ಕನ್ನಡಪ್ರಭ ವಾರ್ತೆ ಮಡಿಕೇರಿ
ಜಗತ್ತಿನಲ್ಲಿ ವ್ಯಕ್ತಿಗತವಾಗಿ ರಕ್ತದಾನಕ್ಕಿಂತ ಮಿಗಿಲಾದ ಮತ್ತೊಂದು ದಾನವಿಲ್ಲ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ನಗರದ ಜ್ಯೂನಿಯರ್ ಕಾಲೇಜ್ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಎನ್ಎಸ್‌ಯುಐ ಘಟಕದ ಅಧ್ಯಕ್ಷ ರಾಶೀದ್ ಅಯ್ಯಂಗೇರಿ ಮತ್ತು ಪದಾಧಿಕಾರಿಗಳು ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಹುಟ್ಟು ಹಬ್ಬದ ಪ್ರಯುಕ್ತ ಏರ್ಪಡಿಸಿದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸತ್ತ ವ್ಯಕ್ತಿಯನ್ನು ಬದುಕಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಸಾಯುವ ವ್ಯಕ್ತಿಯನ್ನು ರಕ್ತದಾನದ ಮೂಲಕ ಬದುಕಿಸುವ ಪುಣ್ಯ ಕೆಲಸವನ್ನು ನಾವು ಮಾಡಬಹುದು. ಆದ್ದರಿಂದ ವಿದ್ಯಾರ್ಥಿಗಳು ರಕ್ತದಾನ ದಂತಹ ಪವಿತ್ರ ಕಾರ್ಯಕ್ಕೆ ಮುಂದೆ ಬರಬೇಕು ಎಂದು ಕರೆ ನೀಡಿದರು.ಕೊಡಗು ವೈದ್ಯಕೀಯ ಕಾಲೇಜಿನ ರಕ್ತ ನಿಧಿ ಕೇಂದ್ರದ ಮುಖ್ಯಸ್ಥ ಡಾ ಕರುಂಬಯ್ಯ ಮಾತನಾಡಿ, ದೇಶದಲ್ಲಿ ಚಿಕಿತ್ಸೆಗೆ ರಕ್ತದ ಕೊರತೆ ಇದ್ದು ಸಂಘ ಸಂಸ್ಥೆಗಳು ರಕ್ತದಾನ ಶಿಬಿರದ ಮೂಲಕ ರಕ್ತ ಸಂಗ್ರಹಣೆಗೆ ಸಹಕರಿಸಲು ಕೋರಿದರು. ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಯುವ ಸಮೂಹ ಮುಂದೆ ಬರಬೇಕು ಎಂದು ವಿನಂತಿಸಿದರು.
ರಕ್ತದಾನದಿಂದ ದಾನಿಯ ದೇಹಕ್ಕೆ ಯಾವುದೇ ರೀತಿಯ ಅಡ್ಡ ಪರಿಣಾಮ ಇರುವುದಿಲ್ಲ. ಬದಲಿಗೆ ರಕ್ತ ದಾನ ಮಾಡಿದ ವ್ಯಕ್ತಿ ಹೃದ್ರೋಗ, ಡಯಾಬಿಟಿಕ್ ಮುಂತಾದ ಅನೇಕ ರೋಗಗಳಿಂದ ದೂರ ಇರಬಹುದು ಎಂದು ವಿವರಣೆ ನೀಡಿದರು.18-60 ವರ್ಷದ ವರೆಗಿನ 45 ಕೆ.ಜಿ .ತೂಕವನ್ನು ಮೀರಿರುವ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬಹುದು ಎಂದು ಮಾಹಿತಿ ನೀಡಿದರು.ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಕೊಡಗು ಜಿಲ್ಲಾ ಎನ್.ಎಸ್.ಯು.ಐ ಘಟಕ ಬಹಳ ಉತ್ತಮ ಕಾರ್ಯಕ್ಕೆ ಮುಂದಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಪದವಿ ಪೂರ್ವ ಕಾಲೇಜಿನ ಹಿರಿಯ ಶಿಕ್ಷಕಿ ಸೌಮ್ಯಲತಾ ಮಾತನಾಡಿ, ರಕ್ತದಾನದಿಂದ ವ್ಯಕ್ತಿಗೆ ಯಾವುದೇ ಆರೋಗ್ಯ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದರು.ಕೂರ್ಗ್ ಬ್ಲಡ್ ಡೊನರ್ಸ್ ಗ್ರೂಪಿನ ಮುಖ್ಯಸ್ಥ ಸಮೀರ್, ಬ್ಲಡ್ ಬಯ್ಯಾ, ಎನ್ಎಸ್‌ಯುಐ ಉಪಾಧ್ಯಕ್ಷ ಹ್ಯಾರಿಸ್, ಘನಶ್ರೀ, ಪ್ರಧಾನ ಕಾರ್ಯದರ್ಶಿಗಳಾ ದ ಪ್ರತಾಪ್, ಮಿದ್ಲಾಜ್, ಪದಾಧಿಕಾರಿಗಳಾದ ಅರ್ಜುನ್, ಕಾರ್ತಿಕ್ ಸೇರಿದಂತೆ ಪದವಿ ಕಾಲೇಜಿನ ವಿಧ್ಯಾರ್ಥಿಗಳು ಭಾಗವಹಿಸಿ ರಕ್ತದಾನ ಮಾಡಿದರು.