ ವೇದಿಕೆ: ಜೋಗಿ

KannadaprabhaNewsNetwork |  
Published : Nov 14, 2026, 02:00 AM IST
ವಿಜೇತರಿಗೆ ಸೈಕಲ್‌ ವಿತರಿಸಲಾಯಿತು. | Kannada Prabha

ಸಾರಾಂಶ

ಕನ್ನಡಪ್ರಭ ಕಳೆದ 8 ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಚಿತ್ರಕಲಾ ಸ್ಪರ್ಧೆ ಆಯೋಜಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ಸ್ಪರ್ಧೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ.

ಹುಬ್ಬಳ್ಳಿ:

ಮಕ್ಕಳೊಳಗೆ ಅಡಗಿರುವ ಕಲಾವಿದನನ್ನು ಗುರುತಿಸಿ ಪ್ರೋತ್ಸಾಹಿಸುವ ಜತೆಗೆ, ಅವರು ದೊಡ್ಡವರಾದ ಮೇಲೂ ಆ ಕಲಾವಿದನನ್ನು ಜೀವಂತವಾಗಿರಿಸುವ ಕೆಲಸವಾಗಬೇಕು ಎಂದು ಕನ್ನಡಪ್ರಭ ಸಂಪಾದಕ ಗಿರೀಶರಾವ್ ಹತ್ವಾರ್ (ಜೋಗಿ) ಹೇಳಿದರು.

ನಗರದ ಇಂದಿರಾ ಗಾಜಿನ ಮನೆಯಲ್ಲಿ ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಮಾತನಾಡಿದರು.

ಮನುಷ್ಯ ಕಣ್ಣಿನಿಂದ ಜಗತ್ತನ್ನು ನೋಡಿದರೆ, ಮಕ್ಕಳು ಬಣ್ಣಗಳ ಮೂಲಕ ಜಗತ್ತನ್ನು ಕಾಣುತ್ತಾರೆ. ಪ್ರತಿಯೊಂದು ಮಗುವಿನೊಳಗೂ ಒಬ್ಬ ಕಲಾವಿದನಿರುತ್ತಾನೆ. ಆ ಕಲಾವಿದನನ್ನು ದೊಡ್ಡವರಾದ ಮೇಲೂ ಉಳಿಸಿಕೊಳ್ಳುವುದು ದೊಡ್ಡ ಸವಾಲು ಎಂಬುದನ್ನು ಖ್ಯಾತ ಚಿತ್ರಕಲಾವಿದ ಪಿಕಾಸೊ ಹೇಳಿದ್ದಾರೆ. ಹೀಗಾಗಿ ಮಕ್ಕಳ ಸೃಜನಶೀಲತೆಗೆ ಬಾಲ್ಯದಲ್ಲಿಯೇ ಸೂಕ್ತ ವೇದಿಕೆ ಕಲ್ಪಿಸುವುದು ಅಗತ್ಯ. ಇಂದಿನ ಶಿಕ್ಷಣ ವ್ಯವಸ್ಥೆ ಮಕ್ಕಳಲ್ಲಿನ ಕಲೆ ಮತ್ತು ಸಾಹಿತ್ಯದ ಅಭಿರುಚಿಯನ್ನು ಬೆಳೆಸುವತ್ತಲೂ ಗಮನಹರಿಸಬೇಕು ಎಂದರು.

ಕನ್ನಡಪ್ರಭ ಕಳೆದ 8 ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಚಿತ್ರಕಲಾ ಸ್ಪರ್ಧೆ ಆಯೋಜಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ಸ್ಪರ್ಧೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಶಿಕ್ಷಕರು ಮಕ್ಕಳನ್ನು ಕರೆತಂದು, ಅವರು ಮಧ್ಯಾಹ್ನದ ವರೆಗೆ ಚಿತ್ರ ಬಿಡಿಸಿ, ತೀರ್ಪುಗಾರರಿಂದ ಮೌಲ್ಯಮಾಪನ ಮಾಡಿಸಿ ಬಹುಮಾನ ಪಡೆಯುವ ಈ ವೇದಿಕೆ ಮಕ್ಕಳ ಪ್ರತಿಭೆ ಅನಾವರಣಕ್ಕೆ ಉತ್ತಮ ಅವಕಾಶವಾಗಿದೆ. ಮಕ್ಕಳೊಂದಿಗೆ ಸಮಯ ಕಳೆಯುವುದೇ ವಿಶೇಷ ಅನುಭವ ಎಂದು ಹೇಳಿದರು.

ಕಳೆದ ವರ್ಷ ರಾಜ್ಯಾದ್ಯಂತ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಸುಮಾರು ₹ 9 ಲಕ್ಷ ಮೌಲ್ಯದ ಬಹುಮಾನ ನೀಡಲಾಗಿತ್ತು. ಮುಂದಿನ ವರ್ಷಗಳಲ್ಲಿಯೂ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುವುದು ಎಂದು ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸತತ ಎಂಟು ವರ್ಷಗಳಿಂದ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬರುತ್ತಿರುವುದ ಹೆಮ್ಮೆಯ ವಿಷಯ. ಕನ್ನಡಪ್ರಭ ಬರೀ ಸುದ್ದಿಯನ್ನಷ್ಟೇ ಜನರಿಗೆ ನೀಡುವುದಲ್ಲ, ಸಾಮಜಿಕ ಕಳಕಳಿಯನ್ನು ಬಿಂಬಿಸುವುದರ ಪ್ರತೀಕ ಇದಾಗಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