ಇಂದು ಜಗತ್ತು ತಂತ್ರಜ್ಞಾನದ ವೇಗದಲ್ಲಿ ಮುನ್ನಡೆಯುತ್ತಿದೆ. ಕೃತಕ ಬುದ್ಧಿಮತ್ತೆ, ಡಿಜಿಟಲ್ ತಂತ್ರಜ್ಞಾನ, ವಿಜ್ಞಾನ ಮತ್ತು ಸಂಶೋಧನೆಯ ಕ್ಷೇತ್ರಗಳಲ್ಲಿ ಹೊಸ ಬದಲಾವಣೆಗಳು ನಡೆಯುತ್ತಿವೆ. ಈ ಬದಲಾವಣೆಯ ನಡುವೆ ಕನ್ನಡವು ಕೇವಲ ಮನೆಯ ಭಾಷೆಯಾಗಿ ಉಳಿಯಬಾರದು. ಅದು ಜ್ಞಾನದ ಭಾಷೆಯಾಗಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಮಕ್ಕಳು ಕನ್ನಡದಲ್ಲಿ ಕನಸು ಕಾಣಬೇಕು. ಕನ್ನಡದಲ್ಲಿ ಚಿಂತಿಸಬೇಕು, ಜಗತ್ತಿನ ಜ್ಞಾನವನ್ನು ಕನ್ನಡದ ಮೂಲಕವೂ ಅರಿಯುವ ಅವಕಾಶ ಪಡೆಯಬೇಕು. ಇತರೆ ಭಾಷೆಗಳನ್ನು ಕಲಿಯುವುದಕ್ಕೆ ನಾವು ವಿರೋಧಿಗಳಲ್ಲ. ಆದರೆ, ಇತರೆ ಭಾಷೆಗಳನ್ನು ಕಲಿಯುವಾಗ ನಮ್ಮ ಮಾತೃಭಾಷೆಯನ್ನು ಮರೆಯಬಾರದು ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದ ಸಂದೇಶ ಭಾಷಣದಲ್ಲಿ ಮಾತನಾಡಿ, ಇಂದು ಜಗತ್ತು ತಂತ್ರಜ್ಞಾನದ ವೇಗದಲ್ಲಿ ಮುನ್ನಡೆಯುತ್ತಿದೆ. ಕೃತಕ ಬುದ್ಧಿಮತ್ತೆ, ಡಿಜಿಟಲ್ ತಂತ್ರಜ್ಞಾನ, ವಿಜ್ಞಾನ ಮತ್ತು ಸಂಶೋಧನೆಯ ಕ್ಷೇತ್ರಗಳಲ್ಲಿ ಹೊಸ ಬದಲಾವಣೆಗಳು ನಡೆಯುತ್ತಿವೆ. ಈ ಬದಲಾವಣೆಯ ನಡುವೆ ಕನ್ನಡವು ಕೇವಲ ಮನೆಯ ಭಾಷೆಯಾಗಿ ಉಳಿಯಬಾರದು. ಅದು ಜ್ಞಾನದ ಭಾಷೆಯಾಗಬೇಕು. ತಂತ್ರಜ್ಞಾನದ ಭಾಷೆಯಾಗಬೇಕು. ಉದ್ಯೋಗ, ಶಿಕ್ಷಣ, ಸಂಶೋಧನೆ ಮತ್ತು ಆಡಳಿತದ ವಿವಿಧ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬೇಕು ಎಂದರು.
ರಾಜ್ಯದಲ್ಲಿಯೇ ಅತಿ ಹೆಚ್ಚು ಕನ್ನಡ ಮಾತನಾಡುವ ಜನರಿರುವುದು ಮಂಡ್ಯ ಜಿಲ್ಲೆಯಲ್ಲಿ. ಕನ್ನಡವನ್ನು ನಾವು ಹೆಚ್ಚು ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಎತ್ತಿ ಹಿಡಿಯಬೇಕು ಎಂದು ನುಡಿದರು.
