ಕಾರವಾರ: ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ನ. 12ರಿಂದ 26ರ ವರೆಗೆ ಕರಾವಳಿ ಭೀಮೋತ್ಸವ ಆಯೋಜನೆ ಮಾಡಿದೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ದೀಪಕ ಕುಡಾಳಕರ್ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ವಿಚಾರಧಾರೆಗಳನ್ನು ಮತ್ತು ಸಂವಿಧಾನದ ಬಗ್ಗೆ ತಿಳಿವಳಿಕೆ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭೀಮೋತ್ಸವದಲ್ಲಿ ಅಂಬೇಡ್ಕರ್ ಅವರ ಕುರಿತಾದ ರೂಪಕ ಏರ್ಪಡಿಸಲಾಗಿದೆ. ಇದೂ ಅಲ್ಲದೇ ವಿವಿಧ ಕಲಾವಿದರು ಪ್ರತಿನಿತ್ಯ ಕ್ರಾಂತಿಗೀತೆ ಹಾಡಲಿದ್ದಾರೆ ಎಂದು ತಿಳಿಸಿದರು.ಭೀಮೋತ್ಸವದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಕೂಡ ಇರಲಿದೆ. ವಸ್ತು ಪ್ರದರ್ಶನ ಮತ್ತು ಆಹಾರ ಮಳಿಗೆಗಳನ್ನೂ ಹಾಕಲು ಉದ್ದೇಶಿಸಲಾಗಿದೆ. ಇದರಲ್ಲಿ ಸ್ವಾವಲಂಬಿ ಜೀವನ ನಡೆಸುವ ಮಹಿಳೆಯರಿಗೆ ಕೆಲವೊಂದು ಮಳಿಗೆಗಳನ್ನು ಮೀಸಲಿಡಲಿ ನಿರ್ಧರಿಸಲಾಗಿದೆ ಎಂದು ಕುಡಾಳಕರ್ ತಿಳಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಅವರಿಗೆ ಸನ್ಮಾನಿಸುವ ಮತ್ತು ಸಮಾಜದ ಎಲ್ಲ ವರ್ಗದ, ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು. ನ. 12ರಂದು ಭೀಮೋತ್ಸವಕ್ಕೆ ಚಾಲನೆ ನೀಡಲಾಗುವುದು. ಅಂದು ಅಮ್ಯೂಸ್‌ಮೆಂಟ್ ಪಾರ್ಕನ ಉದ್ಘಾಟನೆ, ನ. 13ರಂದು ಬೆಳಗ್ಗೆ 6 ಗಂಟೆಗೆ ಮ್ಯಾರಾಥಾನ್ ಹಾಗೂ ನ. 14ರಿಂದ 18ರ ವರೆಗೆ ಮಯೂರವರ್ಮ ವೇದಿಕೆಯಲ್ಲಿ ಸಂವಿಧಾನದ ಬಗ್ಗೆ ರೂಪಕ ಪ್ರದರ್ಶನ ಮತ್ತು ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನ. 14ರಂದು ಬೆಳಗ್ಗೆ 6 ಗಂಟೆಗೆ ಸೈಕಲ್ ಜಾಥಾ ಈ ಎಲ್ಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಉತ್ಸವದಲ್ಲಿ ಮಕ್ಕಳು ಚಿತ್ರಕಲೆ ಮಾಡುವುದು, ಪೌಢಶಾಲೆ ಮಕ್ಕಳಿಗೆ ಅಂಬೇಡ್ಕರ್ ಮತ್ತು ಸಂವಿಧಾನದ ಚಿತ್ರಕಲೆ, ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನ. 18ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದು ಅವರು ತಿಳಿಸಿದರು.
ಎನ್‌ಪಿಸಿಐಎಲ್ ಎಸ್‌ಸಿ-ಎಸ್‌ಟಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕಿರಣ ಬೋರ್ಕರ್, ಸಚಿನ್ ಬೋರ್ಕರ್ ಮತ್ತಿತರರು ಇದ್ದರು.