ಕನ್ನಡಪ್ರಭ ವಾರ್ತೆ ಮೂಲ್ಕಿ
ಜೀರ್ಣೋದ್ಧಾರಗೊಂಡ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆ.25ರಿಂದ ಮಾರ್ಚ್ 5ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶನಿವಾರ ಶ್ರೀ ಕ್ಷೇತ್ರ ಬಪ್ಪನಾಡು ಹಾಗೂ ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಭಕ್ತವೃಂದದಿಂದ ಭವ್ಯ ಹಸಿರು ವಾಣಿ ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಾಯಿತು.ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅರ್ಚಕ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಮಾಣಿಲ ಮಠದ ಶ್ರೀ ಮೋಹನದಾಸ ಸ್ವಾಮೀಜಿ ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭ ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ಬಪ್ಪನಾಡು ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಜಾಗತಿಕ ಬಂಟರ ಸಂಘದ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್‌ಸರ್, ಮೂಲ್ಕಿ ಸೀಮೆಯ ಹೊರ ಕಾಣಿಕೆ ಮೆರವಣಿಗೆಯ ಸಂಚಾಲಕ ಸುನಿಲ್ ಆಳ್ವ, ಮೂಲ್ಕಿ ಮೊಗವೀರ ಸಭಾದ ಸುಜಿತ್ ಸಾಲ್ಯಾನ್, ಕುಶಲ ಭಂಡಾರಿ, ಚಿತ್ತರಂಜನ್ ಭಂಡಾರಿ ಐಕಳ ಬಾವ, ದಿವಾಕರ ಸಾಮಾನಿ, ವಿನೋದ್ ಸಾಲ್ಯಾನ್ ಬೆಳ್ಳಾಯರು ಮತ್ತಿತರರು ಉಪಸ್ಥಿತರಿದ್ದರು.ಬಳಿಕ ಬಪ್ಪನಾಡು ದೇವಸ್ಥಾನದಿಂದ ಕಾಪು ಹೊಸ ಮಾರಿಗುಡಿ ವರೆಗೆ ಸಾವಿರಾರು ಮಂದಿ ಭಕ್ತರ ಭವ್ಯ ಹೊರೆ ಕಾಣಿಕೆ ಮೆರವಣಿಗೆ ನಡೆಯಿತು. ಬೆಳ್ತಂಗಡಿ, ಬಂಟ್ವಾಳ, ಉಳ್ಳಾಲ, ಸುಳ್ಯ, ಮೂಡುಬಿದಿರೆ ಸೇರಿದಂತೆ ದ.ಕ. ಜಿಲ್ಲೆಯ ಎಲ್ಲಭಾಗಗಳಿಂದ ಬಂದ ಹೊರೆ ಕಾಣಿಕೆ ಮೆರವಣಿಗೆಯು ಮೂಲ್ಕಿಯ ಬಪ್ಪನಾಡು ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಪು ಮಾರಿಗುಡಿಗೆ ಹೊರಟಿತು. ಉಳ್ಳಾಲದ ಮುಸ್ಲಿಂ ಬಾಂಧವರು ಹೊರೆಕಾಣಿಕೆಯಲ್ಲಿ ಕೈಜೋಡಿಸಿದ್ದರು.