ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾಮದ ಶ್ರೀಮತ್ ಕನ್ನಂಬಾಡಿ ಅಮ್ಮನವರ ನೂತನ ದೇವಾಲಯ ಹಾಗೂ ದೇವಿಯ ಪುನರ್ ಪ್ರತಿಷ್ಠಾಪನಾ ಮಹೋತ್ಸವ ನಡೆಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾಮದ ಶ್ರೀಮತ್ ಕನ್ನಂಬಾಡಿ ಅಮ್ಮನವರ ನೂತನ ದೇವಾಲಯ ಹಾಗೂ ದೇವಿಯ ಪುನರ್ ಪ್ರತಿಷ್ಠಾಪನಾ ಮಹೋತ್ಸವ ನಡೆಯಿತು.ಕಳೆದ ಎರಡು ದಿನಗಳಿಂದ ವಿಜೃಂಭಣೆಯಿಂದ ಜರುಗುತ್ತಿರುವ ಕಾರ್ಯಕ್ರಮದ ಅಂಗವಾಗಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ, ಹೋಮ, ಹವನಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ ಶುದ್ದಿ, ಮಹಾ ಸಂಕಲ್ಪ, ವಾಸ್ತು ರಕ್ಷೋಘ್ನ ಹೋಮ, ಪ್ರಸಾದ ಶುದ್ದಿ, ವಾಸ್ತು ಬಲಿ, ಬಿಂಬ ಪ್ರಸಾದ ಸಂಗ್ರಹ ನಂತರ ಮುಖ್ಯದ್ವಾರಕ್ಕೆ ಪೂಜೆ ಸಲ್ಲಿಸಿ ಉದ್ಘಾಟಿಸಲಾಯಿತು. ಗ್ರಾಮದ ಹಿರಿಯರಾದ ವಿಮಲ ವೀರಪ್ಪ ಅವರು ನೂತನ ದ್ವಾರ ಉದ್ಘಾಟಿಸಿದರು.ಗುರುವಾರ ಮಹಾ ಗಣಪತಿ ಹೋಮ, ಸಂಸ್ಕಾರ ಹೋಮ, ನೂತನ ಬಿಂಬಕ್ಕೆ ಸಂಸ್ಕಾರ, ಬಿಂಬಶುದ್ದಿ, ಕಲಶ ನವೀಕರಣ, ಪ್ರಾಯಶ್ಚಿತ್ತ ಹೋಮ, ಕಲಾಹೋಮ, ಕಲಾಕರ್ಷಣೆ ನಡೆಯಿತು. ಅರ್ಚಕ ರಾಮಚಂದ್ರ ಭಟ್ ತಂಡದಿಂದ ಪೂಜಾ ವಿಧಿ ನೆರವೇರಿಸಲಾಯಿತು.
ಇಂದಿನ ಕಾರ್‍ಯಕ್ರಮ:
ಶುಕ್ರವಾರ ಕಾವೇರಿ ನದಿಯಲ್ಲಿ ಗಂಗಾಪೂಜೆ ನೆರವೇರಿಸಿ ಕಲಶ ಮೆರವಣಿಗೆ, ಬ್ರಹ್ಮ ಕಲಶಾಭಿಷೇಕ, ಮಹಾಪೂಜೆ, ಮಹಾ ಮಂಗಳಾರತಿ ನಡೆಯಲಿದೆ. ಪೂಜೋತ್ಸವದಲ್ಲಿ ಆದಿಚುಂಚನಗಿರಿ ಮಠದ ಹಾಸನ-ಕೊಡಗು ಶಾಖೆಯ ಶ್ರೀ ಶಂಭುನಾಥ ಸ್ವಾಮೀಜಿ, ವಿರಾಜಪೇಟೆಯ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀಮತ್ ಕನ್ನಂಬಾಡಿ ಅಮ್ಮನವರ ಮತ್ತು ಮಾರಮ್ಮ ದೇವಸ್ಥಾನ ಸೇವಾ ಸಮಿತಿ ಉಪಾಧ್ಯಕ್ಷ ಎಂ.ಆರ್. ನಂಜುಂಡ ಮಾಹಿತಿ ನೀಡಿದ್ದಾರೆ.
ಶ್ರೀಮತ್ ಕನ್ನಂಬಾಡಿ ಅಮ್ಮನವರ ಮತ್ತು ಮಾರಮ್ಮ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಎಂ.ಎಚ್. ಅಣ್ಣೇಗೌಡ್ರು, ಕಾರ್‍ಯದರ್ಶಿ ಆರ್. ಪ್ರವೀಣ್, ಖಜಾಂಚಿ ಎಂ.ವಿ. ದಾಸೇಗೌಡ, ನಿರ್ದೇಶಕರಾದ ಎಂ.ಟಿ. ರಘು, ಎಂ. ಪಳನಿಸ್ವಾಮಿ, ಎಂ.ಆರ್. ಮಹದೇವಪ್ಪ, ಎಂ.ಸಿ. ಸಂತೋಷ್, ಎಂ.ಬಿ. ಸುರೇಶ್ ಕುಮಾರ್, ಎಂ.ಎಚ್. ಚಂದ್ರಪ್ಪ, ಎಂ.ಎಸ್. ಪ್ರಸನ್ನ, ವಿ.ಎ. ದಿನೇಶ್, ಎಂ.ಕೆ. ಚಂದ್ರು, ಎಂ.ಜಿ. ಅಜಿತ್ ಕುಮಾರ್, ಡಿ.ಟಿ. ರಂಗಸ್ವಾಮಿ, ಅನಿಲ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.