ಕನ್ನಡಪ್ರಭ ವಾರ್ತೆ ನಾಪೋಕ್ಲು
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದ ಶಾಲಾ ಪ್ರಾಂಶುಪಾಲರಾದ ನೀತಾ ಕೆ.ಡಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಗತಿಯ ಮೂಲಕ ಕನ್ನಡಾಭಿಮಾನವನ್ನು ಬೆಳೆಸಿಕೊಳ್ಳಿರೆನ್ನುವ ಕಿವಿಮಾತನ್ನು ಹೇಳುತ್ತಾ ತಮ್ಮ ಶೈಕ್ಷಣಿಕ ಪ್ರಗತಿಯಲ್ಲಿ ಗುರಿ ತಲುಪಿ ದೇಶ-ವಿದೇಶಗಳಲ್ಲಿ ಹೆಸರುಗಳಿಸಿರೆಂದು ಆಶಿಸಿದರು.
ಮಡಿಕೇರಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಡ್ಲೆರ ತುಳಸಿ ಮೋಹನ್ ಇವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮೊಳಗೆ ಅಡಗಿರುವ ಕಲೆಯನ್ನು ಹೊರತರಲು ಇಂತಹ ಸಂಭ್ರಮಾಚರಣೆಗಳು ಅವಶ್ಯಕ ಎಂದು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಬಾಳೆಯಡ ದಿವ್ಯಾ ಮಂದಪ್ಪ ಮಾತನಾಡಿ ವಿದ್ಯಾರ್ಥಿಗಳ ಶಿಸ್ತು ಶಿಕ್ಷಣ ಮತ್ತು ಗುರಿ ಸಾಧನೆಗೆ ದಾರಿಯಾಗುವುದು ಎಂದು ಹೇಳಿದರು.
ಕನ್ನಡ ಶಿಕ್ಷಕಿ ರೂಪ ಮಾತನಾಡಿ ಕನ್ನಡದ ಹೆಸರು ಜಗಕೆ ಸಾರುವಂತೆ ಮಾಡಿದ ಕನ್ನಡದ ಕವಿಪುಂಗವರನ್ನು ನೆನಪಿಸಿಕೊಂಡರು.
ಹಾಗೆಯೇ ವಿದ್ಯಾರ್ಥಿಗಳಿಂದ ಕರ್ನಾಟಕವನ್ನು ಹೊಗಳಿ ಕೊಂಡಾಡುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಬೋಧಕ ಬೋಧಕೇತರ ವೃಂದದವರು ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ನಿಶಾ ಪ್ರಾರ್ಥಿಸಿದರು, ಕೀರ್ತನ ಸ್ವಾಗತಿಸಿ, ಅಂಜಲಿ ನಿರೂಪಿಸಿ ಪ್ರೀತೇಶ್ ವಂದಿಸಿದರು.