ಬಳ್ಳಾರಿ: ಮಲೇಷಿಯಾದಲ್ಲಿ ನಡೆದ 22ನೇ ಒಕಿನವ ಗೋಜು ರಾಯ್ ಇಪಾನ್ ಸಿಟಿ ಮುಕ್ತ ಕರಾಟೆ ಸ್ಪರ್ಧೆ 2026ರಲ್ಲಿ ಬಳ್ಳಾರಿಯ ಶ್ರೀ ಪಂಚಾಕ್ಷರಿ ಮಾರ್ಷಲ್ ಆರ್ಟ್ಸ್ ಟ್ರಸ್ಟ್‌ನ ವಿದ್ಯಾರ್ಥಿಗಳು ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ವಿದೇಶಿ ನೆಲದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಮೇ 8ರಿಂದ 10ರ ವರೆಗೆ ಮಲೇಷಿಯಾದ ಸುಲ್ತಾನ್ ಅಜಿಯಾನ್ ಶಾ ಸಂಸ್ಥೆ, ಮಲೇಶಿಯಾ ಆರೋಗ್ಯ ಸಚಿವಾಲಯ, ತನಜುಂಗ ರಮಭೂತಾನ್ ಇಪಾನ್ ಸಹಯೋಗದಲ್ಲಿ ನಡೆಯುತ್ತಿರುವ 22ನೇ ಅಂತಾರರಾಷ್ಟೀಯ ಓಕಿನವ ಗುಜುರಾಯ್ ಇಪಾನ್ ಸಿಟಿ ಮುಕ್ತ ಕರಾಟೆ ಸ್ಪರ್ಧೆಗೆ ಮಲೇಷಿಯಾ ದೇಶದ ಕ್ರೀಡಾ ಸಚಿವ ಡಾ. ಮಹಮ್ಮದ್ ತೌಪಿಕ್ ಜೋಹಾರಿ ಉದ್ಘಾಟಿಸಿದರು.ಒಕಿನ ಗೋಜುರಾಯ್ ಕರಾಟೆ ಅಕಾಡೆಮಿಯ ಕರಾಟೆ ಸ್ಥಾಪಕ ಅಧ್ಯಕ್ಷ ಗ್ರಾಂಡ್ ಮಾಸ್ಟರ್ ಅನಂತನ್ ಸ್ಪರ್ಧೆಯ ಮುಖ್ಯಸ್ಥರಾಗಿದ್ದರು. ಸ್ಪರ್ಧೆಯಲ್ಲಿ ಮಲೇಶಿಯಾ ದೇಶ ಸೇರಿದಂತೆ, ಭಾರತ, ಇಂಡೋನೇಷಿಯಾ, ತಜಕೀಸ್ಥಾನ್, ಶ್ರೀಲಂಕಾ, ಬಾಂಗ್ಲಾ ದೇಶದ ಸುಮಾರು ಸಾವಿರಕ್ಕೂ ಅಧಿಕ ವಿಧ್ಯಾರ್ಥಿಗಳು ಭಾಗವಹಿಸಿದ್ದರು. ಭಾರತವನ್ನು ಪ್ರತಿನಿಧಿಸಿ ಭಾಗವಹಿಸಿದ್ದ ಬಳ್ಳಾರಿಯ ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಆರ್ಟ್ಸ್ ಟ್ರಸ್ಟ್ ನ ವಿದ್ಯಾರ್ಥಿಗಳು ಇಡೀ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಹಾಗೂ ಪದಕಗಳನ್ನು ಪಡೆದುಕೊಂಡಿದ್ದಾರೆ ಎಂದು ಟ್ರಸ್ಟ್‌ನ ಮುಖ್ಯಸ್ಥ ಹಾಗೂ ತರಬೇತುದಾರ ಬಂಡ್ರಾಳ್ ಎಂ. ಮೃತ್ಯುಂಜಯ ಸ್ವಾಮಿ ತಿಳಿಸಿದ್ದಾರೆ.
ಟ್ರಸ್ಟ್ ವತಿಯಿಂದ ನಗರದ ಬಾಲಕರು ಹಾಗೂ ಬಾಲಕಿಯರಿಗೆ ಹತ್ತಾರು ವರ್ಷಗಳಿಂದ ಉಚಿತವಾಗಿ ಸ್ವಯಂ ರಕ್ಷಣೆಗೆ ತರಬೇತಿ ನೀಡಲಾಗುತ್ತಿದೆ.