13 ದಿನ ಬಳಿಕ ಟಿಎನ್‌ ನಾರಾಯಣ ಗೌಡ ಬಂಧಮುಕ್ತ

KannadaprabhaNewsNetwork |  
Published : Jan 11, 2024, 01:31 AM ISTUpdated : Jan 11, 2024, 12:39 PM IST
ಕರವೇ ನಾರಾಯಣ ಗೌಡ | Kannada Prabha

ಸಾರಾಂಶ

ಕನ್ನಡ ಕಡ್ಡಾಯ ಬಳಕೆಗೆ ಒತ್ತಾಯಿಸಿ ವಿವಿಧ ಪ್ರಕರಣಗಳಲ್ಲಿ ಡಿ.28ರಿಂದ ಬಂಧನಕ್ಕೆ ಒಳಗಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎನ್‌. ನಾರಾಯಣ ಗೌಡ ಅವರು ಕೊನೆಗೂ ಬಂಧಮುಕ್ತರಾಗಿದ್ದಾರೆ. ಇತ್ತೀಚೆಗೆ ಜಾಮೀನು ಪಡೆದಿದ್ದರು ಬಳಿಕ ಬಂಧಿಸಲ್ಪಟ್ಟಿದ್ದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಬಳಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿರುವುದು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಡಿ.28ರಿಂದ ಬಂಧನಕ್ಕೆ ಒಳಗಾಗಿ ಜೈಲಿನಲ್ಲಿದ್ದ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎನ್‌. ನಾರಾಯಣ ಗೌಡ ಅವರು ಕೊನೆಗೂ ಬಂಧಮುಕ್ತರಾಗಿದ್ದಾರೆ.

ಈ ನಡುವೆ ಜೈಲಿನಿಂದ ಬಿಡುಗಡೆಯಾದ ನಂತರ ಗೌಡರು ಕಾಲು ನೋವಿನಿಂದ ಬಳಲುತ್ತಿದ್ದ ಕಾರಣ ಚಿಕಿತ್ಸೆ ಪಡೆಯಲು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಮ್ಮ ನಾಯಕ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಕರವೇ ಕಾರ್ಯಕರ್ತರು ಸಂಭ್ರಮಿಸಿ ಸಿಹಿ ವಿತರಿಸಿದರು.

ಬಂಧನದ ಸರಣಿ: ನಾಮಫಲಕ ಅಳವಡಿಕೆ ವಿಚಾರದಲ್ಲಿ ಪ್ರತಿಭಟನೆ ನಡೆಸಿ ಚಿಕ್ಕಜಾಲ ಠಾಣಾ ಪೊಲೀಸರಿಂದ ಡಿ.28ಕ್ಕೆ ನಾರಾಯಣಗೌಡ ಮೊದಲು ಬಂಧನಕ್ಕೆ ಒಳಗಾಗಿದ್ದರು. ನಂತರ ಜಾಮೀನು ಸಿಕ್ಕರೂ ವಿವಿಧ ಕೇಸಿನಲ್ಲಿ ಬಂಧಿಸಿ ಅವರನ್ನು ಜೈಲಲ್ಲೇ ಇಡಲಾಗಿತ್ತು.

ಈ ನಡುವೆ ವಿವಿಧ ಕೇಸಿನಲ್ಲಿ ಜಾಮೀನು ಲಭಿಸಿ, ಗೌಡ ಅವರು ಜಾಮೀನು ಮೇಲೆ ಮಂಗಳವಾರ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ 2017ರಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಕುಮಾರಸ್ವಾಮಿ ಲೇಔಟ್‌ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದದ್ದರು. ಹೀಗಾಗಿ ಅವರು ಮತ್ತೆ ಜೈಲು ಪಾಲಾಗಿದ್ದರು.

ಇದರಿಂದ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಅದನ್ನು ಬುಧವಾರ ಬೆಳಗ್ಗೆ ಪುರಸ್ಕರಿಸಿದ ನಗರದ 30ನೇ ಎಸಿಎಂಎಂ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು. ಇದಾದ ಬೆನ್ನಲ್ಲೇ 2020ರಲ್ಲಿ ಕೊರೋನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದ ಪ್ರಕರಣ ಸಂಬಂಧ ಸಂಜೆ 4 ಗಂಟೆಗೆ ಹಲಸೂರು ಗೇಟ್‌ ಠಾಣಾ ಪೊಲೀಸರು ನಾರಾಯಣಗೌಡ ಅವರನ್ನು ಬಂಧಿಸಿದ್ದರು ಹಾಗೂ ವೈದ್ಯಕೀಯ ತಪಾಸಣೆ ನಡೆಸಿ 1ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. 

ಇದರಿಂದ ಜಾಮೀನು ಕೋರಿ ಅವರ ಪರ ವಕೀಲರು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ 1ನೇ ಎಸಿಎಂಎಂ ನ್ಯಾಯಾಲಯ, 50 ಸಾವಿರ ರು. ವೈಯಕ್ತಿಕ ಬಾಂಡ್ ಮತ್ತು 5 ಸಾವಿರ ರು. ನಗದಿನ ಭದ್ರತಾ ಖಾತರಿ ಪಡೆದು ಜಾಮೀನು ಮಂಜೂರು ಮಾಡಿತು. ಜೊತೆಗೆ, ಮುಂದಿನ ದಿನಗಳಲ್ಲಿ ನ್ಯಾಯಾಲಯದ ಎಲ್ಲಾ ವಿಚಾರಣೆಗಳಿಗೆ ಕಡ್ಡಾಯವಾಗಿ ಖುದ್ದು ಹಾಜರಾಬೇಕು ಎಂಬುದು ಸೇರಿದಂತೆ ಇನ್ನಿತರ ಕೆಲ ಷರತ್ತುಗಳನ್ನು ವಿಧಿಸಿತು. ಈ ಆದೇಶದ ಮೇರೆಗೆ ನಾರಾಯಣಗೌಡ ಅವರನ್ನು ಬುಧವಾರ ಸಂಜೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!