ಜಿಲ್ಲೆಯಲ್ಲಿ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಂಡ್ಯ ತಾಲೂಕಿನ ಹಂಪಾಪುರದಲ್ಲಿ ೪೦೦ ಕೆವಿ ವಿದ್ಯುತ್ ಉಪಕೇಂದ್ರ ಸ್ಥಾಪನೆ, ವಿದ್ಯುತ್ ಕೊರತೆ ಅನುಭವಿಸುತ್ತಿರುವ ರೈತರಿಗೆ ಹಾಗೂ ಸಾರ್ವಜನಿಕರಿಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಒದಗಿಸುವ ನಿಟ್ಟಿನಲ್ಲಿ ೪೦೨.೯೨ ಕೋಟಿ ರು. ವೆಚ್ಚದಲ್ಲಿ ಹಾಗೂ ನಾಗಮಂಗಲ ತಾಲೂಕಿನ ಇರುಬ್ಬನಹಳ್ಳಿ ವ್ಯಾಪ್ತಿಯಲ್ಲಿ ೬೬/೧೧ ಕೆವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ ಮತ್ತು ಸಂಬಂಧಿಸಿದ ವಿದ್ಯುತ್ ಮಾರ್ಗ ನಿರ್ಮಾಣವನ್ನು ೧೭.೯೧ ಕೋಟಿ ರು. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಮಂಡ್ಯ, ಶ್ರೀರಂಗಪಟ್ಟಣ ವ್ಯಾಪ್ತಿಯ ಕಾವೇರಿ, ಕೆರಗೋಡು, ಶಿಂಷಾ, ಲೋಕಸರ ಶಾಖಾ ನಾಲೆ ಹಾಗೂ ಮದ್ದೂರು ಶಾಖಾ ನಾಲೆಗಳ ಅಭಿವೃದ್ಧಿಗಾಗಿ ೨೨೪ ಕೋಟಿ ರು. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪಾಂಡವಪುರ ಪಟ್ಟಣದಲ್ಲಿ ಒಳಚರಂಡಿ ಯೋಜನೆಯಡಿ ಬಿಟ್ಟುಹೋಗಿರುವ ಕೊಳವೆ ಮಾರ್ಗ ಮತ್ತು ಒಳಚರಂಡಿ ಗೃಹ ಸಂಪರ್ಕಗಳನ್ನು ಕಲ್ಪಿಸುವ ಉದ್ದೇಶದಿಂದ ೧೧.೬೨ ಕೋಟಿ ರು. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ೩೫ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರೋಟರಿ ಶಾಲೆ, ಗ್ಲೋಬಲ್ ಶಾಲೆ ಸೇರಿದಂತೆ ವಿವಿಧ ಶಾಲೆಯ ಮಕ್ಕಳು ಕನ್ನಡ ಭಾಷೆ, ಇತಿಹಾಸದ ಮಹತ್ವ ಸಾರುವ ಗೀತೆಗಳಿಗೆ ನೃತ್ಯ ಮಾಡಿ ಪ್ರೇಕ್ಷಕರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಓ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮತ್ತಿತರರಿದ್ದರು.ಸ್ತಬ್ಧಚಿತ್ರಕ್ಕೆ ಸಚಿವ, ಶಾಸಕ ತಲಾ ೧ ಲಕ್ಷ ರು. ಬಹುಮಾನ ಘೋಷಣೆ
