ಕನ್ನಡಪ್ರಭ ವಾರ್ತೆ ಹುಣಸೂರು ಕನ್ನಡ ರಾಜ್ಯೋತ್ಸವ ಆಚರಣೆ ಎನ್ನುವುದು ಕನ್ನಡಿಗರ ಬದುಕಿನ ಉತ್ಸವವಾಗಬೇಕು ಎಂದು ಪಟ್ಟಣದ ಡಿ. ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಬಾಗದ ಮುಖ್ಯಸ್ಥ ಪ್ರೊ.ಬಿ.ವಿ. ವಸಂತಕುಮಾರ್ ಅಭಿಪ್ರಾಯಪಟ್ಟರು.ಪಟ್ಟಣದ ಡಿ. ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ 70ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾಂರ್ಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕನ್ನಡ ರಾಜ್ಯೋತ್ಸವ ಎನ್ನುವುದು ಈ ನಾಡಿನ ಇತಿಹಾಸ, ಪರಂಪರೆಯನ್ನು ಪರಿಚಯಿಸುವ, ನೆನೆಯುವ ಮನಸಿನ ಸಂಸ್ಕೃತಿಯಾಗಿದೆ. ಕನ್ನಡ ನೆಲ ತ್ಯಾಗ ಬಲಿದಾನಗಳ ನೆಲ. ಕನ್ನಡ ನಾಡಿಗಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ಈ ಮಣ್ಣಿನಲ್ಲಿ ಹುಟ್ಟಿದ ಮಹನೀಯರು ಬಲಿದಾನ ಮಾಡಿದ್ದಾರೆ. ಅವರನ್ನು ಸ್ಮರಿಸುವ ಕಾರ್ಯವನ್ನು ಮನದಾಳದಿಂದ ಮಾಡಬೇಕು. ಆ ಮೂಲಕ ರಾಜ್ಯೋತ್ಸವ ಕೇವಲ ಬರೀ ಉತ್ಸವವಾಗದೇ ಕನ್ನಡದ ನೆಲ, ಜಲ, ಉಳಿಸುವ ಹಬ್ಬವಾಗಬೇಕು. ಕನ್ನಡದ ಮೊದಲ ಗ್ರಂಥ ಕವಿರಾಜಮಾರ್ಗದ ಕರ್ತೃ ಶ್ರೀ ವಿಜಯ ತನ್ನ ಗ್ರಂಥದಲ್ಲಿ ಅಂದಿನ ಕಾಲದಲ್ಲೇ ಕನ್ನಡಿಗರು ವಿವೇಕಿಗಳು ಎಂದಿದ್ದಾನೆ. ಅಂತೆಯೇ ಅಂತಹ ವಿವೇಕತನ ನಮ್ಮಿಂದ ಪ್ರದರ್ಶನವಾಗಬೇಕು. ಭಾಷೆ, ನೆಲ, ಜಲದ ಉಳಿವಿಗೆ ಬದ್ಧರಾಗಲು ರಾಜ್ಯೋತ್ಸವ ವೇದಿಕೆಯಾಗಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಬಿ.ಸಿ. ಸುರೇಶ್ ಮಾತನಾಡಿ, ಭೂದಾನ ಚಳವಳಿಯ ಹರಿಕಾರ ವಿನೋಬಾ ಭಾವೆ ಕನ್ನಡವನ್ನು ಲಿಪಿಗಳ ರಾಣಿ ಎಂದು ಸಂಬೋಧಿಸಿದ್ದಾರೆ. ಮಾತನಾಡಿದಂತೆ ಬರೆಯಬಹುದಾದ ಭಾಷೆಯೊಂದು ಇದೆ ಎಂದರೆ ಅದು ಕನ್ನಡ ಮಾತ್ರ ಎನ್ನುವ ಗರ್ವ ನಮ್ಮಲ್ಲಿರಲಿ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಮಾತನಾಡಿದರು. ರಾಜ್ಯೋತ್ಸವ ಆಚರಣೆ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಗೀತಗಾಯನ ಕಾರ್ಯಕ್ರಮದಲ್ಲಿ ಗಾಯಕರಾದ ರಾಜೇಶ್‌ಪಡಿಯಾರ್ ಮತ್ತು ರಶ್ಮಿ ಚಿಕ್ಕಮಗಳೂರುರಿಂದ ಸುಗಮಸಂಗೀತ, ಭಾವಗೀತೆ, ಕನ್ನಡ ಗೀತೆಗಳನ್ನು ಹಾಡಿದರು. ಕಲಾವಿದರಾದ ಗಣೇಶ್ ಭಟ್ (ಕೀಬೋರ್ಡ್), ರಘುನಾಥ (ತಬಲಾ), ಪ್ರದೀಪ್ ಕಿಗ್ಗಾವ್ (ಗಿಟಾರ್), ಗುರುದತ್ತ (ರಿದಂಪ್ಯಾಡ್) ಸಾಥ್ ನೀಡಿದರು.ಐಕ್ಯೂಎಸಿ ಸಂಚಾಲಕ ಡಾ.ಬಸವರಾಜ, ಸಾಂಸ್ಕೃತಿಕ ಸಮಿತಿ ಸಂಚಾಲಕ ಆರ್. ಕುಮಾರ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಎಚ್.ಎಲ್. ದಿವ್ಯಾ, ಅಧ್ಯಾಪಕ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.