ಕನ್ನಡವೆಂದರೆ ಸಂಸ್ಕೃತಿ, ಸ್ವಾಭಿಮಾನದ ಪ್ರತಿಬಿಂಬ: ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ

KannadaprabhaNewsNetwork |  
Published : Nov 02, 2026, 02:30 AM IST
ಪೋಟೋ: 01ಎಸ್‌ಎಂಜಿಕೆಪಿ03ಶಿವಮೊಗ್ಗ ನಗರದ ಸೈನ್ಸ್ ಮೈದಾನದಿಂದ ಕಲಾ ತಂಡಗಳೊಂದಿಗೆ ನೆಹರು ಕ್ರೀಡಾಂಗಣದವರೆಗೆ ಶ್ರೀಭುವನೇಶ್ವರಿ ದೇವಿಯ ಮೆರವಣಿಗೆಗೆಯಲ್ಲಿ ಶಾಸಕ ಚನ್ನಬಸಪ್ಪ ಸೇರಿದಂತೆ ಅಧಿಕಾರಿಗಳು ಹೆಜ್ಜೆ ಹಾಕಿದರು.  | Kannada Prabha

ಸಾರಾಂಶ

ಕನ್ನಡವೆಂದರೆ ಕೇವಲ ಸಂವಹನದ ಭಾಷೆಯಲ್ಲ, ಅದು ನಮ್ಮ ಭಾವನೆ, ಬದುಕಿನ ಕ್ರಮ, ಸಂಸ್ಕೃತಿ ಮತ್ತು ಸ್ವಾಭಿಮಾನದ ಪ್ರತಿಬಿಂಬವಾಗಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಅಂತರ್ಜಾಲ, ಸಾಮಾಜಿಕ ಜಾಲತಾಣಗಳು ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲೂ ಕನ್ನಡ ಭಾಷೆ ಬಳಕೆ ವ್ಯಾಪಕವಾಗಬೇಕು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆಶಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕನ್ನಡವೆಂದರೆ ಕೇವಲ ಸಂವಹನದ ಭಾಷೆಯಲ್ಲ, ಅದು ನಮ್ಮ ಭಾವನೆ, ಬದುಕಿನ ಕ್ರಮ, ಸಂಸ್ಕೃತಿ ಮತ್ತು ಸ್ವಾಭಿಮಾನದ ಪ್ರತಿಬಿಂಬವಾಗಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಅಂತರ್ಜಾಲ, ಸಾಮಾಜಿಕ ಜಾಲತಾಣಗಳು ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲೂ ಕನ್ನಡ ಭಾಷೆ ಬಳಕೆ ವ್ಯಾಪಕವಾಗಬೇಕು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆಶಿಸಿದರು.

