ನಮ್ಮ ಮಕ್ಕಳ ಧಾಮವನ್ನು ನೋಂದಣಿ ನವೀಕರಣಕ್ಕೆ ಆಗ್ರಹ

KannadaprabhaNewsNetwork | Published : May 16, 2024 12:47 AM

ಸಾರಾಂಶ

ಪಡಗಾನೂರಿನ ನಮ್ಮ ಮಕ್ಕಳ ಧಾಮವನ್ನು ಬಾಲ ನ್ಯಾಯ ಕಾಯಿದೆ ಅಡಿಯಲ್ಲಿ ನೋಂದಣಿ ನವೀಕರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪಡಗಾನೂರಿನ ನಮ್ಮ ಮಕ್ಕಳ ಧಾಮವನ್ನು ಬಾಲ ನ್ಯಾಯ ಕಾಯಿದೆ ಅಡಿಯಲ್ಲಿ ನೋಂದಣಿ ನವೀಕರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ಕಾಶಿಪತಿ ಕುದರಿ ಮಾತನಾಡಿ, ದೇವರಹಿಪ್ಪರಗಿ ತಾಲೂಕಿನ ಪಡಗಾನೂರ ಗ್ರಾಮದ ಹದ್ದಿಯಲ್ಲಿ ಬರುವ ಉಜ್ವಲ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಅಡಿಯಲ್ಲಿ ನಮ್ಮ ಮಕ್ಕಳ ಧಾಮ ಎಂಬ ಹೆಸರಿನ ಮಕ್ಕಳ ಮನರ್ವಸತಿ ಕೇಂದ್ರವನ್ನು ೧೬ ವರ್ಷಗಳಿಂದ ನಡೆಸಲಾಗುತ್ತಿದೆ. ಈ ಧಾಮವು ಸರ್ಕಾರದ ಯಾವುದೇ ಅನುದಾನ ಪಡೆಯದೇ ಸಮುದಾಯದ ನಾಯಕತ್ವದಲ್ಲಿ ಮಹಾ ದಾನಿಗಳ ಮೂಲಕವೇ ನಡೆಯುತ್ತಿದೆ. ನಾವು ಕಂಡಿರುವಂತೆ ಸದರಿ ಧಾಮವು ಮಕ್ಕಳ ಸ್ನೇಹಿ ವಾತಾವರಣ ಹೊಂದಿದ್ದು, ಮಕ್ಕಳಿಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳು ಲಭ್ಯ ಇವೆ. ಈಗ ಈ ಧಾಮದ ನೋಂದಣಿ ನವೀಕರಿಸಬೇಕಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸಂಸ್ಥೆಯವರು ದಿ.೨೭/೦೩/೨೦೨೪ ಮತ್ತು ೧೮/೦೪/೨೦೨೪ ರಂದು ಎರಡು ಬಾರಿ ತಮಗೆ ಪತ್ರ ನೀಡಿದರೂ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ನಿರ್ಲಕ್ಷತನ, ನಿಷ್ಕಾಳಜಿತನ ಹಾಗೂ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ದೂರಿದರು.

ನಮ್ಮ ಮಕ್ಕಳ ಧಾಮದ ನೋಂದಣಿ ರದ್ದು ಮಾಡುವುದಾಗಿ ವದಂತಿಗಳು ಹರಡುತ್ತಿವೆ. ಇದಕ್ಕೆ ತಾವು ಆಸ್ಪದ ನೀಡಬಾರದು. ಅನಾಥ ಮತ್ತು ಅಪಾಯದ ಅಂಚಿನಲ್ಲಿರುವ ಮಕ್ಕಳ ಆಶ್ರಯ ತಾಣವಾಗಿರುವ ನಮ್ಮ ಮಕ್ಕಳ ಧಾಮದ ನೋಂದಣಿ ಒಂದು ವೇಳೆ ರದ್ದಾದರೆ , ಮಕ್ಕಳ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿ, ಅನುಭವ ಹೊಂದಿದ ಸಂಸ್ಥೆಯನ್ನು ನಮ್ಮ ಕೈಯಾರೆ ಕೊಲೆ ಮಾಡಿದಂತಾಗುತ್ತದೆ. ಹಾಗೂ ಮಕ್ಕಳಿಗೆ ದೊರೆಯಬೇಕಾದ ಹಕ್ಕುಗಳಿಂದ ವಂಚಿತರನ್ನಾಗಿ ಮಾಡಿದಂತಾಗುತ್ತದೆ ಎಂದರು.

ಜಿಲ್ಲಾ ತನಿಖಾ ತಂಡವು ನಮ್ಮ ಮಕ್ಕಳ ಧಾಮಕ್ಕೆ ಭೇಟಿ ನೀಡಿದಾಗ, ತಂಡದ ಎಲ್ಲಾ ಸದಸ್ಯರು ಸಕಾರಾತ್ಮಕ ವರದಿ ನೀಡಿದ್ದಾರೆ. ಇಲ್ಲಿ ಯಾವ ಕುಂದುಕೊರತೆಗಳು ಇಲ್ಲದಂತೆ ದಾನಿಗಳ ಮೂಲಕವೇ ಮುನ್ನಡೆಸುತ್ತಿರುವ ಹಾಗೂ ಬೆರಳೆಣಿಕಷ್ಟೆ ನೋಡಲು ಸಿಗುವ ಇಂತಹ ಪ್ರಾಮಾಣಿಕ ಮತ್ತು ಪಾರದರ್ಶಕ ಕೇಂದ್ರಕ್ಕೆ ಮೇಲಿಂದ ಮೇಲೆ ಸಮಸ್ಯೆ ಒಡ್ಡುತ್ತಿರುವುದು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಮಾಡಿದಂತೆ ಅಲ್ಲವೆ ? ಎಂದು ಪ್ರಶ್ನಿಸಿದರು.ಒಂದು ವೇಳೆ ನವೀಕರಣಕ್ಕೆ ಕ್ರಮ ವಹಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದೆಂದು ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಹೀರಾಚಂದ ಎಸ್. ಗಾಂಧಿ, ಆನಂದ ಕುಲಕರ್ಣಿ, ಶ್ರೀಶೈಲ ಮುಳಜಿ, ಶ್ರೀಇಕಾಂತ ಬ. ರಡ್ಡಿ, ಚನ್ನಬಸಪ್ಪ ಜೋಗೂರ, ಸುನೀಲ ಲ. ಚಾಕರೆ, ಬಸವರಾಜ ಶಿ. ಗಿಡ್ನವರ, ಶಶಿಕಲಾ ಎ. ಜಾಬೇನವರ, ಅಪ್ಪು ಸಿದ್ದಪ್ಪ ದೊಡ್ಡಮನಿ, ಕಲ್ಲಪ್ಪ ಶಿವಾನಂದ ನಂದರಗಿ, ಸಂಜು ಇರಕಲ್, ಬಸವರಾಜ ತಾಳಿಕೋಟಿ, ನವೀನ ಶಿ. ಮಲಘಾಣದಿನಿ ಮುಂತಾದವರು ಇದ್ದರು.

Share this article