ಭಟ್ಕಳದಲ್ಲಿ ಶೋಟೊಕಾನ್ ಕರಾಟೆ ಇನ್‌ಸ್ಟಿಟ್ಯೂಟ್‌ನ ೨ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಚಾಲನೆ
ಪಟ್ಟಣದ ಆಸರಕೇರಿಯ ತಿರುಮಲ ವೆಂಕಟ್ರಮಣ ಸಭಾಭವನದಲ್ಲಿ ಸ್ಥಳೀಯ ಶೋಟೊಕಾನ್ ಕರಾಟೆ ಇನ್‌ಸ್ಟಿಟ್ಯೂಟ್ ವತಿಯಿಂದ ಏರ್ಪಡಿಸಲಾದ ೨ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕರಾಟೆ ಕೇವಲ ಆತ್ಮರಕ್ಷಾ ಕಲೆ ಮಾತ್ರವಲ್ಲ, ಶಿಸ್ತು, ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ಜೀವನ ಪಾಠವಾಗಿದೆ. ವಿಶೇಷವಾಗಿ ಮಹಿಳೆಯರು ಕರಾಟೆ ತರಬೇತಿಯನ್ನು ಪಡೆದು ಸ್ವಯಂರಕ್ಷಣೆಯಲ್ಲಿ ಸದೃಢರಾಗಬೇಕು. ಗ್ರಾಮೀಣ ಪ್ರದೇಶಗಳಲ್ಲೂ ಇಂತಹ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಬೇಕು. ಭಟ್ಕಳದಲ್ಲಿ ಕರಾಟೆಯನ್ನು ಮಂಚೂಣಿಗೆ ತಂದ ದಿ. ವಾಸು ನಾಯ್ಕ ಅವರನ್ನು ಸ್ಮರಿಸಿಕೊಂಡ ಸಚಿವರು, ಕ್ರೀಡಾಪಟುಗಳು ಕ್ರೀಡಾತ್ಮಕ ಮನೋಭಾವದಿಂದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.ಜನತಾ ಸೊಸೈಟಿ ಹಾಗೂ ಪತ್ರಕರ್ತ ರಾಮಚಂದ್ರ ಕಿಣಿ ಮಾತನಾಡಿ, ಕರಾಟೆ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಂತ ಸಹಕಾರಿ. ರಾಷ್ಟ್ರಮಟ್ಟದ ಸ್ಪರ್ಧೆ ಆಯೋಜಿಸುವ ಮೂಲಕ ಶೋಟೊಕಾನ್ ಕರಾಟೆ ಇನ್‌ಸ್ಟಿಟ್ಯೂಟ್ ಕ್ರೀಡಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವೀರೇಂದ್ರ ಶಾನಭಾಗ, ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು ನಮ್ಮೆಲ್ಲರ ಹೊಣೆ. ಕರಾಟೆ ತರಬೇತಿಯಿಂದ ಶಿಸ್ತುಬದ್ಧ ಜೀವನ ರೂಪುಗೊಳ್ಳುತ್ತದೆ ಎಂದು ಹೇಳಿದರು. ಈ ಸಂದರ್ಭ ಗುರುಮಠದ ಅಧ್ಯಕ್ಷ ಅರುಣ ನಾಯ್ಕ, ರಾಜ್ಯ ಮಟ್ಟದ ಕರಾಟೆ ಶಿಕ್ಷಕ ಸಂಘದ ಕಾರ್ಯದರ್ಶಿ ಸತೀಶ ಬೆಳ್ಮಣ, ತರಬೇತುದಾರರಾದ ಹನ್ಸಿ ರಾಜನ್, ರಾಜಶೇಖರ ಗೌಡ, ವಾಸು ಮೊಗೇರ, ಆರ್ಯನ ನಾಯ್ಕ ಇತರರಿದ್ದರು.ಕರಾಟೆ ಶಿಕ್ಷಕ ನಾಗರಾಜ ದೇವಾಡಿಗ ಸ್ವಾಗತಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. ಸ್ಪರ್ಧೆ ಯಶಸ್ವಿಯಾಗಿ ನಡೆಯಲು ತರಬೇತುದಾರರು, ಪಾಲಕರು ಹಾಗೂ ಸ್ವಯಂಸೇವಕರು ಸಹಕಾರ ನೀಡಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ಕರಾಟೆ ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಕೌಶಲ್ಯ ಪ್ರದರ್ಶಿಸಿದರು.