)
ಸೋಮವಾರಪೇಟೆ: ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಇಲ್ಲಿನ ಪಿಎಂಶ್ರೀ ಶಾಲಾ ಮೈದಾನದಲ್ಲಿ 71ನೇ ಕನ್ನಡ ರಾಜ್ಯೋತ್ಸವ ನಡೆಯಿತು.ತಹಸೀಲ್ದಾರ್ ಕೃಷ್ಣಮೂರ್ತಿ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಯನ್ನು ಸಂಘ ಕಟ್ಟಿ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದ್ದು, ನಮಗೆ ಭಾಷಾ ಉಳಿವಿಗೆ ಎಲ್ಲೆಡೆ ಭಾಷೆ ಬಳಕೆ ಹೆಚ್ಚಾಗಬೇಕು. ರಾಜ್ಯದಲ್ಲಿ ಅನ್ಯ ಭಾಷಿಕರ ಹಾವಳಿಯಿಂದಾಗಿ ಭಾಷೆಗೆ ಸಿಗಬೇಕಾದ ಮಾನ್ಯತೆ ಸಿಗುತ್ತಿಲ್ಲ. ನಿಸರ್ಗದ ತವರಾದ ಕೊಡಗಿನಲ್ಲಿ ನೆಲ, ಜಲ, ಭಾಷೆ ಉಳಿವಿಗೆ ಎಲ್ಲರೂ ಮುಂದಾಗಬೇಕೆಂದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಕೂಡಿಗೆ ಡಯಟ್‌ನ ನಿವೃತ್ತ ಹಿರಿಯ ಉಪನ್ಯಾಸಕ ಕೆ.ಎಸ್. ಶಿವಕುಮಾರ್ ಮಾತನಾಡಿ, ಕನ್ನಡಿಗರ ಔದಾರ್ಯ ಹೆಚ್ಚಾಗಿರುವುದು ಕನ್ನಡ ಭಾಷೆಗೆ ಹಿನ್ನೆಡೆಯಾಗುತ್ತಿದೆ. ನಮ್ಮ ಭಾಷೆಗೆ ಹಲವಾರು ಕವಿಗಳು, ವಚನಕಾರರು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದು, ಇಂದಿಗೂ ಅದು ಜನ ಮಾನಸದಲ್ಲಿ ಉಳಿದಿದೆ. ಆದರೆ, ನಾವು ಅನ್ಯ ಭಾಷಿಕರಿಗೆ ತೋರುವ ಆತಿಥ್ಯದಿಂದಾಗಿ ರಾಜ್ಯದಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ನಮ್ಮ ಭಾಷಿಕರನ್ನು ಹುಡುಕಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಎಲ್ಲರೂ ಭಾಷೆಯನ್ನು ಉಳಿಸಿ ಬೆಳೆಸಲು ಮುಂದಾಗಬೇಕೆಂದರು.
ವೇದಿಕೆಯಲ್ಲಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎ. ಆದಮ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಡಿ. ವಿಜೇತ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಕೃಷ್ಣಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ರಾಷ್ಟ್ರೀಯ ಹಬ್ಬಗಳ ಸಮಿತಿ ಸದಸ್ಯರು ಇದ್ದರು. ಕಾರ್ಯಕ್ರಮಕ್ಕೂ ಮುನ್ನ ವಿವಿಧ ಶಾಲೆಗಳಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಕೊನೆಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಪ್ರದರ್ಶನ ನಡೆಯಿತು.