ಪ್ರತಿಭೆ ಗುರುತಿಸುವ ಕನ್ನಡಪ್ರಭ ಕಾರ್ಯ ಶ್ಲಾಘನೀಯ

KannadaprabhaNewsNetwork |  
Published : Nov 28, 2025, 03:15 AM IST
ಡಾ ಎ ಪಿ ಜೆ ಅಬ್ದುಲ್ ಕಲಾಂ ಆಂಗ್ಲ ಮಾದ್ಯಮ ಶಾಲೆಯಲ್ಲಿ ಬುಧವಾರ ಕನ್ನಡಪ್ರಭ ದಿನಪತ್ರಿಕೆ ಹಾಗೂ ಸುವರ್ಣ ನ್ಯೂಸ್ ವತಿಯಿಂದ ಪ್ರೌಢ ಶಾಲಾ ಮಕ್ಕಳಿಗಾಗಿ ಆಯೋಜಿಸಿರುವ ಕರ್ನಾಟಕದ ಅರಣ್ಯ ಮತ್ತು ವನ್ಯ ಜೀವಿಗಳು ವಿಷಯದ ಕುರಿತಾದ ಕೊಲ್ಹಾರ ತಾಲ್ಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು  | Kannada Prabha

ಸಾರಾಂಶ

ಕನ್ನಡಪ್ರಭ ದಿನಪತ್ರಿಕೆ ಹಾಗೂ ಸುವರ್ಣ ನ್ಯೂಸ್ ವಿನೂತನ ಕಾರ್ಯಕ್ರಮಗಳ ಮೂಲಕ ಮಕ್ಕಳ ಪ್ರತಿಭೆ ಬೆಳಕಿಗೆ ತರುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಪಟ್ಟಣದ ಶೀಲವಂತ ಹಿರೇಮಠದ ಡಾ.ಕೈಲಾಸನಾಥ ಮಹಾಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ಕನ್ನಡಪ್ರಭ ದಿನಪತ್ರಿಕೆ ಹಾಗೂ ಸುವರ್ಣ ನ್ಯೂಸ್ ವಿನೂತನ ಕಾರ್ಯಕ್ರಮಗಳ ಮೂಲಕ ಮಕ್ಕಳ ಪ್ರತಿಭೆ ಬೆಳಕಿಗೆ ತರುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಪಟ್ಟಣದ ಶೀಲವಂತ ಹಿರೇಮಠದ ಡಾ.ಕೈಲಾಸನಾಥ ಮಹಾಸ್ವಾಮೀಜಿ ಹೇಳಿದರು.

ಪಟ್ಟಣದ ಡಾ.ಅಬ್ದುಲ್ ಕಲಾಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಕನ್ನಡಪ್ರಭ ದಿನಪತ್ರಿಕೆ ಹಾಗೂ ಸುವರ್ಣ ನ್ಯೂಸ್ ವತಿಯಿಂದ ಪ್ರೌಢ ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ ಕರ್ನಾಟಕದ ಅರಣ್ಯ ಮತ್ತು ವನ್ಯ ಜೀವಿಗಳು ವಿಷಯ ಕುರಿತಾದ ಕೊಲ್ಹಾರ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಚಿತ್ರಕಲೆ ಮೂಲಕ ಮಕ್ಕಳಿಗೆ ಅಕ್ಷರ ಅಭ್ಯಾಸವಾಗಬೇಕು ಎಂದು ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಪೂರ್ವದಲ್ಲಿಯೇ ತಿಳಿಸಿದ್ದಾರೆ ಎಂದರು.

ಇತ್ತೀಚಿನ ದಿನಮಾನಗಳಲ್ಲಿ ಚಿತ್ರಕಲೆ ಮಾಯವಾಗುತ್ತಿದ್ದು, ಚಿತ್ರಕಲೆ ಕಲಿಸುವ ಶಿಕ್ಷಕರ ಕೊರತೆಯೇ ಇದಕ್ಕೆ ಮುಖ್ಯ ಕಾರಣವಾಗಿದೆ. ಸರ್ಕಾರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಒಂದು ವೇಳೆ ಮಾಡದೆ ಹೋದರೆ ನಾವೆಲ್ಲ ಸ್ವಾಮೀಜಿಗಳು ಸೇರಿಕೊಂಡು ಚಿತ್ರಕಲಾ ಶಿಕ್ಷಕರೊಂದಿಗೆ ವಿಧಾನಸೌಧ ಮುತ್ತಿಗೆ ಹಾಕಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಆಲಮಟ್ಟಿ ವಲಯ ಅರಣ್ಯ ಅಧಿಕಾರಿ ರಾಜಶೇಖರ ಲಮಾಣಿ ಮಾತನಾಡಿ, ಕನ್ನಡಪ್ರಭ ಪತ್ರಿಕೆ ಕರ್ನಾಟಕದ ಅರಣ್ಯ ಮತ್ತು ವನ್ಯ ಜೀವಿಗಳ ರಕ್ಷಣೆಗಾಗಿ ಮಕ್ಕಳ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದಲ್ಲಿ ಪ್ರೌಢ ಶಾಲಾ ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆ ಏರ್ಪಡಿಸಿ ಅವರಲ್ಲಿ ಜಾಗೃತಿ ಮೂಡಿಸುತ್ತಿರುವುದು ಬಹಳ ಸಂತೋಷವಾಗಿದೆ. ಇವತ್ತು ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ಮಕ್ಕಳು ಒಳ್ಳೆಯ ಚಿತ್ರಕಲೆಯನ್ನು ಕಲ್ಪನೆಗೆ ತಕ್ಕಂತೆ ತೆಗೆದಿದ್ದಾರೆ. ಅವರ ಕಲೆ ಮೆಚ್ಚುವಂತದ್ದಾಗಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಜಿಲ್ಲೆಯ ತಾಪಮಾನ ಬಹಳಷ್ಟು ಏರಿಕೆ ಆಗಿತ್ತು, ಅದಕ್ಕೆ ಮುಖ್ಯ ಕಾರಣ ಶೇ.33 ಇರಬೇಕಾದ ಅರಣ್ಯ ಕೇವಲ ಶೇ. 0.1 ಇದೆ. ನಾವು ಇಂತಹ ಆಘಾತಕಾರಿ ವಾತಾವರಣದಲ್ಲಿ ಬದಕುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

