ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಲಿಂಗಾಯತ ಭವನದಲ್ಲಿ ಅಮಾವಾಸ್ಯೆ ನಿಮಿತ್ತ ಆಯೋಜಿಸಿದ್ದ ಅನುಭಾವ ಗೋಷ್ಠಿ ಹಾಗೂ ಗುರುಸಿದ್ಧ ಸ್ವಾಮೀಜಿಯವರ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಹಿರಿಯ ಪೂಜ್ಯರಾಗಿ ವೈವಿಧ್ಯಮಯ ಸೇವೆಗಳಿಂದ ಸಮಾಜಮುಖಿ ಸ್ವಾಮೀಜಿ ಎಂಬ ಅಭಿದಾನದ ಮೂಲಕ ಭಕ್ತಜನರ ಹೃದಯದಲ್ಲಿ ನೆಲೆಸಿದ್ದಾರೆ ಎಂದು ಹೇಳಿದರು.
ನಾಡಿನಲ್ಲಿ ಸಾವಿರರಾರು ಗುರು ಮತ್ತು ವಿರಕ್ತ ಮಠಗಳಿವೆ. ಅವುಗಳಲ್ಲಿ ಹಲವು ಶ್ರೀಮಠಗಳು ತಮ್ಮ ಸಾಮಾಜಿಕ ಕೈಂಕರ್ಯದಿಂದ ಭಕ್ತರಲ್ಲಿ ಸ್ಥಾಯಿಯಾಗಿ ನೆಲೆಸಿವೆ. ಅವುಗಳಲ್ಲಿ ಕಾರಂಜಿಮಠ ಒಂದೆಂಬುದು ಅಭಿಮಾನದ ಸಂಗತಿ. ಸಮಾಜಮುಖಿ ವಿಚಾರಧಾರೆಗೆ ಯಾವತ್ತೂ ಮೇಲ್ಪಂಕ್ತಿಯಲ್ಲಿ ನಿಂತು ಸಮರ್ಪಣಾಭಾವದಿಂದ ತಮ್ಮ ಬದುಕನ್ನು ಪ್ರಸಾದಮಯವನ್ನಾಗಿ ಮಾಡಿಕೊಂಡವರು ಗುರುಸಿದ್ಧ ಶ್ರೀಗಳು. ಶ್ರೀಮಠಗಳು ಸಮಾಜಮುಖಿಯಾಗಿ ದುಡಿಯಬೇಕು. ಸಮಾಜದ ಅನಿಷ್ಠ ತೊಡೆದುಹಾಕಬೇಕು. ತಮ್ಮ ರಚನಾತ್ಮಕ ಹಾಗೂ ಸೃಜನಶೀಲ ಕಾರ್ಯಗಳಿಂದ ಲೋಕಮುಖಿಯಾಗಿರಬೇಕೆಂಬ ಮಾತಿಗೆ ಬದ್ಧರಾಗಿಯೇ ಗುರುಸಿದ್ಧ ಸ್ವಾಮೀಜಿ ನಡೆದವರು. ಇಂದು ಮಠಗಳು ತಮ್ಮ ಪಾವಿತ್ರ್ಯತೆ ಕಳೆದುಕೊಳ್ಳುತ್ತಿರುವ ಸಮಯದಲ್ಲಿ ಒಂದಿಷ್ಟು ಮಠಗಳು ಹೂವಾಗಿ ಅರಳಿನಿಲ್ಲುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಜಂಗಮ ತತ್ವಕ್ಕೆ ನಿಜಾರ್ಥವನ್ನು ತಂದು ಅದನ್ನು ಅನುಷ್ಠಾನಗೊಳಿಸಿದ್ದಾರೆ ಎಂದು ತಿಳಿಸಿದರು.ದೇಹದಾನದಂತಹ ಜಾಗೃತಿಗೆ ಕರೆ ನೀಡಿರುವ ಶ್ರೀಗಳು ಅದನ್ನು ಮರಣದ ನಂತರ ಅರ್ಪಿಸುವ ದೃಢ ನಿರ್ಧಾರ ಕೈಗೊಂಡು ಸಮಾಜಕ್ಕೆ ಮಾದರಿಯಾದವರು. ಕೈದಿಗಳ ಮನಪರಿವರ್ತನೆ, ಪುಸ್ತಕ ಪ್ರಕಟಣೆ, ಸಾಮಾಜಿಕ ಅನಿಷ್ಟಗಳ ಕುರಿತು ಜಾಗೃತಿ ಆಂದೋಲನ ಕೈಗೊಂಡಿರುವ ಶ್ರೀಗಳ ನಡೆ ಸಮಾಜಮುಖಿಯಾಗಿ ಬೆಳಗಿದೆ. ಇಂತಹ ಪೂಜ್ಯರು ನಮ್ಮ ಮಧ್ಯೆದಲ್ಲಿರುವುದು ನಮ್ಮ ಪುಣ್ಯವೆಂದು ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ಹಿಂದಿನ ನಾಗನೂರು ರುದ್ರಾಕ್ಷಿಮಠದ ಡಾ.ಶಿವಬಸವ ಸ್ವಾಮೀಜಿಯವರ ಕೃಪಾಶೀರ್ವಾದದಿಂದ ನಾನು ಸಾಮಾಜಿಕ ಸೇವೆಗೆ ತೊಡಗಲು ಸಾಧ್ಯವಾಯಿತು. ಈ ಸುದೀರ್ಘ ಬದುಕಿನಲ್ಲಿ ಸಮಾಜ ನೀಡಿದ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿರ್ವಹಿಸಿದ್ದೇನೆ. ಮುಂದೆಯೂ ಬಸವಾದಿ ಶರಣರ ಕೃಪೆಯಿಂದ ಸೇವೆ ಸಲ್ಲಿಸುತ್ತೇನೆ. ಶ್ರೀಮಠವನ್ನು ಅಸಂಖ್ಯ ಭಕ್ತರು ಕಟ್ಟಿ ಬೆಳೆಸಿದ್ದಾರೆ ಎಂದು ಹೇಳಿದರು.