)
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಇಂದು ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ:ಕರ್ನಾಟಕದ ಅರಣ್ಯ ಅಥವಾ ಕರ್ನಾಟಕದ ವನ್ಯಜೀವಿ ಕುರಿತು ಈಗಾಗಲೇ ಜಿಲ್ಲೆಯ ಎಲ್ಲೆಡೆಯಿಂದ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಚಿತ್ರಬಿಡಿಸಿ ಪ್ರಥಮ, ದ್ವಿತೀಯ ಸ್ಥಾನ ಪಡೆದಿರುವ 8, 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳು ಭಾನುವಾರ ನಡೆಯಲಿರುವ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಮಕ್ಕಳಿಂದ ಮೂಡಿಬರಲಿದೆ ಬಣ್ಣಗಳ ಚಿತ್ತಾರ:ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂಬ ಮಾತು ಚಿತ್ರಕಲೆ ಎಷ್ಟು ಪ್ರಾಮುಖ್ಯತೆ ಹೊಂದಿದೆ ಎಂಬುದನ್ನು ಹೇಳುತ್ತದೆ. ಪ್ರಾಚೀನ ಹಾಗೂ ರಾಜಮಹಾರಾಜರ ಕಾಲದಿಂದಲೂ ಭಾರತದಲ್ಲಿ ಪ್ರಾಮುಖ್ಯತೆ ಪಡೆದಿದ್ದ ಚಿತ್ರಕಲೆ ಈಚೆಗೆ ಬಣ್ಣ ಕಳೆದುಕೊಂಡಿದೆ. ಇಂತಹ ಚಿತ್ರಕಲೆಗೆ ಪ್ರೋತ್ಸಾಹ ನೀಡಲು ಹಾಗೂ ಮಕ್ಕಳಲ್ಲಿ ಪರಿಸರ ಮತ್ತು ವನ್ಯಜೀವಿಗಳ ಮಹತ್ವ ಕುರಿತು ಜಾಗೃತಿ ಮೂಡಿಸಲು ಕನ್ನಡಪ್ರಭ ಮುಂದಾಗಿದ್ದು, ಪ್ರೌಢಶಾಲೆಯ ವಿದ್ಯಾರ್ಥಿಗಳ ಕೈಯಲ್ಲಿ ಅರಣ್ಯ ಸಂಪತ್ತು ಹಾಗೂ ವನ್ಯಜೀವಿಗಳನ್ನು ಬಣ್ಣದಲ್ಲಿ ಅರಳಲಿವೆ. ಜಿಲ್ಲೆಯ ಎಲ್ಲ ತಾಲೂಕುಗಳಿಂದ ಬರುವ 80ಕ್ಕೂ ಅಧಿಕ ಮಕ್ಕಳು ತಮ್ಮ ಕುಂಚದ ಮೂಲಕ ಚಿತ್ತಾರ ಮೂಡಿಸಲಿದ್ದಾರೆ.ಗೆದ್ದವರಿಗೆ ಆಕರ್ಷಕ ಸೈಕಲ್ ಉಡುಗೊರೆ:ಕನ್ನಡಪ್ರಭ ನೇತೃತ್ವದಲ್ಲಿ ಆಯೋಜಿಸಲಾದ ಈ ಸ್ಪರ್ಧೆಯಲ್ಲಿ ಅತ್ಯುತ್ತಮವಾಗಿ ಮೂಡಿಬಂದ ಮೂರು ತರಗತಿಗಳ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ 9 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಆಕರ್ಷಕವಾದ ಸೈಕಲ್ ಗಳನ್ನು ಬಹುಮಾನವಾಗಿ ನೀಡಲಾಗುತ್ತಿದೆ. ಜೊತೆಗೆ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನೂ ಕೊಡಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಗಣ್ಯರು:ಭಾನುವಾರ ಬೆಳಗ್ಗೆ 2 ಗಂಟೆಗೆ ಆರಂಭವಾಗಲಿರುವ ಚಿತ್ರಕಲೆ ಸ್ಪರ್ಧೆಯ ಬಳಿಕ ಬಹುಮಾನ ವಿತರಣೆ ನಡೆಯಲಿದೆ. ಕಾರ್ಯಕ್ರಮವನ್ನು ಮುಧೋಳದ ಅರಳಿಕಟ್ಟಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಡಾ.ಟಿ.ವಿ ಅರಳಿಕಟ್ಟಿ ಉದ್ಘಾಟಿಸಲಿದ್ದು, ಬೀಳಗಿ ಗಿರಿಸಾಗರ ಕಲ್ಯಾಣ ಹಿರೇಮಠದ ತಾಲೂಕಿನ ಶ್ರೀ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ, ಬೀಳಗಿಯ ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಗಳ ಸಂಸ್ಥಾಪಕ ಕಾರ್ಯಾಧ್ಯಕ್ಷರಾದ ಎಂ.ಎನ್. ಪಾಟೀಲ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿಬಾಗಲಕೋಟೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ರುದ್ರನ್, ಬಾಗಲಕೋಟೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ(ಆಡಳಿತ) ಅಜಿತ ಸಿ. ಮನ್ನಿಕೇರಿ, ಬೀಳಗಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ದೇವಿಂದ್ರ ಪಿ. ಧನಪಾಲ್ ಆಗಮಿಸುವರು. ವಿಶೇಷ ಆಹ್ವಾನಿತರಾಗಿ ಮುಧೋಳದ ಮುಧೋಳ ರಾಯಲ್ ಸ್ಕೂಲ್ ಅಧ್ಯಕ್ಷರಾದ ಸವಿತಾ ಟಿ.ಅರಳಿಕಟ್ಟಿ ಬೀಳಗಿಯ ಶ್ರೀ ರುದ್ರಗೌಡ ಪಾಟೀಲ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯರಾದ ಡಾ.ಶ್ರೀದೇವಿ ಕೆ. ಪಾಟೀಲ ಆಗಮಿಸುವರು.