ಹುಣಸೂರಿನಲ್ಲಿ ಸಡಗರದೊಂದಿಗೆ ಕನ್ನಡ ರಾಜ್ಯೋತ್ಸವ ಆಚರಣೆ

KannadaprabhaNewsNetwork |  
Published : Nov 02, 2025, 02:00 AM IST
54 | Kannada Prabha

ಸಾರಾಂಶ

ಬದುಕಿಗೆ ಅನಿವಾರ್ಯವಾಗಿ, ಬೇರೆ ಭಾಷೆಗಳ ಬಳಕೆಯ ಅವಶ್ಯಕತೆ ಇದೆ. ಬೇರೆ ಭಾಷೆಗಳನ್ನು ತಿಳಿಯೋಣ, ಜೊತೆಗೆ ಮಾತೃಭಾಷೆಯನ್ನು ಬೆಳೆಸೋಣ. ಇಂದಿನ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಮೇಲಿನ ಹಿಡಿತವೇ ಇಲ್ಲದಂತಾಗಿದೆ.

ಕನ್ನಡಪ್ರಭ ವಾರ್ತೆ ಹುಣಸೂರು

ತಾಲೂಕಿನಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ನಾಡಗೀತೆ ಸಾಮೂಹಿಕ ಗಾಯನ, ಕನ್ನಡ ನಾಡಿನ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಮೆರವಣಿಗೆಯ ಮೂಲಕ ಸಂಭ್ರಮ ಸಡಗರದೊಂದಿಗೆ ಆಚರಿಸಿತು.

ಪಟ್ಟಣದ ಮುನೇಶ್ವರ ಕಾವಲ್ ಮೈದಾನದಲ್ಲಿ ಶನಿವಾರ ಶಾಸಕ ಜಿ.ಡಿ. ಹರೀಶ್ ಗೌಡ ಕನ್ನಡ ನಾಡ ಧ್ವಜಾರೋಹಣ ನೆರವೇರಿಸಿದರು.

ರಾಷ್ಟ್ರ ಧ್ವಜಾರೋಹಣವನ್ನು ಉಪವಿಭಾಗಾಧಿಕಾರಿ ಎಚ್.ಬಿ. ವಿಜಯಕುಮಾರ್ ನೆರವೇರಿಸಿದರು. ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಜಯ ಭಾರತ ಜನನಿಯ ತನುಜಾತೆ ಹಾಡಿಗೆ 100 ವಸಂತಗಳ ಸಂಭ್ರಮದ ಸವಿನೆನಪಿಗಾಗಿ ಪಟ್ಟಣದ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಆಗಮಿಸಿದ್ದ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನಾಡಗೀತೆಯ ಸಮೂಹಗಾಯನ ನಡೆಸುವ ಮೂಲಕ ರಾಜ್ಯೋತ್ಸವಕ್ಕೆ ಮೆರುಗು ತಂದರು.

ಪಟ್ಟಣದ ಕಲ್ಕುಣಿಕೆ ರಂಗನಾಥ ಬಡಾವಣೆಯಿಂದ ತಾಯಿ ಭುನವೇಶ್ವರಿದೇವಿಯ ವಿಗ್ರಹವನ್ನು ಒಳಗೊಂಡ ಭವ್ಯ ಮೆರವಣಿಗೆಗೆ ಶಾಸಕ ಜಿ.ಡಿ. ಹರೀಶ್ ಗೌಡ ಚಾಲನೆ ನೀಡಿದರು.

ಹೊಸ ಬರಹಗಾರರು ಉದಯಿಸಲಿ:

ಧ್ವಜಾರೋಹಣ ನೆರವೇರಿಸಿದ ಶಾಸಕ ಜಿ.ಡಿ.ಹರೀಶ್ ಗೌಡ ಮಾತನಾಡಿ, ಬದುಕಿಗೆ ಅನಿವಾರ್ಯವಾಗಿ, ಬೇರೆ ಭಾಷೆಗಳ ಬಳಕೆಯ ಅವಶ್ಯಕತೆ ಇದೆ. ಬೇರೆ ಭಾಷೆಗಳನ್ನು ತಿಳಿಯೋಣ, ಜೊತೆಗೆ ಮಾತೃಭಾಷೆಯನ್ನು ಬೆಳೆಸೋಣ. ಇಂದಿನ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಮೇಲಿನ ಹಿಡಿತವೇ ಇಲ್ಲದಂತಾಗಿದೆ. ಕನ್ನಡ ಸಾಹಿತ್ಯಕ್ಕೆ ಹೊಸ ಬರಹಗಾರರು ಉದಯಿಸುವಂತಾಗಬೇಕು. ಈ ನೆಲದ ಸಂಸ್ಕೃತಿ, ಭಾಷೆಯ ಗುಣ ತಿಳಿಸುವ ಸಾಹಿತ್ಯ ಬರಬೇಕು ಎಂದರು.

