ಕರಾವಳಿ ಕಲೋತ್ಸವ: ಡಾ. ಮೋಹನ ಆಳ್ವಗೆ ಕರಾವಳಿ ಸೌರಭ ಪ್ರಶಸ್ತಿ ಪ್ರದಾನ

KannadaprabhaNewsNetwork | Published : Dec 23, 2024 1:03 AM

ಸಾರಾಂಶ

ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಂಟ್ವಾಳ ಚಿಣ್ಣರಲೋಕ, ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಹಾಗೂ ಚಿಣ್ಣರಲೋಕ ಸೇವಾಬಂಧು ಸಹಯೋಗದಲ್ಲಿ ಬಿ.ಸಿ. ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಉತ್ಸವ ಹಾಗೂ ಅಮ್ಯೂಸ್‌ಮೆಂಟ್ ಪಾರ್ಕ್ ಒಳಗೊಂಡ ಕರಾವಳಿ ಕಲೋತ್ಸವದಲ್ಲಿ ಶನಿವಾರ ಸಂಜೆ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಅವರಿಗೆ ಕರಾವಳಿ ಸೌರಭ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಪೂರ್ವಜರು ಮೌಲ್ಯಯುತ ಬದುಕನ್ನು ಸವೆದು ಸಮಾಜಕ್ಕೆ ಆದರ್ಶರಾಗಿದ್ದು, ಆದರೆ ಪ್ರಸ್ತುತ ಯುವ ಜನಾಂಗದ ಜೀವನ ಪದ್ಧತಿ ಆತಂಕವನ್ನು ತರುತ್ತಿದೆ ಎಂದರು.ಪಾಣೆಮಂಗಳೂರು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದ ಆಡಳಿತ ಮೊಕ್ತೇಸರ ರಘುನಾಥ ಸೋಮಯಾಜಿ ಅಧ್ಯಕ್ಷತೆ ವಹಿಸಿದ್ದರು.

ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ತುಕರಾಮ್ ಪೂಜಾರಿ ಅಭಿನಂದನಾ ಭಾಷಣ ಮಾಡಿ, ಡಾ.ಮೋಹನ್ ಆಳ್ವ ಅವರು ನಮಗೆ ಸಾಂಸ್ಕೃತಿಕ ಪ್ರವಾದಿಯಾಗಿ ಕಂಡುಬರುತ್ತಿದ್ದು, ಸರಳತೆಯ ಅವರ ಜೀವನ ಪ್ರತಿಯೊಬ್ಬರಿಗೂ ರೋಲ್ ಮಾಡೆಲ್ ಎನಿಸಿಕೊಳ್ಳುತ್ತದೆ. ದೇಶದ ಪ್ರತಿಷ್ಠಿತ ಮೇರು ವ್ಯಕ್ತಿಗಳ ವ್ಯಕ್ತಿತ್ವವನ್ನು ನಾವು ಡಾ. ಆಳ್ವರಲ್ಲಿ ಕಾಣುವುದಕ್ಕೆ ಸಾಧ್ಯವಿದೆ ಎಂದರು.ವೇದಿಕೆಯಲ್ಲಿ ಬಿ.ಸಿ.ರೋಡಿನ ನ್ಯಾಯವಾದಿ ಅಶ್ವನಿ ಕುಮಾರ್ ರೈ, ಬಂಟ್ವಾಳ ತಾಲೂಕು ಬಂಟರ ಸಂಘ ಅಧ್ಯಕ್ಷ ಚಂದ್ರಹಾಸ ಡಿ. ಶೆಟ್ಟಿ, ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ್ ಜೈನ್, ಚಿಣ್ಣರ ಅಧ್ಯಕ್ಷೆ ದಿಯಾ ರಾವ್, ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ ಮುನ್ನೂರು ಉಪಸ್ಥಿತರಿದ್ದರು.ಬೂಡಾ ಮಾಜಿ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಪ್ರೇಮನಾಥ ಶೆಟ್ಟಿ ಅಂತರ ವಂದಿಸಿದರು. ಎಚ್.ಕೆ.ನಯನಾಡು ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ವಿಶೇಷ ಆಕರ್ಷಣೆಯ ನೃತ್ಯ ಸಿಂಚನ ಪ್ರದರ್ಶನಗೊಂಡಿತು.

Share this article