ನಗರದ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ, ರಾಜ್ಯೋತ್ಸವ ಸಂದೇಶ ನೀಡಿ ಮಾತನಾಡಿ, ನ. 1 ಕನ್ನಡಿಗರ ಪಾಲಿಗೆ ಕೇವಲ ಒಂದು ದಿನಾಂಕವಲ್ಲ, ಬದಲಿಗೆ ನೂರಾರು ವರ್ಷಗಳ ಹೋರಾಟ, ತ್ಯಾಗ, ಕನಸು ಮತ್ತು ಕನ್ನಡಿಗರ ಒಗ್ಗಟ್ಟಿನ ಸಂಕೇತವಾಗಿದೆ. ಶಿವಮೊಗ್ಗ ಜಿಲ್ಲೆಯು ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜನಪದ ಪರಂಪರೆಯ ಶ್ರೀಮಂತ ನೆಲವಾಗಿದೆ. ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ಜನಿಸಿದ ರಾಷ್ಟ್ರಕವಿ ಕುವೆಂಪು ಅವರು ಸಾರಿದ ವಿಶ್ವಮಾನವ ಸಂದೇಶವು ಇಡೀ ಮಾನವಕುಲಕ್ಕೆ ದಾರಿ ದೀಪವಾಗಿದೆ. ಜಾತಿ, ಧರ್ಮ, ಭಾಷೆಗಳನ್ನು ಮೀರಿ ಮನುಷ್ಯತ್ವವೇ ಶ್ರೇಷ್ಠ ಎಂಬ ಅವರ ಚಿಂತನೆ ಇಂದಿಗೂ ಪ್ರಸ್ತುತ ಎಂದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್. ಅನಂತಮೂರ್ತಿ ಅವರ ಸಾಹಿತ್ಯವು ಸಾಮಾಜಿಕ ಹಾಗೂ ವೈಚಾರಿಕ ಚಿಂತನೆಗಳಿಗೆ ಹೊಸ ಆಯಾಮ ನೀಡಿದೆ. ಶಿವಮೊಗ್ಗ ಜಿಲ್ಲೆಯು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪಪ್ಪ ಹಾಗೂ ಯು.ಆರ್. ಅನಂತಮೂರ್ತಿ ಅವರಂತಹ ಜ್ಞಾನಪೀಠ ಪುರಸ್ಕೃತರನ್ನು ನೀಡುವುದರ ಜೊತೆಗೆ, ಮೂರು ಜನ ಮುಖ್ಯಮಂತ್ರಿಗಳನ್ನು ನಾಡಿಗೆ ನೀಡಿದ ಹೆಮ್ಮೆ ಹೊಂದಿದೆ, ಜೊತೆಗೆ ಸಾಹಿತ್ಯ ದಿಗ್ಗಜರಾದ ಅಕ್ಕಮಹಾದೇವಿಯವರ ವಚನಗಳು, ಗೋಪಾಲಕೃಷ್ಣ ಅಡಿಗ, ಜಿ.ಎಸ್. ಶಿವರುದ್ರಪ್ಪ, ಎಂ.ಕೆ. ಇಂದಿರಾ, ನಾ. ಡಿಸೋಜ, ಎಸ್.ವಿ. ಪರಮೇಶ್ವರ ಭಟ್ಟ, ಕೆ.ವಿ. ಸುಬ್ಬಣ್ಣ ಸೇರಿದಂತೆ ಅನೇಕ ಸಾಹಿತಿಗಳು ಕನ್ನಡದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ ಎಂದು ಬಣ್ಣಿಸಿದರು.

ಈ ಸಾಲಿನ ರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ರಾಜಕಾರಣಿ, ಮಾಜಿ ಸಚಿವರು ಹಾಗೂ ಸಮಾಜವಾದಿ ಚಿಂತನೆಯ ನಾಯಕರಾದ ಕಾಗೋಡು ತಿಮ್ಮಪ್ಪ ಅವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಅತ್ಯಂತ ಸಂತಸದ ವಿಷಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಎಸ್. ಎನ್. ಚನ್ನಬಸಪ್ಪ, ಜಿ.ಪಂ. ಸಿಇಓ ರಿಷಿ ಆನಂದ್, ಎಸ್ಪಿ ಬಿ.ನಿಖಿಲ್, ಅಪರ ಜಿಲ್ಲಾಧಿಕಾರಿ ಅಭಿಷೇಕ್, ಎಸಿ ಡಾ.ಮೈತ್ರಿ ಸೇರಿದಂತೆ ಹಲವರು ಇದ್ದರು.

ರಾಜ್ಯೋತ್ಸವದಲ್ಲಿ ಗಮನ ಸೆಳೆದ ನೃತ್ಯ ಪ್ರದರ್ಶನ

ಕಸ್ತೂರಿ ಬಾ ಪ್ರೌಢಶಾಲೆಯ ಸುಮಾರು 350 ವಿದ್ಯಾರ್ಥಿನಿಯರು ಹಳದಿ, ಕೆಂಪು ಮತ್ತು ನೀಲಿ ಬಣ್ಣದ ಸೀರೆಗಳನ್ನು‌ ಧರಿಸಿ, ತಮ್ಮ ತಲೆಯ ಮೇಲೆ ಕನ್ನಡದ ಕಳಸಗಳನ್ನು ಹೊತ್ತು ಸಾಗಿದ ದೃಶ್ಯ ಅದ್ಭುತವಾಗಿತ್ತು. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು...ಸೇರಿದಂತೆ ಕನ್ನಡ ನಾಡು-ನುಡಿ, ಸಂಸ್ಕೃತಿ ಮತ್ತು ಇತಿಹಾಸವನ್ನು ಬಿಂಬಿಸುವ ಕನ್ನಡದ ಹಾಡುಗಳಿಗೆ ವಿವಿಧ ಶಾಲೆಯ ಮಕ್ಕಳು ಮನ ಸೆಳೆಯುವಂತೆ ಸಾಮೂಹಿಕ ನೃತ್ಯ ಪ್ರದರ್ಶಿಸಿದರು.