ಈಗಾಗಲೇ ಕೋಟಿ ವೃಕ್ಷ ಅಭಿಯಾನ ಹಾಗೂ ವೃಕ್ಷೋಥಾನ ಮೂಲಕ ಜಿಲ್ಲೆಯಲ್ಲಿ 2 ಕೋಟಿ ಮರಗಳನ್ನು ಹಚ್ಚಿದ ಪರಿಣಾಮ ಅಮೇರಿಕಾ ಸಂಸ್ಥೆಯೊಂದರ ಸರ್ವೇ ಪ್ರಕಾರ ನಮ್ಮ ಅರಣ್ಯ ಶೇ.2ರಷ್ಟು ಹೆಚ್ಚಳವಾಗಿದೆ. ನಮ್ಮದು ಮಾನವ ನಿರ್ಮಿತ ಅರಣ್ಯ ಪ್ರದೇಶವಾಗಿದ್ದು ಇಲ್ಲಿ ನಾವೆಲ್ಲರೂ ಗಿಡಗಳನ್ನು ಹಚ್ಚಿ ಶೇ.33ರಷ್ಟು ಅರಣ್ಯ ನಿರ್ಮಾಣದ ಗುರಿ ಹೊಂದಬೇಕಾಗಿದೆ ಅದಕ್ಕೆ ಎಲ್ಲರ ಸಹಕಾರ ಬೇಕು ಎಂದು ಹೇಳಿದರು.

ಮಕ್ಕಳ ಸಾಹಿತ್ಯ ಪರಿಷತ್‌ನ ತಾಲೂಕಾಧ್ಯಕ್ಷ ಜಗದೀಶ ಸಾಲಳ್ಳಿ ಮಾತನಾಡಿ, ಚಿತ್ರಕಲೆಯೊಂದು ಸ್ಪರ್ಧೆಯಲ್ಲ. ಅದು ದೈವದತ್ತ ಕಲೆಯಾಗಿದೆ. ಪರಿಸರದ ಕುರಿತು ಚಿತ್ರ ಬಿಡಿಸುವಾಗ ಮಕ್ಕಳಲ್ಲಿ ಪ್ರಕೃತಿ ಹಾಗೂ ಪ್ರಾಣಿ ಪಕ್ಷಿಗಳನ್ನು ಉಳಿಸಬೇಕು. ಗಿಡ ಮರಗಳನ್ನು ಬೆಳಸಬೇಕು ಎಂಬ ಪ್ರಜ್ಞೆ ಬರುತ್ತದೆ. ಇಂತಹ ಕಾರ್ಯಕ್ರಮಗಳು ಪರಿಸರ ಪ್ರಜ್ಞೆ ಬೆಳೆಸುತ್ತವೆ ಎಂದರು.

ಚಿತ್ರಕಲಾ ಶಿಕ್ಷಕ ವ್ಹಿ.ಎಸ್ ಲಿಂಬಿಕಾಯಿ, ಸಲೀಮ್ ಡಾಂಗೆ, ಕನ್ನಡಪ್ರಭ ವರದಿಗಾರ ಮಲ್ಲಿಕಾರ್ಜುನ ಕುಬಕಡ್ಡಿ ಮಾತನಾಡಿದರು.