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಮಹಿಳಾ ಸಬಲೀಕರಣ ಸಂದೇಶ ಸಾರಿದ ಮಂಡ್ಯ ಪಂಚಾಯಿತಿಯ ಅಸ್ಮಿತೆ: ಸ್ತ್ರೀಶಕ್ತಿಯ ಅನಾವರಣ ಸ್ತಬ್ಧಚಿತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಪಿ.ರವಿಕುಮಾರ್ ತಲಾ ಒಂದು ಲಕ್ಷ ರು. ಬಹುಮಾನ ಘೋಷಿಸಿದರು. ಸ್ತ್ರೀಶಕ್ತಿಯ ಪರಿಕಲ್ಪನೆಯನ್ನು ಮೂಡಿಸಿದ ಜಿಪಂ ಸಿಇಓ ಕೆ.ಆರ್.ನಂದಿನಿ ನೇತೃತ್ವದಲ್ಲಿ ಸ್ತಬ್ಧ ಚಿತ್ರ ತಯಾರಿಕೆಗೆ ಸಹಕಾರ ನೀಡಿದ ತಂಡವನ್ನು ಇದೇ ವೇಳೆ ಸಚಿವರು-ಶಾಸಕರು ಅಭಿನಂದಿಸಿ ಗೌರವಿಸಿದರು.ಕಲಾವಿದನಿಗೂ ಗೌರವ ಸಿಗಬೇಕಿತ್ತು
ಮಹಿಳಾ ಸಬಲೀಕರಣದ ವಿಷಯವಾಗಿ ಜಿಪಂ ಸಿಇಓ ಕೆ.ಆರ್.ನಂದಿನಿ ಅವರ ಪರಿಕಲ್ಪನೆಯನ್ನು ಕಲಾಕೃತಿಯ ರೂಪಕ್ಕಿಳಿಸಿ ಸಾರ್ವಜನಿಕರನ್ನು ಭಾವನಾತ್ಮಕವಾಗಿ ಸೆಳೆಯುವಂತೆ ಮಾಡುವಲ್ಲಿ ಕಲಾವಿದನ ಪಾತ್ರ ದೊಡ್ಡದು. ಆ ಕಲಾವಿದನನ್ನೂ ಗೌರವಿಸಿದ್ದಿದ್ದರೆ ಸ್ತಬ್ಧಚಿತ್ರದ ಮಹತ್ವ, ಗೌರವವೂ ಹೆಚ್ಚುತ್ತಿತ್ತು. ಇಡೀ ಸ್ತಬ್ಧಚಿತ್ರ ಸುತ್ತಲೂ ನಾರೀ ಶಕ್ತಿಯನ್ನು ಪ್ರತಿಬಿಂಬಿಸುವ ರೂಪಕಗಳು ಗಮನಸೆಳೆಯುತ್ತವೆ. ಒಂದೇ ಸ್ತಬ್ಧಚಿತ್ರದೊಳಗೆ ತಾಯಿ ಮಮತೆ, ವಾತ್ಸಲ್ಯದ ಪ್ರತಿರೂಪವನ್ನು ಪ್ರಧಾನವಾಗಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನು ಕಲಾಕೃತಿಯ ರೂಪಕ್ಕಿಳಿಸಿ ಎಲ್ಲಿಯೂ ಇಡೀ ಚಿತ್ರಣ ಮನೋಹರವಾಗಿ ಮೂಡಿಬರುವುದರಲ್ಲಿ ಮೈಸೂರಿನ ಕಲಾವಿದ ಅಭಿಲಾಶ್ ಎಂಬಾತನ ಪಾತ್ರ ದೊಡ್ಡದಿದೆ. ಆ ಕಲಾವಿದನಿಗೂ ಈ ಸಮಾರಂಭದಲ್ಲಿ ಗೌರವ ಮನ್ನಣೆ ಸಿಕ್ಕಿದ್ದರೆ ಇನ್ನಷ್ಟು ಮೆರುಗು ಬರುತ್ತಿತ್ತು ಎನ್ನುವುದು ಸಾರ್ವಜನಿಕರ ಅಭಿಮತವಾಗಿತ್ತು.ಪಥಸಂಚಲನ ವಿಜೇತರು
೭೧ನೇ ಕನ್ನಡ ರಾಜ್ಯೋತ್ಸವ ಪಥಸಂಚಲನದಲ್ಲಿ ಇಲಾಖಾ ತಂಡಗಳ ಪೈಕಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ-ಪ್ರಥಮ, ನಾಗರೀಕ ಪುರುಷ ಪೊಲೀಸ್ ಪಡೆ-ದ್ವಿತೀಯ, ಗೃಹ ರಕ್ಷಕ ದಳ (ಪುರುಷ)-ತೃತೀಯ. ಎನ್ಸಿಸಿ ತಂಡಗಳಲ್ಲಿ ಅನಿಕೇತನ ಪ್ರೌಢಶಾಲೆ-ಪ್ರಥಮ, ಮಂಡ್ಯ ವಿಶ್ವವಿದ್ಯಾನಿಲಯ ಎನ್ಸಿಸಿ ಬಾಲಕರ ತಂಡ- ಪ್ರಥಮ, ಮಂಡ್ಯ ವಿಶ್ವವಿದ್ಯಾನಿಲಯ ಬಾಲಕಿಯರ ತಂಡ- ತೃತೀಯ.
