ಕನ್ನಡಪ್ರಭ ವಾರ್ತೆ ಉಡುಪಿ
ಕೊರಗ ಭಾಷಾತಜ್ಞ, ಸಾಹಿತಿ, ಸಂಶೋಧಕ, ಪಾಂಗಾಳ ಬಾಬು ಕೊರಗ ಅವರ ಸರ್ವಾಧ್ಯಕ್ಷತೆಯಲ್ಲಿ ಜರುಗಲಿರುವ ಕಾಪು ತಾಲೂಕು ೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ದೇವದಾಸ್ ಶೆಟ್ಟಿ ಬಿಡುಗಡೆಗೊಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಸಮಾಜಸೇವಕ ದೇವದಾಸ್ ಶೆಟ್ಟಿ ಗರಡಿಯಲ್ಲಿ ಪಳಗಿದ ಪಾಂಗಾಳ ಬಾಬು ಕೊರಗ ಬಹುಮುಖ ಪ್ರತಿಭಾ ಸಂಪನ್ನ ವ್ಯಕ್ತಿಯಾಗಿದ್ದು, ಅರ್ಹತೆಯಿಂದಲೇ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರ ಚಟುವಟಿಕೆ, ಜನಪರ ಹೋರಾಟ, ಚಿಂತನೆ, ಲೇಖನಗಳು ಎಲ್ಲರಿಗೂ ಮಾದರಿ ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕ.ಸಾ.ಪ. ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ಕಸಾಪ ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಆಶಯ ಮಾತುಗಳನ್ನಾಡಿದರು. ಕೋಶಾಧಿಕಾರಿ ಮನೋಹರ ಪಿ., ವಸಂತಿ ದೇವದಾಸ್ ಶೆಟ್ಟಿ, ಕೊರಗ ಸಮುದಾಯದ ಮುಂದಾಳುಗಳಾದ ಗಣೇಶ್ ಕುಂದಾಪುರ, ಗಣೇಶ ಬಾರ್ಕೂರು, ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಸುಧಾಕರ ಶೆಣೈ ಪಿಲಾರು ವೇದಿಕೆಯಲ್ಲಿದ್ದರು.