ಕರ್ನಾಟಕ ಬಂದ್ ಬೆಂಬಲಿಸುವಂತೆ ಕನ್ನಡಸೇನೆ ಮನವಿ

KannadaprabhaNewsNetwork | Published : Mar 21, 2025 12:37 AM

ಸಾರಾಂಶ

ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆಯ ಪುಂಡರು ಪದೇ ಪದೇ ಕನ್ನಡಿಗರ ಮೇಲೆ ಹಲ್ಲೆ ಮಾಡುತ್ತಿದ್ದು, ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧ ಮಾಡಬೇಕು. ಬೆಂಗಳೂರಿಗೆ ಕುಡಿಯುವ ನೀರಿನ ಹೆಸರಲ್ಲಿ ೬ನೇ ಹಂತದ ಯೋಜನೆ ಮೂಲಕ ರೈತರ ಒಂದು ಬೆಳೆಯ ನೀರನ್ನು ನೀಡಿ ರೈತರನ್ನು ಬೀದಿಗೆ ತಳ್ಳುವ ಯೋಜನೆ ಕೈ ಬಿಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ೨೦೦೦ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಹಲವು ವಿಷಯಗಳನ್ನೊಳಗೊಂಡಂತೆ ಮಾ.೨೨ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಜಿಲ್ಲೆಯ ಜನರು, ವರ್ತಕರು ಬೆಂಬಲ ನೀಡಬೇಕೆಂದು ಕನ್ನಡ ಸೇನೆ ಕರ್ನಾಟಕದ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಮನವಿ ಮಾಡಿದರು.

ಕರ್ನಾಟಕ ಬಂದ್ ಮೂಲಕ ರಾಜ್ಯದ ಪರವಾಗಿ ಆಗಬೇಕಾದ ವಿಷಯಗಳ ಕುರಿತು ೧೭ಕ್ಕೂ ಹೆಚ್ಚು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆಯ ಪುಂಡರು ಪದೇ ಪದೇ ಕನ್ನಡಿಗರ ಮೇಲೆ ಹಲ್ಲೆ ಮಾಡುತ್ತಿದ್ದು, ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧ ಮಾಡಬೇಕು. ಬೆಂಗಳೂರಿಗೆ ಕುಡಿಯುವ ನೀರಿನ ಹೆಸರಲ್ಲಿ ೬ನೇ ಹಂತದ ಯೋಜನೆ ಮೂಲಕ ರೈತರ ಒಂದು ಬೆಳೆಯ ನೀರನ್ನು ನೀಡಿ ರೈತರನ್ನು ಬೀದಿಗೆ ತಳ್ಳುವ ಯೋಜನೆ ಕೈ ಬಿಡಬೇಕು, ಡಾ.ಸರೋಜಿನಿ ಮಹಿಷಿ ವರದಿ ಜಾರಿ, ಮೇಕೆದಾಟು ಯೋಜನೆ ಪ್ರಾರಂಭ, ಮಹದಾಯಿ, ಕಳಸ-ಬಂಡೂರಿ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಗುವುದು ಎಂದರು.

ಬಂದ್‌ಗೆ ಜಿಲ್ಲೆಯ ಎಲ್ಲಾ ಸಾಗರೀಕರು, ವರ್ತಕರು, ಬೇಕರಿ ಮಾಲೀಕರು, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಿಗಳು, ಲಾರಿ ಮಾಲೀಕರು, ಚಿನ್ನ ಮತ್ತು ಬೆಳ್ಳಿ ವರ್ತಕರು, ಎಲ್ಲಾ ಪಕ್ಷದ, ಸಂಘಟನೆಗಳ ನಾಯಕರು ಸಹಕಾರ ನೀಡಲಿದ್ದಾರೆ ಎಂದರು.

ಕೆಲವು ಸಂಘಟನೆಯವರು ಬಂದ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಆದರೆ, ನೈತಿಕ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ನಾಯಕರ ನಡುವಿನ ಭಿನ್ನಾಭಿಪ್ರಾಯವನ್ನು ನಾಯಕರೇ ಸರಿಪಡಿಸಬೇಕಿದೆ. ಶಿವಾಜಿ ಜಯಂತಿ ಆಚರಣೆಗೆ ವಿರೋಧವಿಲ್ಲ, ಭಾಷೆ ಹೇರಿಕೆ ಖಂಡಿಸುತ್ತೇವೆ. ಇಮ್ಮಡಿ ಪುಲಿಕೇಶಿ ಜಯಂತಿ ಆಚರಣೆಯಿಂದ ಕನ್ನಡಿಗರ ಹೆಮ್ಮೆ ಹೆಚ್ಚಲಿದ್ದು, ರಾಜ್ಯ ಸರ್ಕಾರ ಯಾವುದೇ ಭಾವನೆಗಳಿಗೆ ನೋವಾಗದಂತೆ ನಡೆದುಕೊಳ್ಳಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಎಂ.ಎಸ್.ಮಂಜುನಾಥ್, ರಾಜ್ಯ ಸಂಚಾಲಕ ಜಿ.ಮಹಂತಪ್ಪ, ಶಿವಕುಮಾರ್, ಶಿವಾಜಿ, ಪವಿತ್ರ ನಾಗರಾಜ್, ಕಮ್ಮನಾಯಕನಹಳ್ಳಿ ಮಂಜುನಾಥ್, ಪ್ರಸನ್ನ, ವೇಣುಗೋಪಾಲ್ ಇದ್ದರು.

Share this article