ಉಪವಿಭಾಗಾಧಿಕಾರಿ ಎಚ್.ಬಿ. ವಿಜಯಕುಮಾರ್ ಮಾತನಾಡಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕವು ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಕರೆತಂದು ನಾಡಗೀತೆಯ ಸಾಮೂಹಿಕ ಗಾಯನ ಕಾರ್ಯಕ್ರಮ ಆಯೋಜಿಸುವ ಮೂಲಕ ರಾಜ್ಯೋತ್ಸವ ಸಂಭ್ರಮಕ್ಕೆ ವಿಶೇಷತೆ ನೀಡಿತು. ಪ್ರಮುಖ ವೃತ್ತಗಳಲ್ಲಿನ ಆಟೋ ಚಾಲಕರ ಸಂಘ, ಕಾರು ಚಾಲಕರ ಸಂಘದ ಸದಸ್ಯರು ತಮ್ಮ ನಿಲ್ದಾಣಗಳನ್ನು ದೀಪಾಲಂಕಾರಗಳಿಂದ ಸಿಂಗರಿಸಿ ತಾಯಿ ಭುವನೇಶ್ವರಿ ದೇವಿಯ ವಿಗ್ರಹವಿರಿಸಿ ಪೂಜೆಗೈದು ಅನ್ನಸಂತರ್ಪಣೆ ನಡೆಸಿ ಸಂಭ್ರಮಿಸಿದರು.

ತಹಸೀಲ್ದಾರ್ ಜೆ.ಮಂಜುನಾಥ್, ಶಿರಸ್ತೇದಾರ್ ಶ್ರೀಪಾದ್ ನಲವತ್ತ್ ವಾಡಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹದೇವ್, ಪೌರಾಯುಕ್ತೆ ಕೆ. ಮಾನಸ, ವಿ.ಎನ್. ದಾಸ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಎಸ್. ಜಯರಾಂ, ಪಿ.ಆರ್. ರಾಚಪ್ಪ, ಸುಬ್ಬರಾವ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಚ್. ಮಹದೇವ, ಟಿ. ಲೋಕೇಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರಮೇಶ್, ಶಿಕ್ಷಕವೃಂದ, ಮತ್ತು ರೋಟರಿ ವಿದ್ಯಾಸಂಸ್ಥೆ, ಸೇಂಟ್ ಜೋಸೆಫ್, ಲಾ ಸಲೇಟ್, ನ್ಯೂ ಕೇಂಬ್ರಿಡ್ಜ್, ಜೆಎಸ್ಎಸ್, ಶಾಸ್ತ್ರಿ ವಿದ್ಯಾಸಂಸ್ಥೆ ಸೇರಿದಂತೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಇದ್ದರು.

ಗ್ರಾಮೀಣ ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ದೊರೆಯುತ್ತದೆ

ಕನ್ನಡಪ್ರಭ ವಾರ್ತೆ ರಾವಂದೂರು

ಗ್ರಾಮೀಣ ಮಟ್ಟದ ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ದೊರೆಯುತ್ತದೆ ಎಂದು ಗ್ರಾಪಂ ಸದಸ್ಯ ಎಚ್.ಆರ್. ದೀಪು ಹೇಳಿದರು. ತಾಲೂಕು ಹಂಡಿತವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಿಸಿ ಅವರು ಮಾತನಾಡಿದರು.

ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗಿಂತಲೂ ಉತ್ತಮ ಶಿಕ್ಷಣ ದೊರೆಯುತ್ತಿದ್ದು, ಖಾಸಗಿ ಶಿಕ್ಷಣದ ವ್ಯಾಮೋಹವನ್ನು ಬಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಇದನ್ನ ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ಗೌರಮ್ಮ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಂಕರ, ಮುಖ್ಯೋಪಾಧ್ಯಾಯ ಕಾಂತಚಾರಿ, ವೆಂಕಟೇಶ್, ಸತೀಶ್, ಸಂತೋಷ್, ಗೋಪಾಲ್, ಸುರೇಶ್, ಕೃಷ್ಣಶೆಟ್ಟಿ ಇದ್ದರು.

PREV

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