ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರಾಜ್ಯೋತ್ಸವದ ಅಂಗವಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕನ್ನಡ ಬಾವುಟಗಳನ್ನು ಕಟ್ಟಿ ಪಟ್ಟಣವನ್ನು ಕನ್ನಡಮಯವಾಗಿಸಲಾಗಿದೆ. ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಟಿಎಪಿಸಿಎಂಎಸ್ ಆವರಣದವರೆಗೆ ತಾಯಿ ಭುವನೇಶ್ವರಿ ಮತ್ತು ನಾಡಪ್ರಭು ಕೆಂಪೇಗೌಡರ ಭಾವಚಿತ್ರವನ್ನು ಅಲಂಕೃತ ಬೆಳ್ಳಿ ರಥದಲ್ಲಿಟ್ಟು ಬೃಹತ್ ಮೆರವಣಿಗೆ ನಡೆಸಲಾಗುತ್ತಿದೆ.
ಮೆರವಣಿಗೆಗೆ ರಂಗು ನೀಡಲು ವಿವಿಧ ಜಾನಪದ ಕಲಾತಂಡಗಳು ಆಗಮಿಸುತ್ತಿವೆ. ಸಮುದಾಯದ ಜನ ಸಂಘಟನೆಗಾಗಿ ವೇದಿಕೆ ಸದಸ್ಯರು ತಾಲೂಕಿನ ಪ್ರತಿ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಪೂರ್ವಭಾವಿ ಸಭೆ ನಡೆಸಿ ಜನ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.ತಾಲೂಕಿನಾದ್ಯಂತ ಇರುವ ಒಕ್ಕಲಿಗ ಸಮುದಾಯದ ಪ್ರತಿಯೊಬ್ಬ ರಾಜಕೀಯ ಹಾಗೂ ಸಾಮಾಜಿಕ ಮುಖಂಡರನ್ನು ವೈಯಕ್ತಿಕವಾಗಿ ಭೇಟಿ ಮಾಡಿರುವ ವೇದಿಕೆ ಸದಸ್ಯರು ಸಮುದಾಯದ ವತಿಯಿಂದ ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ.
ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್ ಸೇರಿದಂತೆ 50ಕ್ಕೂ ಹೆಚ್ಚು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ. ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್ ಆವರಣದಲ್ಲಿ ಒಕ್ಕಲಿಗ ಸಮುದಾಯದ ಬೃಹತ್ ಬಹಿರಂಗ ಸಭೆ ನಡೆಯಲಿದೆ. ಸಮುದಾಯ ಸಂಘಟನೆ ಹಿನ್ನೆಲೆಯಲ್ಲಿ ಪಕ್ಷಾತೀತವಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ.
ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಬೇಕು. ಜಿಲ್ಲೆಯ ಎಲ್ಲಾ ತಾಲೂಕುಗಳ ಒಕ್ಕಲಿಗರ ಸಂಘದ ಪದಾಧಿಕಾರಿಗಳನ್ನು ಆಹ್ವಾನಿಸಲಾಗಿದೆ. ಭಾಗವಹಿಸುವ ಸಂಘದ ಪ್ರತಿನಿಧಿಗಳು ಮತ್ತು ಮುಖಂಡರು ಸಾಧ್ಯವಾದಷ್ಟು ಬಿಳಿ ಅಂಗಿ ಮತ್ತು ಪಂಚೆ ಧರಿಸಿ ಬರುವಂತೆ ಒಕ್ಕಲಿಗರ ವೇದಿಕೆ ಅಧ್ಯಕ್ಷ ವಿ.ಎಂ.ಕುಮಾರಗೌಡ ಮನವಿ ಮಾಡಿದ್ದಾರೆ.