ಖಾಸಗಿಯವರಿಗೆ ಕನ್ನಡ ಶಾಲೆ: ಶಂಕರ್‌ ಬೇಸರ

KannadaprabhaNewsNetwork |  
Published : Nov 21, 2026, 03:45 AM IST
gandhi bhavan 2 | Kannada Prabha

ಸಾರಾಂಶ

ಖಾಸಗಿಯವರಿಗೆ ಕನ್ನಡ ಶಾಲೆ ವಹಿಸುವುದು ವಿಪರ್ಯಾಸವಾಗಿದೆ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ಬಿ.ಎಲ್‌.ಶಂಕರ್‌ ಬೇಸರ ವ್ಯಕ್ತಪಡಿಸಿದರು. ಕರ್ನಾಟಕ ಜಾನಪದ ಪರಿಷತ್‌ನಿಂದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ನಾಡೋಜ ಎಚ್‌.ಎಲ್‌.ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಖಾಸಗಿಯವರಿಗೆ ಕನ್ನಡ ಶಾಲೆ ವಹಿಸುವುದು ವಿಪರ್ಯಾಸವಾಗಿದೆ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ಬಿ.ಎಲ್‌.ಶಂಕರ್‌ ಬೇಸರ ವ್ಯಕ್ತಪಡಿಸಿದರು. ಕರ್ನಾಟಕ ಜಾನಪದ ಪರಿಷತ್‌ನಿಂದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ನಾಡೋಜ ಎಚ್‌.ಎಲ್‌.ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರ್ಕಾರ ಮತ್ತು ಖಾಸಗಿ ವಿಚಾರವಾಗಿ ಮಾತನಾಡಿದರೆ ಅದನ್ನು ರಾಜಕಾರಣ ಎಂದೂ ಭಾವಿಸಬಾರದು. ಎಲ್ಲೆಲ್ಲಿ ಖಾಸಗಿ ವಹಿವಾಟು ಇರುತ್ತದೆಯೋ ಅಲ್ಲಿ ಲಾಭದ ಉದ್ದೇಶ ಇರುತ್ತದೆ. ಆದರೆ ಜನರ ಮಾಲಿಕತ್ವ ಇರುವುದನ್ನು ಉಳಿಸುವ ಜವಾಬ್ದಾರಿ ಮತ್ತು ಕರ್ತವ್ಯ ಸರ್ಕಾರದ್ದಾಗಿದೆ. ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ನೀಡಿದರೆ ಅದು ವ್ಯಾಪಾರ ನಡೆಸಲು ಅನುವು ಮಾಡಿಕೊಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಮದ್ಯಕ್ಕಿರುವ ಪ್ರೋತ್ಸಾಹ ಸಂಸ್ಕೃತಿಗಿಲ್ಲ:

ಸರ್ಕಾರಗಳಿಗೆ ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರಗಳು ಆದ್ಯತೆಯಾಗಿಲ್ಲ. ಆದಾಯ ಯಾವುದರಲ್ಲಿ ಬರುತ್ತದೆ ಎಂದು ಸರ್ಕಾರಗಳು ಲೆಕ್ಕ ಹಾಕುವುದರಿಂದ ಅಬಕಾರಿ ಇಲಾಖೆಗೆ ಸಿಕ್ಕಷ್ಟು ಪ್ರಾಧಾನ್ಯತೆ ಶಿಕ್ಷಣಕ್ಕೆ ಸಿಗುತ್ತಿಲ್ಲ. ಏಕೆಂದರೆ ಅಬಕಾರಿ ಇಲಾಖೆ ವರ್ಷಕ್ಕೆ 45 ಸಾವಿರ ಕೋಟಿ ರು. ಆದಾಯ ನೀಡುತ್ತಿದೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಖರ್ಚು ಆಗುತ್ತದೆ, ಆದರೆ ಆದಾಯ ಸಿಗುವುದಿಲ್ಲ ಎಂದು ಲೆಕ್ಕಹಾಕುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮೀಕ್ಷೆಗಳ ಪ್ರಕಾರ ಶೇ.75 ರಿಂದ 80 ರಷ್ಟಿದ್ದ ಗ್ರಾಮಾಂತರ ಪ್ರದೇಶಗಳ ಜನಸಂಖ್ಯೆ ಈಗ 60 ರಿಂದ 65ಕ್ಕೆ ಬಂದಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಶೇ.35 ಕ್ಕೆ ಬರುವ ಆತಂಕವಿದೆ. ಕಲೆ, ಸಂಸ್ಕೃತಿಯ ಬೆಳವಣಿಗೆ ಗ್ರಾಮೀಣ ಪ್ರದೇಶಗಳ ಜನರ ಪಾತ್ರ ಮಹತ್ವದ್ದಾಗಿದೆ. ಗ್ರಾಮೀಣ ಜನಜೀವನದ ಬಗ್ಗೆ ನಾಗೇಗೌಡರು ಬಹಳಷ್ಟು ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕುವೆಂಪು ಪ್ರತಿಷ್ಠಾನಕ್ಕೆ ಸರ್ಕಾರ ನೀಡುವ ಅನುದಾನ ಯಾವುದಕ್ಕೂ ಸಾಕಾಗುತ್ತಿಲ್ಲ. ಇಲ್ಲಿಗೆ ಪ್ರತಿ ವರ್ಷ ಎರಡೂವರೆ ಲಕ್ಷ ಜನ ಭೇಟಿ ನೀಡುತ್ತಿದ್ದು ಪ್ರವೇಶ ಶುಲ್ಕದಿಂದ ಬಂದ ಹಣದಿಂದಲೇ ಖರ್ಚು ವೆಚ್ಚ ಸರಿದೂಗಿಸಲಾಗುತ್ತಿದೆ. ಮುಂದಿನ ವರ್ಷದ ಚಿತ್ರ ಸಂತೆಯನ್ನು ಜಾನಪದ ಕಲೆಗೆ ಸಮರ್ಪಿಸಲಾಗುವುದು ಎಂದು ಘೋಷಿಸಿದರು.

ಪಶ್ಚಿಮ ಬಂಗಾಳದ ಢೋಕ್ರಾ ಕರಕುಶಲ ಕಲಾವಿದ ಸುಭಾಷ್‌ ಮಂಡಲ್‌ ಅವರಿಗೆ ಇದೇ ವೇಳೆ ನಾಡೋಜ ಎಚ್‌.ಎಲ್‌.ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆದಿ ಚುಂಚನಗಿರಿ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಪರಿಷತ್‌ನ ವ್ಯವಸ್ಥಾಪಕ ನಿರ್ದೇಶಕ ಆದಿತ್ಯ ನಂಜರಾಜ್‌ ಮತ್ತಿತರರು ಉಪಸ್ಥಿತರಿದ್ದರು.-ಕೋಟ್‌-

ಸಂಸ್ಥೆಗಳು, ಟ್ರಸ್ಟ್‌ಗಳನ್ನು ಪ್ರೋತ್ಸಾಹಿಸಲು ಅನುಕೂಲವಾಗುವಂತೆ 290 ಕೋಟಿ ರು. ಅನುದಾನವನ್ನು 500 ಕೋಟಿ ರು.ಗೆ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗುವುದು.

-ಡಾ.ಕೆ.ಎಂ.ವಸುಂಧರಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ-ಕೋಟ್‌-

ಸರ್ಕಾರಗಳಿಗೆ ಸಾಹಿತ್ಯ, ಸಂಸ್ಕೃತಿ, ಕಲೆಯ ಬಗ್ಗೆ ಆಸಕ್ತಿ ಇಲ್ಲವೇನೋ ಎನಿಸುತ್ತಿದೆ. ಜಾನಪದ ಲೋಕ ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ. ಆದರೆ ಕನ್ನಡ ನಾಡಿನ ಜನರು ಇಂತಹ ಸಂಸ್ಥೆಯ ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ.

-ಪ್ರೊ.ಹಿ.ಚಿ.ಬೋರಲಿಂಗಯ್ಯ, ಕರ್ನಾಟಕ ಜಾನಪದ ಪರಿಷತ್‌ ಅಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಾಕುವಿಂದ ಇರಿದು, ಸುತ್ತಿಗೆಯಿಂದ ಹೊಡೆದು ಹತ್ಯೆ
ಕೆಐಎನಲ್ಲಿ ₹12 ಕೋಟಿ ಡ್ರಗ್ಸ್‌ ಜಪ್ತಿ: 4 ಬ್ಯಾಂಕಾಕ್‌ ಪ್ರಜೆಗಳ ಬಂಧನ