ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಆಗ್ನೇಯ ಪದವಿಧರ ಕ್ಷೇತ್ರದ ಮತಪಟ್ಟಿ ತಯಾರಿಕೆ ಸಿದ್ದತೆಗಳನ್ನು ವೀಕ್ಷಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಷ್ಟು ಪದವಿಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗಳಿಗೆ ಹೆಚ್ಚು ಆಸಕ್ತಿ ತೋರದಿರುವುದು ಕಂಡುಬಂದಿದೆ. ಈ ಕಾರಣದಿಂದ ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆಯಲ್ಲಿ ನೋಂದಣಿ ಮಾಡಿಸಿಕೊಳ್ಳದೆ ಅರ್ಹ ಮತದಾರರು ಹೊರಗುಳಿಯುತ್ತಾರೆ. ಅರ್ಹ ಮತದಾರರು ಹೆಸರು ನೊಂದಾಯಿಸಿಕೊಳ್ಳಲು ಅನುವಾಗುವಂತೆ ವ್ಯವಸ್ಥೆ ಸುಧಾರಿಸುವುದು ಅಗತ್ಯವೆಂದರು.
2016ರ ಸರ್ವೋಚ್ಛ ನಾಯಾಲಯದ ತೀರ್ಪಿನ ಅನುಸಾರ ಪ್ರತಿ 6 ವರ್ಷಗಳಿಗೊಮ್ಮೆ ನಡೆಯುವ ಪದವಿ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಒಂದು ವರ್ಷ ಮುನ್ನವೇ ಮತದಾರರ ಪಟ್ಟಿ ತಯಾರಿಕೆಗೆ ಸಿದ್ಧತೆ ಆರಂಭವಾಗುತ್ತಿದೆ. ಈ ವೇಳೆ ಅರ್ಹರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ ನೀಡಲಾಗುತ್ತಿದೆ. ಈಗಿರುವ ನೋಂದಣಿ ನಿಯಮಗಳನ್ನು ಸರಳ ಹಾಗೂ ಪಾದರ್ಶಕವಾಗಿಸುವ ಸಲುವಾಗಿ ದೇಶದ ಎಲ್ಲಾ ಪದವಿ ಹಾಗೂ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಗಳಿಂದ ಸಲಹೆ ಸೂಚನೆಗಳನ್ನು ಆಹ್ವಾನಿಸಲಾಗಿದೆ ಎಂದು ಕಾರ್ಯದರ್ಶಿ ಸುಮನ್ ಕುಮಾರ್ ದಾಸ್ ತಿಳಿಸಿದರು.2020ರಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಒಟ್ಟು 21,024 ಮತದಾರರು ಇದ್ದರು.
ಕಳೆದ ಸೆಪ್ಟೆಂಬರ್ ನಲ್ಲಿ ಜರುಗಿದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಸಂದರ್ಭದಲ್ಲಿ ಗಣತಿದಾರರು ಜಿಲ್ಲೆಯ ಪ್ರತಿ ಕುಟುಂಬದಲ್ಲಿನ ಸದಸ್ಯರ ಶೈಕ್ಷಣಿಕ ವಿವರ ಪಡೆಯುವಾಗ, ಪದವಿ ಶಿಕ್ಷಣ ಪೂರೈಸಿದವರಿಗೆ ಆಗ್ನೇಯ ಪದವಿಧರ ಕ್ಷೇತ್ರದ ಮತದಾರರ ನೋಂದಣಿ ಕುರಿತಂತೆ ಅರಿವು ಮೂಡಿಸಿದ ಪರಿಣಾಮವಾಗಿ, ಮತದಾರರ ನೋಂದಣಿ ಹೆಚ್ಚಳಕ್ಕೆ ಗುರಿ ನಿಗದಿಪಡಿಸಲಾಯಿತು. ಬಿಎಲ್‍ಒಗಳ ಮೂಲಕ ಮನೆ ಮನೆಗೆ ತೆರಳಿ ಅರ್ಹ ಮತದಾರರು ನೋಂದಣಿ ಮಾಡಿಕೊಳ್ಳುವಂತೆ ಪ್ರೇರೇಪಿಸಲಾಯಿತು. ಮಾಧ್ಯಮಗಳ ಮೂಲಕ ಜನರಿಗೆ ಮಾಹಿತಿ ನೀಡಲಾಯಿತು. ಇದರ ಪರಿಣಾಮ ಮತದಾರರ ನೋಂದಣಿ ಸಂಖ್ಯೆ ಹೆಚ್ಚಳವಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸಭೆಯಲ್ಲಿ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಚುನಾವಣೆ ಆಯೋಗದ ಅಧೀನ ಕಾರ್ಯದರ್ಶಿ ಶೀಶ್ ರಾಮ್, ಸಹಾಯಕ ನೊಂದಣಾಧಿಕಾರಿಗಳಾದ ರೈಲ್ವೇ ವಿಶೇಷ ಭೂಸ್ವಾಧೀನಾಧಿಕಾರಿ ಎನ್.ವೆಂಕಟೇಶ್ ನಾಯ್ಕ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನಾಧಿಕಾರಿ ಹೆಚ್.ಎನ್.ಚಂದ್ರಕುಮಾರ್, ಭದ್ರಾ ಮೇಲ್ದಂಡೆ ಭೂಸ್ವಾಧೀನಾಧಿಕಾರಿ ಟಿ.ಸುರೇಶ್ ಕುಮಾರ್ ಸೇರಿದಂತೆ ವಿವಿಧ ತಾಲ್ಲೂಕುಗಳ ತಹಶೀಲ್ದಾರರು ಉಪಸ್ಥಿತರಿದ್ದರು.