ಶಾಲೆ ಪ್ರಾಂಶುಪಾಲ ಬಂಧನಾ ಬ್ಯಾನರ್ಜಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ವಲಯ ಅರಣ್ಯಾಧಿಕಾರಿ ರಾಜಶೇಖರ ಲಮಾಣಿ, ಶಾಲೆ ಆಡಳಿತಾಧಿಕಾರಿ ಕೌಸರ್ ಪಟೇಲ, ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಗದೀಶ ಸಾಲಳ್ಳಿ, ಚಿತ್ರಕಲಾ ಶಿಕ್ಷಕರಾದ ಸಲೀಂ ಢಾಂಗೆ, ವ್ಹಿ.ಎಸ್ ಲಿಂಬಿಕಾಯಿ, ಶಮೀಮಾರಾ ದ್ರಾಕ್ಷಿ, ಎಂ.ಎಂ. ಹರಣಶಿಕಾರಿ, ಈರಣ್ಣ ಬಸರಕೋಡ, ಇಂತಿಯಾಜ ಸೇರಿ ಶಾಲೆ ಶಿಕ್ಷಕರು ಹಾಗೂ ಸಿಬ್ಬಂದಿ ಇದ್ದರು.

ವಿಜೇತ ಅಭ್ಯರ್ಥಿಗಳು:

8ನೇ ತರಗತಿ ವಿಭಾಗದಲ್ಲಿ ರೋಣಿಹಾಳದ ಎಸ್‌ವೈಎಸ್ ಪ್ರೌಢಶಾಲೆ ವಿದ್ಯಾರ್ಥಿನಿ ಸೌಜನ್ಯ ಡೆಂಗಿ ಪ್ರಥಮ, ಕೊಲ್ಹಾರ ಸರ್ಕಾರಿ ಪ್ರೌಢಶಾಲೆ ಅಂಜನಾ ಬಾಟಿ ದ್ವಿತೀಯ, ರೋಣಿಹಾಳ ಎಸ್‌ವೈಎಸ್ ಪ್ರೌಢಶಾಲೆ ಮಲ್ಲಿಕಾರ್ಜುನ ಬಾಡಗಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

9ನೇ ತರಗತಿ ವಿಭಾಗದಲ್ಲಿ ಕೊಲ್ಹಾರದ ಸಿಕ್ಯಾಬ್ ಪ್ರೌಢಶಾಲೆ ಕಯೆನಾಥ ಬಡೇಗರ ಪ್ರಥಮ, ಸರ್ಕಾರಿ ಪ್ರೌಢಶಾಲೆ ಅಪ್ಸರಾ ತೋನಶ್ಯಾಳ ದ್ವಿತೀಯ, ಕುಪಕಡ್ಡಿ ಆರ್‌ಎಂಎಸ್ಎ ಪ್ರೌಢಶಾಲೆ ಮಲ್ಲಯ್ಯ ಹಿರೇಮಠ ತೃತೀಯ ಸ್ಥಾನ ಪಡೆದಿದ್ದಾರೆ. 10ನೇ ತರಗತಿ ವಿಭಾಗದಲ್ಲಿ ರೋಣಿಹಾಳದ ಎಸ್‌ವೈಎಸ್ ಪ್ರೌಢಶಾಲೆ ರಾಧಾ ಬಗಲಿ ಪ್ರಥಮ, ಜಿಎಚ್ಎಸ್ ಶಾಲೆ ವಿದ್ಯಾರ್ಥಿ ಐಶ್ವರ್ಯ ಎಂಟೆತ್ತ ದ್ವಿತೀಯ ಹಾಗೂ ರಕ್ಷಿತಾ ಹಿರೇಮಠ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಅಭಿನಂದನೆಗಳು:

ಚಿತ್ರಕಲೆ ಸ್ಪರ್ಧೆ ಸಹಕರಿಸಿದ ಡಾ.ಎ.ಪಿ.ಜೆ.ಅಬ್ದುಲ ಕಲಾಂ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರಿಗೆ, ನಿರ್ಣಾಯಕರಾಗಿ ಆಗಮಿಸಿದ ಚಿತ್ರಕಲಾ ಶಿಕ್ಷಕರಾದ ಸಲೀಂ ಢಾಂಗೆ, ವ್ಹಿ.ಎಸ್.ಲಿಂಬಿಕಾಯಿ, ಶಮೀಮಾರಾ ದ್ರಾಕ್ಷಿ, ಸಹಕಾರ ನೀಡಿದ ವಲಯ ಅರಣ್ಯ ಅಧಿಕಾರಿ ರಾಜಶೇಖರ ಲಮಾಣಿ, ಶಿಕ್ಷಕರಾದ ಜಗದೀಶ ಸಾಲಳ್ಳಿ, ಸಿದ್ದು ಕೊಟ್ಯಾಳಗೆ ಕನ್ನಡಪ್ರಭ ವರದಿಗಾರ ಮಲ್ಲಿಕಾರ್ಜುನ ಕುಬಕಡ್ಡಿ ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ರಾಜಕಾರಣಕ್ಕೆ ಎಚ್‌ಡಿಕೆ ಪರೋಕ್ಷ ಇಂಗಿತ
ಜೈಲಿನ ಬ್ಯಾರಕ್‌ಗಳಿಗೆ ಸಿಸಿಟಿವಿ ಕ್ಯಾಮೆರಾ!