ಕನ್ನಡಪ್ರಭದ ಯಾಜಿ, ಗೊಂಬಿ ಸೇರಿ 144 ಜನರಿಗೆ ಧೀಮಂತ ಪ್ರಶಸ್ತಿ

KannadaprabhaNewsNetwork |  
Published : Nov 18, 2026, 02:15 AM IST
ರಾಮಲಿಂಗಪ್ಪ ಬೂದಿಹಾಳ | Kannada Prabha

ಸಾರಾಂಶ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಕೊಡ ಮಾಡುವ ಪ್ರಸಕ್ತ ಸಾಲಿನ "ಧೀಮಂತ " ಪ್ರಶಸ್ತಿಗೆ ಕನ್ನಡಪ್ರಭದ ಹಿರಿಯ ಸುದ್ದಿ ಸಂಪಾದಕ ಮಧುಕೇಶ್ವರ ಯಾಜಿ, ಮುಖ್ಯ ವರದಿಗಾರ ಶಿವಾನಂದ ಗೊಂಬಿ ಸೇರಿದಂತೆ 144 ಜನರು ಭಾಜನರಾಗಿದ್ದಾರೆ.

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಕೊಡ ಮಾಡುವ ಪ್ರಸಕ್ತ ಸಾಲಿನ "ಧೀಮಂತ " ಪ್ರಶಸ್ತಿಗೆ ಕನ್ನಡಪ್ರಭದ ಹಿರಿಯ ಸುದ್ದಿ ಸಂಪಾದಕ ಮಧುಕೇಶ್ವರ ಯಾಜಿ, ಮುಖ್ಯ ವರದಿಗಾರ ಶಿವಾನಂದ ಗೊಂಬಿ ಸೇರಿದಂತೆ 144 ಜನರು ಭಾಜನರಾಗಿದ್ದಾರೆ.

ನ. 18ರಂದು ಸಂಜೆ 5ಕ್ಕೆ ಇಲ್ಲಿನ ಇಂದಿರಾ ಗಾಜಿನ ಮನೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿವರ ನೀಡಿದ ಮೇಯರ್‌ ದುರ್ಗಮ್ಮ ಬಿಜವಾಡ, ವಿವಿಧ ಕ್ಷೇತ್ರಗಳ 144 ಜನ ಸಾಧಕರಿಗೆ ಧೀಮಂತ ಪ್ರಶಸ್ತಿ ನೀಡುತ್ತಿರುವುದು ಮಹಾನಗರ ಪಾಲಿಕೆಗೆ ಅತ್ಯಂತ ಹೆಮ್ಮೆಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು.

ಪತ್ರಕರ್ತರಾದ ಕನ್ನಡಪ್ರಭದ ಮಧುಕೇಶ್ವರ ಯಾಜಿ, ಶಿವಾನಂದ ಗೊಂಬಿ ಹಾಗೂ ಮಂಜುನಾಥ ಅಂಗಡಿ, ಕಾಶಪ್ಪ ಕರದಿನ, ರವೀಶ ಪವಾರ, ಹೇಮರಡ್ಡಿ ಸೈದಾಪುರ, ದೀಪಕ ತಳವಾಯಿ, ಸುಧೀಂದ್ರ ಸತ್ಯಬೋಧಿ, ಹುಲಗೂರ, ಪರಶುರಾಮ ತಹಶೀಲ್ದಾರ್‌, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ರಾಮಲಿಂಗಪ್ಪ ಅಂಟರತಾನಿ, ಶಿಕ್ಷಣ ಕ್ಷೇತ್ರದಿಂದ ಸಂದೀಪ ಬೂದಿಹಾಳ, ಡಾ. ವಾಸುದೇವ ಪರ್ವತಿ, ಡಾ. ಜಿನದತ್ತ ಹಡಗಲಿ, ಸಂಗೀತ ಕ್ಷೇತ್ರದಲ್ಲಿ ಪಂ. ರಘುನಾಥ ನಾಕೋಡ, ವೈಷ್ಣವಿ ಹಾನಗಲ, ಛಾಯಾಗ್ರಹಣದಲ್ಲಿ ಗೋವಿಂದರಾಜ ಜವಳಿ, ಬಸವರಾಜ ಅಳಗವಾಡಿ, ಸದ್ದಾಂಹುಸೇನ ಮುಲ್ಲಾ, ಸಾಮಾಜಿಕ ಕ್ಷೇತ್ರದಲ್ಲಿ ಬಾಬಾಜಾನ ಮುಧೋಳ, ಚನ್ನವೀರ ಮುಂಗುರವಾಡಿ, ಸಂಜೀವ ಬಡಸ್ಕರ್‌ ಸೇರಿದಂತೆ 144 ವಿವಿಧ ಕ್ಷೇತ್ರಗಳ ಸಾಧಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ವಿವರಿಸಿದರು.

