ಹಾವೇರಿ: ನಗರದ ಹೊರವಲಯದಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಪರಿಷತ್ತಿನ ಕಾರ್ಯಕಾರಿ ಮಂಡಳಿ ಸಭೆ ಜರುಗಿತು.ಈ ವೇಳೆ ಇತ್ತೀಚೆಗೆ ನಿಧನರಾದ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ಸಂತಾಪ ಸೂಚಿಸಲಾಯಿತು. ಕನ್ನಡ ಬಗ್ಗೆ ಹಗುರವಾಗಿ ಮಾತನಾಡಿದ ನಟ ಕಮಲ್ ಹಾಸನ್ ಹೇಳಿಕೆ ಖಂಡಿಸಲಾಯಿತು. ಜತೆಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಅವರಿಗೆ ನೀಡಿದ್ದ ಸಚಿವ ಸಂಪುಟ ದರ್ಜೆಯ ಸ್ಥಾನವನ್ನು ಹಿಂಪಡೆದಿರುವ ಸರ್ಕಾರ ತನ್ನ ನಿಲುವನ್ನು ಪುನರ್ ಪರಿಶೀಲಿಸಬೇಕೆಂದು ಮನವಿ ಮಾಡಲಾಯಿತು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಎಲ್ಲ ತಾಲೂಕುಗಳ ಕಸಾಪ ಅಧ್ಯಕ್ಷರಾದ ಬಿ.ಎಂ.ಜಗಾಪುರ, ಎನ್. ಸುರೇಶಕುಮಾರ, ವೈ.ಬಿ. ಆಲದಕಟ್ಟಿ, ಸಿ.ಎನ್. ಪಾಟೀಲ, ನಾಗಪ್ಪ ಬೆಂತೂರ, ರಾಜು ಹರವಿಶೆಟ್ಟರ, ಷಣ್ಮುಖಪ್ಪ ಮುಚ್ಚಂಡಿ, ಪ್ರಭಾಕರ ಶಿಗ್ಲಿ ಹಾಗೂ ಎಲ್ಲ ಹೋಬಳಿ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇದ್ದರು.
ಶಿಗ್ಗಾಂವಿ: ಭಾರತದಲ್ಲಿ ಶೇ. ೯೯ರಷ್ಟು ಸಂಶೋಧನೆಗಳು ಹೊಸತನದ ಮೇಲೆ ನಡೆಯುತ್ತಿಲ್ಲ. ಈಗಾಗಲೇ ನಡೆದಿರುವ, ಗೊತ್ತಿರುವ ವಿಷಯಗಳ ಮೇಲೆಯೇ ಸಂಶೋಧನೆಗಳು ನಡೆಯುತ್ತಿರುವುದು ವಿಷಾದನೀಯ ಎಂದು ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಡೀನ್ ಹಾಗೂ ಸಿಂಡಿಕೇಟ್ ಸದಸ್ಯ ಪ್ರೊ. ಅರವಿಂದ ಮೂಲಿಮನಿ ತಿಳಿಸಿದರು.ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ನಡೆದ ಪಿಎಚ್‌ಡಿ ಕೋರ್ಸ್ ವರ್ಕ್ ಕಮ್ಮಟ- ೩ರಲ್ಲಿ ಅವರು ವಿಶೇಷ ಉಪನ್ಯಾಸ ನೀಡಿ, ಮಾತನಾಡಿದರು.
ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಮಾತನಾಡಿ, ಡಾ. ಅರವಿಂದ ಮೂಲಿಮನಿ ಅವರು ಪಿಎಚ್‌ಡಿ ಸಂಶೋಧನಾರ್ಥಿಗಳಿಗೆ ಅಧ್ಯಯನಕ್ಕೆ ಅನುಕೂಲ ಆಗುವ ರೀತಿಯಲ್ಲಿ ಸರಳವಾಗಿ ಅರ್ಥೈಸಿ ಹೇಳಿದ್ದಾರೆ ಎಂದರು.