ಸಾಹಿತ್ಯ ಕೃತಿ ಓದುವಿಕೆ ಮಕ್ಕಳ ದಿನಚರಿಯ ಭಾಗವಾಗಬೇಕು: ವಿಜಯಲಕ್ಷ್ಮಿ

KannadaprabhaNewsNetwork |  
Published : May 16, 2024, 12:47 AM IST
39 | Kannada Prabha

ಸಾರಾಂಶ

ಬಾಲ್ಯದಿಂದಲೂ ಪರಿಸರದ ಜೊತೆಗೆ ನಿಕಟ ಒಡನಾಟವಿದ್ದ ಕುವೆಂಪು ಮತ್ತು ತೇಜಸ್ವಿ ಅವರ ಕೃತಿಗಳಲ್ಲಿ ಸಹಜ ಬದುಕಿನ ಮಾದರಿಗಳಿವೆ. ಪೋಷಕರು ಮಕ್ಕಳಿಗೆ ಇಂತಹ ಕೃತಿಗಳು ಲಭಿಸುವಂತೆ ಮಾಡಿ, ಅವರಲ್ಲಿ ಓದುವ ಅಭಿರುಚಿ ಬೆಳೆಸುವ ಮೂಲಕ ಸಾಂಸ್ಕೃತಿಕ ವ್ಯಕ್ತಿತ್ವ ಅರಳಿಸಲು ಅನುವು ಮಾಡಿಕೊಡಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಉತ್ತಮ ಸಾಹಿತ್ಯ ಕೃತಿಗಳ ಓದುವಿಕೆ ಮಕ್ಕಳ ಬದುಕಿನ ದಿನಚರಿಯ ಭಾಗವಾಗಬೇಕು. ಆಗ ಅವರುಸಾಹಿತ್ಯ ಓದಿನ ಮೂಲಕ ಅನುಭವಗಳನ್ನು ಮರು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಹಾರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ. ಡಿ. ವಿಜಯಲಕ್ಷ್ಮಿ ಅಭಿಪ್ರಾಯಪಟ್ಟರು.

ಅದಮ್ಯ ರಂಗಶಾಲೆಯ ವತಿಯಿಂದ ನಗರದ ಜಯಲಕ್ಷ್ಮಿಪುರಂನ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಕುವೆಂಪು ರಂಗಮಂದಿರದಲ್ಲಿ ನಡೆದ ಬಾಲಂಗೋಚಿ ಬೇಸಿಗೆ ಶಿಬಿರದ ಸಮಾರೋಪ, ಜಾನಪದ ನೃತ್ಯ ಮತ್ತು ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯದಿಂದಲೂ ಪರಿಸರದ ಜೊತೆಗೆ ನಿಕಟ ಒಡನಾಟವಿದ್ದ ಕುವೆಂಪು ಮತ್ತು ತೇಜಸ್ವಿ ಅವರ ಕೃತಿಗಳಲ್ಲಿ ಸಹಜ ಬದುಕಿನ ಮಾದರಿಗಳಿವೆ. ಪೋಷಕರು ಮಕ್ಕಳಿಗೆ ಇಂತಹ ಕೃತಿಗಳು ಲಭಿಸುವಂತೆ ಮಾಡಿ, ಅವರಲ್ಲಿ ಓದುವ ಅಭಿರುಚಿ ಬೆಳೆಸುವ ಮೂಲಕ ಸಾಂಸ್ಕೃತಿಕ ವ್ಯಕ್ತಿತ್ವ ಅರಳಿಸಲು ಅನುವು ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ನಗರ ಪ್ರದೇಶಗಳಲ್ಲಿ ಹೆತ್ತವರು ಉದ್ಯೋಗಸ್ಥರಾದ ಕಾರಣ ರಜೆಯ ಅವಧಿಯಲ್ಲಿ ಮಕ್ಕಳನ್ನು ನಿಭಾಯಿಸುವುದು ಸವಾಲಿನ ಕೆಲಸ. ಹಾಗಾಗಿ ಇಂದಿನ ದಿನಮಾನಗಳಲ್ಲಿ ಬೇಸಿಗೆ ಶಿಬಿರಗಳು ವರದಾನವಾಗಿವೆ. ಕಲೆ, ಸಾಹಿತ್ಯ, ಜಾನಪದಗಳಂತಹ ವಿಚಾರಗಳನ್ನು ಕಲಿಸುವ ಮೂಲಕ ಬೇಸಿಗೆ ಶಿಬಿರಗಳು ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತವೆ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಜೆ. ಶಶಿಧರ್ ಪ್ರಸಾದ್ ಮಾತನಾಡಿ, ಬೇಸಿಗೆ ಶಿಬಿರಗಳು ಮಕ್ಕಳನ್ನು ಮೊಬೈಲ್, ಟಿವಿ, ಕಂಪ್ಯೂಟರಿನಂತಹ ತಂತ್ರಜ್ಞಾನದ ವಸ್ತುಗಳಿಂದ ದೂರವಿರಿಸಲು ಸಹಕಾರಿಯಾಗಿವೆ. ಹಾಗೆ, ಸಾಹಿತ್ಯದ ಪುಸ್ತಕಗಳನ್ನು ಹತ್ತಿರವಾಗಿಸುತ್ತವೆ ಎಂದರು.

ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಟಿ. ಸತೀಶ್ ಜವರೇಗೌಡ ಸಮಾರೋಪ ಭಾಷಣ ಮಾಡಿದರು.

ಕೆನರಾ ಬ್ಯಾಂಕಿನ ರಾಮಕೃಷ್ಣನಗರ ಶಾಖೆಯ ಹಿರಿಯ ವ್ಯವಸ್ಥಾಪಕ ಎಸ್. ರಾಜ, ಸಮಾಜ ಸೇವಕರಾದ ಗದ್ದಿಗೆ ಕುಂಟೇಗೌಡ, ರಂಗಶಾಲೆಯ ಕಾರ್ಯದರ್ಶಿ ಚಂದ್ರು ಮಂಡ್ಯ, ಕವಿ ಟಿ. ಲೋಕೇಶ್ ಹುಣಸೂರು, ಪದಾಧಿಕಾರಿಗಳಾದ ಡಾ.ಬಿ. ಬಸವರಾಜು, ಕೆ.ಎಸ್. ಸತೀಶ್ ಕುಮಾರ್, ನಾಗೇಶ್ ಕಾವ್ಯಪ್ರಿಯ ಇದ್ದರು.

ಶಿಬಿರದ ಮಕ್ಕಳಿಂದ ವೈದೇಹಿ ರಚನೆಯ ಕತ್ತಲೆ ನಗರಿ ಹಾಗೂ ಲೋಕನಾಥ್ ಸೋಗಂ ರಚನೆಯ ಕಾಡಿನ ನಕ್ಷತ್ರಗಳು ಮಕ್ಕಳ ನಾಟಕ ಪ್ರದರ್ಶನ ಮತ್ತು ಜಾನಪದ ನೃತ್ಯ ಪ್ರದರ್ಶನಗೊಂಡವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!