ನನ್ನ ಅಧ್ಯಕ್ಷತೆಯಲ್ಲಿ ರಚಿಸಲಾದ ಧೀಮಂತ ಸನ್ಮಾನ ಸಮಿತಿಯಲ್ಲಿ ವಿರೋಧ ಪಕ್ಷದ ನಾಯಕ ಮಹ್ಮದ ಇಲಿಯಾಸ್ ಮನಿಯಾರ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ತಿಪ್ಪಣ್ಣ ಮಜ್ಜಗಿ, ದೊರಾಜ ಮಣಿಕುಂಟ್ಲ ಸದಸ್ಯರಾಗಿದ್ದರು. ಪಾಲಿಕೆಯ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಧರ ದಂಡಪ್ಪನವರ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು ಎಂದರು.

ರಾಜ್ಯೋತ್ಸವ ಆಚರಣೆಯ ವರ್ಷಕ್ಕೆ ಸರಿಸಮವಾಗಿ ಈ ಸಲ 72 ಜನರಿಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿತ್ತು. ಆದರೆ, ಪ್ರಶಸ್ತಿ ಆಕಾಂಕ್ಷಿಗಳಿಂದ ಅರ್ಜಿಗಳ ಸಂಖ್ಯೆ ಹೆಚ್ಚು ಬಂದಿದ್ದವು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಒಟ್ಟು 600ಕ್ಕೂ ಹೆಚ್ಚು ವ್ಯಕ್ತಿಗಳು ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಅರ್ಹತೆ, ವಯಸ್ಸಿನ ಹಿರಿತನ ಹಾಗೂ ಇತರ ಅಂಶಗಳನ್ನು ಪರಿಗಣಿಸಿ, ಅಂತಿಮ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.

ಇಂದು ಪ್ರಶಸ್ತಿ ಪ್ರದಾನ:

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನ. 18ರಂದು ಬೆಳಗ್ಗೆ 10 ಗಂಟೆಗೆ ನಗರದ ಸಿದ್ಧಾರೂಢಸ್ವಾಮಿ ಮಠದಿಂದ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಮೆರವಣಿಗೆ ಅಲ್ಲಿಂದ ಆರಂಭವಾಗಿ ನಗರದ ಇಂದಿರಾ ಗ್ಲಾಸ್ ಹೌಸ್ ತಲುಪಲಿದೆ. ಸಂಜೆ ಇಂದಿರಾ ಗಾಜಿನ ಮನೆ ಉದ್ಯಾನದಲ್ಲಿ ಸಂಜೆ 5ಗಂಟೆಗೆ ನಡೆಯಲಿರುವ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ, ಸನ್ಮಾನಿಸಲಾಗುವುದು ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿ
ವಿಶ್ವಮಟ್ಟದ ಶ್ರೇಷ್ಠ ವಾಸ್ತುಶಿಲ್ಪಗಳ ತಾಣ ವಿಜಯಪುರ