ಕನ್ನಡ ನಾಮಫಲಕ ಅಳವಡಿಕೆಗಾಗಿ ಕರವೇ ಪ್ರತಿಭಟನೆ

KannadaprabhaNewsNetwork | Updated : Mar 06 2024, 02:58 PM IST

ಸಾರಾಂಶ

ಕರವೇ ಕಾರ್ಯಕರ್ತರು ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು. ರಾಜ್ಯದಲ್ಲಿ ಅನ್ಯಭಾಷೆ ಹೇರಿಕೆ ಸರಿಯಲ್ಲ.

ಹೊಸಪೇಟೆ: ಅಂಗಡಿ, ಮುಂಗಟ್ಟುಗಳು ಹಾಗೂ ಕಚೇರಿಗಳಲ್ಲಿ ಕನ್ನಡ ನಾಮಫಲಕಗಳ ಅಳವಡಿಕೆಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ)ಯ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ವಿವಿಧ ಅಂಗಡಿ- ಮುಂಗಟ್ಟುಗಳಿಗೆ ತೆರಳಿ ಸರ್ಕಾರದ ಆದೇಶದಂತೆ ಕನ್ನಡ ನಾಮಫಲಕ ಶೇ. 60ರಷ್ಟು ಅಳವಡಿಸಬೇಕು ಎಂದು ಜಾಗೃತಿ ಕೂಡ ಮೂಡಿಸಿದರು. ಈ ವೇಳೆ ಕರಪತ್ರ ಹಂಚಿಕೆ ಮಾಡುವಾಗ ಸ್ಟ್ಯಾನ್ಲಿ ಎಂಬ ಅಂಗಡಿ ಮಾಲೀಕ ಕನ್ನಡ ಭಾಷಾ ನಾಮಫಲಕ ಬಳಕೆ ಮಾಡುವುದಿಲ್ಲ ಎಂದು ದುರ್ವರ್ತನೆ ತೋರಿದ ಹಿನ್ನೆಲೆಯಲ್ಲಿ ಕರವೇ ಕಾರ್ಯಕರ್ತರು ಹಾಗೂ ಮಾಲೀಕನ ನಡುವೆ ಮಾತಿನ ಚಕಮಕಿ ನಡೆಯಿತು.

ಕರವೇ ಕಾರ್ಯಕರ್ತರು ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು. ರಾಜ್ಯದಲ್ಲಿ ಅನ್ಯಭಾಷೆ ಹೇರಿಕೆ ಸರಿಯಲ್ಲ. ಆಂಗ್ಲ ಭಾಷಾ ವ್ಯಾಮೋಹ ಕೈಬಿಡಬೇಕು. ಕೂಡಲೇ ಕನ್ನಡ ನಾಮಫಲಕಗಳನ್ನು ಬಳಕೆ ಮಾಡಬೇಕು. ಕನ್ನಡ ಬಳಕೆಗೆ ಹಿಂದೇಟು ಹಾಕುತ್ತಿರುವ ಖಾಸಗಿ ಅಂಗಡಿ ಮಾಲೀಕನ ವಿರುದ್ಧ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆ ವಾಗ್ವಾದ ವಿಕೋಪಕ್ಕೆ ತಿರುಗಿದ್ದರಿಂದ ಪೊಲೀಸರು ಮಧ್ಯಪ್ರವೇಶಿಸಿ ತಿಳಿಗೊಳಿಸಿದರು.

ಕರವೇ ಜಿಲ್ಲಾಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ ಮಾತನಾಡಿ, ರಾಜ್ಯದಲ್ಲಿ ಅನ್ಯ ಭಾಷಿಕರ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಹಿಂದಿ ಹಾಗೂ ಇಂಗ್ಲಿಷ್‌ ವ್ಯಾಮೋಹ ಬೆಳೆಯುತ್ತಿದೆ. ರಾಜ್ಯ ಸರ್ಕಾರ ಶೇ. 60ರಷ್ಟು ಕನ್ನಡ ನಾಮಫಲಕಗಳ ಬಳಕೆಗೆ ಆದೇಶ ನೀಡಿದರೂ ಇದುವರೆಗೆ ಅಂಗಡಿ- ಮುಂಗಟ್ಟುಗಳ ಮಾಲೀಕರು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ರಾಜ್ಯದಲ್ಲಿ ಕನ್ನಡಪ್ರೇಮ ಬೆಳೆಸಿಕೊಳ್ಳಬೇಕು. ಹಾಗಾಗಿ ಹೊಸಪೇಟೆ ಸೇರಿದಂತೆ ವಿಜಯನಗರ ಜಿಲ್ಲಾದ್ಯಂತ ಕನ್ನಡ ನಾಮಫಲಕಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು.

ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ, ಮುಖಂಡರಾದ ಎಸ್.ಎಂ. ಜಾಫರ್, ಮಹೇಬೂಬ್ ಬಾಷಾ, ಎಂ.ಎಸ್. ಗೌಸ್, ರಮೇಶ್ ಮತ್ತಿತರರು ಇದ್ದರು.

Share this article