ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕನ್ನಡ ಕೇವಲ ಒಂದು ಭಾಷೆ ಮಾತ್ರವಲ್ಲ, ಅದು ನಮ್ಮ ಪಾದೇಶಿಕತೆಯ ಅಸ್ಮಿತೆಯಾಗಿದ್ದು, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಪರಂಪರೆಯನ್ನು ಕಟ್ಟಿ ಬೆಳೆಸಿದ ಮಹನೀಯರನ್ನು ಸ್ಮರಿಸಿ ಗೌರವಿಸುವುದು ನಮ್ಮ ಕರ್ತವ್ಯ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಪಥ ಪರಿವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದರು.
ಹಿರಿಯರ ಕನಸು ನನಸಾಗಿಲ್ಲರಾಜ್ಯೋತ್ಸವವು ನಾಡ ಹಬ್ಬವಾಗಿದ್ದು ಕನ್ನಡಿಗರೆಲ್ಲರೂ ಸಂಭ್ರಮಿಸಬೇಕಾದ ಸಂದರ್ಭ. ನಾಡುನುಡಿಗೆ ಸಂಬಂಧಿಸಿದಿಸಿದಂತೆ ನಮ್ಮ ಹಿರಿಯರ ಕನಸುಗಳು ಪೂರ್ಣ ನನಸಾಗಲಿಲ್ಲ. ಭಾಷೆ, ಸಾಹಿತ್ಯ, ಶಿಕ್ಷಣ, ನೀರಾವರಿ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಜೀವಂತವಾಗಿದ್ದು, ನಾವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಸರ್ಕಾರದ ಎಲ್ಲ ಇಲಾಖೆಗಳು ಆಡಳಿತ ಮತ್ತು ಸಂವಹನವನ್ನು ಕನ್ನಡದಲ್ಲಿ ಆಡಳಿತ ನಡೆಸಿ ಜನತೆಗೆ ತಲುಪಿಸಬೇಕು. ಸರ್ಕಾರಿ ಅಧಿಕಾರಿಗಳು ಜನಭಾಷೆಯಲ್ಲಿ ಆಡಳಿತ ನಡೆಸಬೇಕೆಂದು ನಾನು ವಿನಂತಿಸುತ್ತೇನೆ ಎಂದರು.
ನಮ್ಮ ಜಿಲ್ಲೆ ಆಂದ್ರಪ್ರದೇಶದ ಗಡಿಯಾಗಿದ್ದು ಜನಜೀವನದಲ್ಲಿ ತೆಲುಗಿನ ಪ್ರಭಾವವಿದ್ದರೂ ನಾವು ತೆಲುಗು ಭಾಷೆಯನ್ನು ವಿರೋಧಿಸಬೇಕಾಗಿಲ್ಲ. ಭಾಷೆಗಳು ಬೇರೆಯಾದರೂ ನಮ್ಮೆಲ್ಲರ ಭಾವಗಳು ಒಂದೇ ಆಗಬೇಕು. ಕನ್ನಡದ ಸಹೋದರ ಭಾಷೆಗಳು ಮತ್ತು ಸಂಸ್ಕೃತಿಗಳ ನಡುವೆ ಸಾಮರಸ್ಯ ಇರಬೇಕೇ ಹೊರತು ಸಂಘರ್ಷ ಇರಬಾರದು. ಜಿಲ್ಲೆಯ ಜನತೆ ಭಾಷಾ ಸಾಮರಸ್ಯಕ್ಕೆ ಮಾದರಿಯಾಗಿದ್ದಾರೆ. ಸಹೋದರ ಭಾಷೆಗಳ ಕಲಿತು ಬಳಸೋಣ ಆದರೆ ಕನ್ನಡವನ್ನು ತಾಯಿಯಂತೆ ಗೌರವಿಸಿ ಜೀವಿಸೋಣ ಎಂದರು.ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ
ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸುತ್ತಿರುವ ಜೊತೆ ಜೊತೆಗೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ಚಿಮುಲ್ ಹಾಲು ಮತ್ತು ಮೊಸರು ಪ್ಯಾಕಿಂಗ್ ಘಟಕ ನಿರ್ಮಾಣಕ್ಕಾಗಿ ಚಿಕ್ಕಬಳ್ಳಾಪುರ ಹೊರವಲಯದ ಮೆಗಾ ಡೇರಿ ಪಕ್ಕದಲ್ಲಿರುವ ೯.೫ ಎಕರೆ ಜಮೀನನ್ನು ಚಿಮುಲ್ ಗೆ ಹಸ್ತಾಂತರಿಸಲಾಗಿದೆ. ಜಿಲ್ಲಾ ಕನ್ನಡ ಭವನ ಲೋಕಾರ್ಪಣೆ ಮಾಡಲಾಗಿದೆ. ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸುವ ಪ್ರಕ್ರಿಯೆ ಆರಂಭಗೊಂಡಿದೆ ಎಂದರು.ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಜಗತ್ತಿನ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾದ ಕನ್ನಡಕ್ಕೆ 2500 ವರ್ಷಗಳ ಇತಿಹಾಸವಿದೆ. ಜಗತ್ತಿನ ಮೂರನೇ ಅತ್ಯಂತ ಹಳೇಯ ಭಾಷೆ ಕನ್ನಡ ಎಂಬುದೇ ನಮ್ಮೆಲ್ಲರ ಹೆಮ್ಮೆ. ಜಗತ್ತಿಲ್ಲಿ ಅತ್ಯಂತ ಹೆಚ್ಚು ಮಾತನಾಡುವ ಭಾಷೆಗಳ ಪೈಕಿ ಕನ್ನಡ 29ನೇ ಸ್ಥಾನದಲ್ಲಿದೆ. ಎಂಟು ಪ್ರತಿಷ್ಠಿತ ಜ್ಞಾನ ಪೀಠ ಪುರಸ್ಕೃತರು ನಮ್ಮವರು ಎಂದರು.
ಮಕ್ಕಳಿಂದ ನೃತ್ಯ ಪ್ರದರ್ಶನಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಮಕ್ಕಳು ಜನಪ್ರಿಯ ಕನ್ನಡ ಗೀತೆಗಳಿಗೆ ಸಾಮೂಹಿಕ ನೃತ್ಯ ಪ್ರದರ್ಶನ ನೀಡಿದರು. ವಿವಿಧ ಇಲಾಖೆಗಳು,ತಂಡಗಳು ಹಾಗೂ ಪೊಲೀಸ್ ಕವಾಯತು, ಪಥ ಸಂಚಲನ ಗಮನ ಸೆಳೆಯಿತು ಈ ಬಾರಿಯ ಜಿಲ್ಲಾ ಕನ್ನಡ ರಾಜ್ಯೋತ್ಸವದ ಪ್ರಶಸ್ತಿಗೆ ಆಯ್ಕೆಯಾದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಪಂ ಸಿಇಓ ವೈ.ನವೀನ್ ಭಟ್, ಎಸ್ಪಿ ಕುಶಲ್ ಚೌಕ್ಸೆ, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಜಿಲ್ಲಾಧ್ಯಕ್ಷ ಯಲುವಹಳ್ಳಿ ಎನ್.ರಮೇಶ್, ಯೋಜನಾಪ್ರಾಧಿಕಾರದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ನಗರಸಭೆ ಉಪಾಧ್ಯಕ್ಷ ಜೆ.ನಾಗರಾಜ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್, ಎಡಿಸಿ ಡಾ. ಎನ್. ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ತಹಸೀಲ್ದಾರ್ ರಷ್ಮೀ, ಡಿವೈಎಸ್ ಪಿ ಗಳಾದ ಎಸ್.ಶಿವಕುಮಾರ್, ನಾಗೇಂದ್ರಪ್ರಸಾದ್ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.