ನಗರದ ಸೈನ್ಸ್ ಮೈದಾನದಿಂದ ಕಲಾ ತಂಡಗಳೊಂದಿಗೆ ನೆಹರು ಕ್ರೀಡಾಂಗಣದವರೆಗೆ ಹೊರಟ ಶ್ರೀಭುವನೇಶ್ವರಿ ದೇವಿಯ ಮೆರವಣಿಗೆಗೆ ಜಿಲ್ಲಾಧಿಕಾರಿ ಚಾಲನೆ ನೀಡಿದರು. ಆರ್ ಪಿ ಸೋಮಶೇಖರಪ್ಪ ಕವಾಯತು ಅನುಮತಿ ಪಡೆದು ಕನ್ನಡದಲ್ಲಿ ಆಜ್ಞೆ ನೀಡಿ, ಆಕರ್ಷಕ ಪಥಸಂಚಲನದ ನೇತೃತ್ವ ವಹಿಸಿದರು.

ಕೆಎಸ್‌ಆರ್‌ಪಿ, ಡಿಎಆರ್ ತುಕಡಿ , ಸುಶ್ರಾವ್ಯ ವಾದ್ಯ ತಂಡ, ಡೊಳ್ಳು ಕುಣಿತ, ಕೋಲಾಟ, ವೀರಗಾಸೆ, ಸ್ಯಾಕ್ಸೊಫೋನ್, ಪುರವಂತಿಕೆ, ವಿವಿಧ ಶಾಲೆಗಳ ವಿದ್ಯಾರ್ಥಿಗಳ ವೇಷಭೂಷಣ ಪ್ರದರ್ಶನದೊಂದಿಗೆ ಸಾಗಿದ ತಂಡಗಳು ಆಕರ್ಷಕ ಪಥಸಂಚಲನದೊಂದಿಗೆ ಗೌರವ ವಂದನೆ ಸಲ್ಲಿಸಿದರು.

ಪ್ರಶಸ್ತಿ: ಶಿಸ್ತು ಮತ್ತು ಆಕರ್ಷಕವಾಗಿ ಪಥ ಸಂಚಲನದಲ್ಲಿ ಪಾಲ್ಗೊಂಡ ಮಹಾವೀರ ವಿದ್ಯಾಸಂಸ್ಥೆಗೆ ಪ್ರಥಮ, ಪೋದಾರ್ ಇಂಟರ್ ನ್ಯಾಷನಲ್ ಶಾಲೆಗೆ ದ್ವಿತೀಯ, ಡಿವಿಎಸ್ ಪ್ರೌಢಶಾಲೆಗೆ ತೃತೀಯ ಪ್ರಶಸ್ತಿ ನೀಡಲಾಯಿತು ‌.

ಸ್ತಬ್ದಚಿತ್ರಗಳಿಗೆ ಪ್ರಶಸ್ತಿ: ಕೆಎಸ್‌ಆರ್‌ಟಿಸಿಯ ಸ್ತಬ್ದಚಿತ್ರಕ್ಕೆ ಪ್ರಥಮ, ಆರೋಗ್ಯ ಇಲಾಖೆ ದ್ವಿತೀಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ತೃತೀಯ ಸ್ಥಾನ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜ್ಞಾನೇಶ್ ಕುಮಾರ್‌ ಜೈಲಿಗಟ್ಟುತ್ತೇವೆ : ರಾಹುಲ್‌ ಗುಡುಗು
ಕನ್ನಡ ಬಾವುಟಕ್ಕೆ ನಾಡಧ್ವಜ ಸ್ಥಾನಮಾನ: ಸಿಎಂ