ವಿದ್ಯಾರ್ಥಿಗಳ ಶೈಕ್ಷಣಿಕ ವಿಕಸನಕ್ಕೆ ಕನ್ನಡಪ್ರಭ ಯುವ ಆವೃತ್ತಿ ಸಹಕಾರಿ

KannadaprabhaNewsNetwork | Published : Jun 6, 2024 12:31 AM

ಸಾರಾಂಶ

ಕನ್ನಡಪ್ರಭ ರಾಜಕೀಯ, ಕಲೆ, ಸಾಹಿತ್ಯ, ಆರ್ಥಿಕ, ಕೃಷಿ, ಕ್ರೀಡೆ ಹೀಗೆ ಎಲ್ಲ ಕ್ಷೇತ್ರಗಳ ಬಗ್ಗೆ ಸಮಗ್ರವಾದ ವರದಿ ಪ್ರಕಟಿಸಿ ಸಾಮಾಜಿಕ ಪರಿವರ್ತನೆಯಾಗುವ ನಿಟ್ಟಿನಲ್ಲಿ ನಿರಂತರ ಕಾರ್ಯ ಮಾಡುತ್ತಿದೆ

ಗದಗ: ವಿದ್ಯಾರ್ಥಿಗಳ ಶೈಕ್ಷಣಿಕ ವಿಕಸನ ಹಾಗೂ ಸರ್ವತೋಮುಖ ಬೆಳವಣಿಗೆಗೆ ಕನ್ನಡಪ್ರಭ ಯುವ ಆವೃತ್ತಿ ಸಹಕಾರಿಯಾಗಿದೆ ಎಂದು ಗದಗ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಬಳ್ಳಾರಿ ಹೇಳಿದರು.

ಅವರು ಬುಧವಾರ ಗದಗ ನಗರದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆಗೊಳಿಸಿ ಮಾತನಾಡಿದರು.

ಕನ್ನಡಪ್ರಭ ರಾಜಕೀಯ, ಕಲೆ, ಸಾಹಿತ್ಯ, ಆರ್ಥಿಕ, ಕೃಷಿ, ಕ್ರೀಡೆ ಹೀಗೆ ಎಲ್ಲ ಕ್ಷೇತ್ರಗಳ ಬಗ್ಗೆ ಸಮಗ್ರವಾದ ವರದಿ ಪ್ರಕಟಿಸಿ ಸಾಮಾಜಿಕ ಪರಿವರ್ತನೆಯಾಗುವ ನಿಟ್ಟಿನಲ್ಲಿ ನಿರಂತರ ಕಾರ್ಯ ಮಾಡುತ್ತಿದೆ.

ಅದರಲ್ಲಿಯೂ ಮುಖ್ಯವಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರೂಪಿಸಲಾಗಿರುವ ಯುವ ಆವೃತ್ತಿ ಅತ್ಯಂತ ಉಪಯುಕ್ತವಾಗಿದ್ದು, ಪ್ರತಿಯೊಂದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು. ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಸಮಗ್ರ ಶೈಕ್ಷಣಿಕ ಬೆಳವಣಿಗೆಗೆ ಯುವ ಆವೃತ್ತಿ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದರು.

ವಿದ್ಯಾರ್ಥಿಗಳ ಓದಿಗೆ ಅನುಕೂಲವಾಗಲೆಂದು ಹೊರ ತಂದಿರುವ ಯುವ ಆವೃತ್ತಿ ವಿಶೇಷ ಪುರವಣಿಯೂ ಅತ್ಯುತ್ತಮವಾಗಿ ಮೂಡಿ ಬರುತ್ತಿದ್ದು, ಎಲ್ಲ ವಿದ್ಯಾರ್ಥಿಗಳು ತಮ್ಮ ಪಠ್ಯದ ಜತೆಗೆ ಯುವ ಆವೃತ್ತಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಇದರಿಂದ ಮಕ್ಕಳಲ್ಲಿ ಸಾಮಾನ್ಯ ಜ್ಞಾನವೂ ವೃದ್ಧಿಸುವುದರ ಜತೆಗೆ ಪರೀಕ್ಷೆಗಳನ್ನು ಎದುರಿಸುವ ಆತ್ಮ ಸ್ಥೈರ್ಯ ಬರುತ್ತದೆ. ಪ್ರತಿಯೊಂದು ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಗಳಿಸಬೇಕು ಎನ್ನುವ ಹಂಬಲ ಹೊಂದಿರುತ್ತಾರೆ. ಆ ರೀತಿಯ ಆಸಕ್ತಿ ಮತ್ತು ಸಾಧನೆಯ ಹಂಬಲವಿರುವ ವಿದ್ಯಾರ್ಥಿಗಳಿಗೆ ಕನ್ನಡಪ್ರಭದ ಯುವ ಆವೃತ್ತಿ ಅಮೂಲ್ಯ ಕೊಡುಗೆಯಾಗಿದೆ.ಇದನ್ನು ಓದುವ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಪ್ರತಿಯೊಬ್ಬ ಮನುಷ್ಯನಿಗೂ ಅನ್ನ, ನೀರು, ಆಹಾರ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿ ಸ್ವಚ್ಛ ಪರಿಸರ ಅವಶ್ಯಕ, ಶುದ್ಧವಾದ ಗಾಳಿಯ ಮಹತ್ವ ಎಲ್ಲರೂ ಕೊರೋನಾ ಸಂದರ್ಭದಲ್ಲಿ ಗಮನಿಸಿದ್ದಾರೆ. ಅದಕ್ಕಾಗಿ ಪ್ರತಿಯೊಬ್ಬ ಮಗು ಕೂಡಾ ಈಗಿನಿಂದಲೇ ಪರಿಸರ ರಕ್ಷಿಸುವ, ಉಳಿಸುವ ಕಾರ್ಯಕ್ಕೆ ಮುಂದಾಗಬೇಕು. ಅದರಲ್ಲಿಯೂ ಗಿಡ ಮರ ಬೆಳೆಸುವತ್ತ ವಿಶೇಷವಾದ ಗಮನ ನೀಡಬೇಕು. ಪರಿಸರ ಉಳಿದರೆ ನಾವು ಉಳಿಯಲು ಸಾಧ್ಯ ಎಂದರು.

ಈ ವೇಳೆ ತಾಲೂಕು ವಿಸ್ತರಣಾ ಅಧಿಕಾರಿ ಜಿ.ಎನ್. ಮಲ್ಲೂರ, ಸಿಬ್ಬಂದಿಗಳಾದ ಗಣೇಶ, ವಿಜಯಕುಮಾರ, ಬಸವರಾಜ ಇಟಗಿ, ಸತೀಶ ಉಮಚಗಿ, ಕುಮಾರ.ಡಿ, ಮಂಜುನಾಥ ಬಂಡಿವಡ್ಡರ ಮುಂತಾದವರು ಹಾಜರಿದ್ದರು.

Share this article