ಸ್ಕೌಟ್ಸ್ ಮತ್ತು ಗೈಡ್ಸ್ ತಂಡಗಳಲ್ಲಿ ಪೊಲೀಸ್ ಕಾಲೋನಿ ಪ್ರೌಢಶಾಲೆ-ಪ್ರಥಮ, ಸೆಂಟ್ ಜೋಸೆಫ್ ಬಾಲಕಿಯರ ಪ್ರೌಢಶಾಲೆ-ದ್ವಿತೀಯ, ಲಕ್ಷ್ಮೀಜನಾರ್ದನ ಬಾಲಕಿಯರ ಪ್ರೌಢಶಾಲೆ-ತೃತೀಯ. ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಸೆಂಟ್ ಜೋಸೆಫ್ ಪ್ರೌಢಶಾಲೆ ಬಾಲಕಿಯರ ತಂಡ-ಪ್ರಥಮ, ಕಾರ್ಮೆಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಬಾಲಕಿಯರ ತಂಡ-ದ್ವಿತೀಯ, ರೋಟರಿ ಬಾಲಕಿಯರ ಪ್ರೌಢಶಾಲೆ-ತೃತೀಯ.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸೆಂಟ್ ಜೋಸೆಫ್ ಬಾಲಕಿಯರ ತಂಡ-ಪ್ರಥಮ, ಕಾರ್ಮೆಲ್ ಕಾನ್ವೆಂಟ್ ಬಾಲಕಿಯರ ತಂಡ-ದ್ವಿತೀಯ ಹಾಗೂ ಅಭಿನವ ಭಾರತಿ ಬಾಲಕರ ತಂಡ-ತೃತೀಯ ಬಹುಮಾನ ಗಳಿಸಿದ್ದಾರೆ.
ರಾಷ್ಟ್ರೀಯ ಕ್ರೀಡಾಪಟು ಎಂ.ಕೆ ಗನಿಕಾಗೆ ಜಿಲ್ಲಾಡಳಿತದಿಂದ ಸನ್ಮಾನ
ಕನ್ನಡಪ್ರಭ ವಾರ್ತೆ ಮಂಡ್ಯ
೭೧ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾಡಳಿತ ಹಾಗೂ ನಗರಸಭೆ ವತಿಯಿಂದ ನಗರದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರೀಯ ಯುವ ಕಬಡ್ಡಿ ಕ್ರೀಡಾಪಟು ಎಂ.ಕೆ. ಗನಿಕಾ ಅವರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕಾರ ನೀಡಿ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಗೌರವಿಸಲಾಯಿತು.
ಉತ್ತರ ಪ್ರದೇಶದ ಮೀರತ್ನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಎಂ.ಕೆ.ಗನಿಕಾ ಕ್ರೀಡಾ ಲೋಕದಲ್ಲಿ ಮಂಡ್ಯದ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಬೆಳಗಿಸಿದ್ದಾರೆ. ಇವರು ಮಂಡ್ಯ ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಎಂ.ಎಲ್. ಕೃಷ್ಣೇಗೌಡ ಅವರ ಸುಪುತ್ರಿಯಾಗಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.