ಹೊಸಪೇಟೆ: ಎಲ್ಲಿ ವರೆಗೆ ಶಾಲಾ ಶಿಕ್ಷಣದಲ್ಲಿ ಕನ್ನಡಕ್ಕೆ ಅಗ್ರ ಮನ್ನಣೆ ದೊರೆಯುವುದಿಲ್ಲವೋ ಅಲ್ಲಿ ವರೆಗೆ ಕನ್ನಡದ ನಿಜವಾದ ಪ್ರಗತಿ ಸಾಧ್ಯವಿಲ್ಲ. ಸಮಸಮಾಜ ನಿರ್ಮಾಣವಾಗಲು ಸರ್ಕಾರಿ ಶಾಲೆಗಳು ತಲೆ ಎತ್ತಿ ಮೆರೆಯುವಂತಾಗಬೇಕು. ಉನ್ನತ ಶಿಕ್ಷಣದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಭಾಗಿಯಾಗಬಹುದಾದರೂ, ಪ್ರಾಥಮಿಕ ಶಿಕ್ಷಣದ ವಿಚಾರ ಬಂದಾಗ ಸರ್ಕಾರಗಳು ಬಹು ಎಚ್ಚರ ವಹಿಸಬೇಕಾಗಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಮತ್ತು ಸಂಸ್ಕೃತಿ ಚಿಂತಕ ಡಾ. ಕೆ. ಮರುಳಸಿದ್ದಪ್ಪ ಹೇಳಿದರು.
ಖಾಸಗಿ ಶಾಲೆಗಳ ಸ್ಪರ್ಧೆಯಿಂದಾಗಿ ಮಕ್ಕಳ ಸಂಖ್ಯೆ ತೀವ್ರವಾಗಿ ಇಳಿಮುಖವಾಗುತ್ತಿರುವುದನ್ನು ಕಂಡು ಶಾಲೆ
ಮುಚ್ಚಲಾಗುತ್ತಿದೆ. ಈ ವೇಳೆ ಸುಮಾರು ಏಳುನೂರು ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಿ ಕೆ.ಪಿ.ಎಸ್. ಮ್ಯಾಗ್ನೆಟ್ ಶಾಲೆಗಳನ್ನು ತೆರೆಯುವುದಲ್ಲದೆ ಈ ಉನ್ನತೀಕರಿಸಿದ ಶಾಲೆಗಳ ಅಭಿವೃದ್ಧಿಗೆ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಅಕ್ಕಪಕ್ಕದ ಶಾಲೆಗಳನ್ನು ಶಾಶ್ವತವಾಗಿ ಮುಚ್ಚವುದು ನಿಜವೇ ಆಗಿದ್ದರೆ ಇದಕ್ಕಿಂತ ಪ್ರತಿಗಾಮಿ ತೀರ್ಮಾನ ಮತ್ತೊಂದಿಲ್ಲ ಎಂದು ಆತಂಕವ್ಯಕ್ತಪಡಿಸಿದರು.ಶಾಲೆಯಿಲ್ಲದ ಹಳ್ಳಿ ಎಂದರೆ ದೇವರಿಲ್ಲದ ಗುಡಿ ಎಂದು ಹೇಳಬಹುದು. ಹಲವಾರು ಸಾವಿರ ಸಣ್ಣ ಸಣ್ಣ ಶಾಲೆಗಳು ಈ `ಬಿಳಿಯಾನೆ ಯೋಜನೆ’ಗೆ ಬಲಿಯಾಗಲಿವೆ ಎಂಬ ಅಂದಾಜಿದೆ. ಇದರ ಪರಿಣಾಮವಾಗಿ ಸಾವಿರಾರು ಶಾಲಾ ರಹಿತ ಹಳ್ಳಿಗಳು ಹುಟ್ಟಿಕೊಂಡು ಮತ್ತೆ ನಾವು ಪಾಳೆಗಾರಿಕೆ ಯುಗಕ್ಕೆ ಮರಳಬೇಕಾಗಬಹುದು. ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಈ ಕ್ರಮದಿಂದಾಗಿ ಹತ್ತಾರು ಪಟ್ಟು ಹೆಚ್ಚಬಹುದು. ಬಡವರ ಮಕ್ಕಳ ತಲೆಯ ಮೇಲೆ ಚಪ್ಪಡಿ ಕಲ್ಲು ಎಳೆಯುವ ಇಂತಹ ಪ್ರತಿಷ್ಠಿತ ಯೋಜನೆಗಳನ್ನು ಜನಪರ ಸರ್ಕಾರ ಕೈಗೆತ್ತಿಕೊಳ್ಳಬೇಕೇ ಎಂಬುದನ್ನು ಯೋಚಿಸಬೇಕು ಎಂದರು.
ರಾಜ್ಯದಲ್ಲೀಗ ಖಾಸಗಿ ವಿಶ್ವವಿದ್ಯಾಲಯಗಳದ್ದೇ ಸಿಂಹಪಾಲು. ಸರ್ಕಾರಿ ವಿಶ್ವವಿದ್ಯಾಲಯಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಜಿಲ್ಲೆಗೊಂದು ವಿಶ್ವವಿದ್ಯಾಲಯವೆಂಬ ನೀತಿಗೆ ಸರ್ಕಾರಗಳು ಬದ್ಧವಾಗಿವೆ. ಆದರೆ, ಈ ಹೊಸ ವಿಶ್ವವಿದ್ಯಾಲಯಗಳಿಗೆ ಅಗತ್ಯ ಸಂಪನ್ಮೂಲಗಳಿಲ್ಲ, ಕಟ್ಟಡಗಳಿಲ್ಲ, ಸುಸಜ್ಜಿತ ಪ್ರಯೋಗಾಲಯಗಳಿಲ್ಲ, ಗ್ರಂಥ ಭಂಡಾರಗಳಿಲ್ಲ. ಕೊನೆಗೆ ಖಾಯಂ ಅಧ್ಯಾಪಕ, ಪ್ರಾಧ್ಯಾಪಕರಿಲ್ಲ. ಎಲ್ಲ ಸರ್ಕಾರಿ ವಿಶ್ವವಿದ್ಯಾಲಯಗಳೂ ಅತಿಥಿ ಅಧ್ಯಾಪಕ, ಪ್ರಾಧ್ಯಾಪಕರನ್ನು ಅವಲಂಬಿಸಿವೆ ಎಂದರು.
ಸ್ತ್ರೀಶೋಷಣೆ, ಮಹಿಳೆಯರ ಮೇಲೆ ದಬ್ಬಾಳಿಕೆ ದಿನನಿತ್ಯದ ಮಾತಾಗಿದ್ದು, ಅತ್ಯಾಚಾರ ದಂತಹ ಅಮಾನವೀಯ ಕ್ರೂರ ಕೃತ್ಯಗಳನ್ನು ತಡೆಯುವಲ್ಲಿ ನಾವು ವಿಫಲರಾಗಿದ್ದೇವೆ. ಧಾರ್ಮಿಕ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ. ಕೋಮುದ್ವೇಷ ಧಗಧಗಿಸುತ್ತಿದೆ. ದಲಿತರ ಮೇಲೆ ಮೇಲುಜಾತಿಗಳ ಅಸಹನೆಯಿಂದಾಗಿ ಹಳ್ಳಿಗಳು ಪಾಳೆಯಗಾರಿಕೆ ಯುಗಕ್ಕೆ ಮರಳುತ್ತಿವೆ ಎಂದು ಅವರು ಆಂತಕ ವ್ಯಕ್ತಪಡಿಸಿದರು.