ಕನ್ನಡಪ್ರಭ ವಾರ್ತೆ ಸುರಪುರ
ನಗರದ ಸಮೀಪದ ರಂಗಂಪೇಟೆಯ ದೊಡ್ಡ ಬಜಾರ್ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ 22ನೇ ವರ್ಷದ ಕರವೇ ರಾಜ್ಯೋತ್ಸವ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.
ರಂಗಂಪೇಟೆಯ ಎಂ.ಆರ್. ಬುದ್ಧಿವಂತ ಶೆಟ್ಟರಂತಹ ಹಿರಿಯರು ಅಂದಿನ ಕಾಲದಲ್ಲಿಯೇ ಕನ್ನಡದಲ್ಲಿ ಬರವಣಿಗೆ ಮಾಡುವುದರ ಜತೆಗೆ ಪತ್ರಿಕೆಗಳನ್ನು ಹಂಚುವ ಮೂಲಕ ಭಾಷಾ ಸೇವೆ ಸಲ್ಲಿಸಿ ಇಂದಿನ ಪೀಳಿಗೆಗೆ ಪ್ರೇರಣೆಯಾಗಿದ್ದಾರೆ. ಕನ್ನಡ ನಾಡು-ನುಡಿಯ ಸೇವೆಯಲ್ಲಿ ಮಹನೀಯರು ಸಲ್ಲಿಸಿದ ಕೊಡುಗೆ ಅಪಾರವಾಗಿದ್ದು, ಅಂತಹ ಕನ್ನಡಾಭಿಮಾನಿಗಳನ್ನು ಸದಾ ಸ್ಮರಿಸಿಕೊಳ್ಳಬೇಕು ಎಂದರು.ಕರ್ನಾಟಕದ ನೆಲ, ಜಲ, ಭಾಷೆ ಹಾಗೂ ಸಂಸ್ಕೃತಿಗೆ ಧಕ್ಕೆ ಉಂಟಾದಾಗ ಮೊಟ್ಟಮೊದಲಿಗೆ ಹೋರಾಟದ ಮುಂಚೂಣಿಯಲ್ಲಿ ನಿಲ್ಲುವವರು ಕನ್ನಡ ರಕ್ಷಣಾ ವೇದಿಕೆಯ ಸೈನಿಕರು. ಅದರಲ್ಲೂ ವಿಶೇಷವಾಗಿ ಕೊರೊನಾ ಸಂಕಷ್ಟದ ಸಮಯದಲ್ಲಿಯೂ ತಮ್ಮ ಜೀವನದ ಹಂಗು ತೊರೆದು ಜನರ ರಕ್ಷಣೆಗೆ ಧಾವಿಸುವ ಮೂಲಕ ಕರವೇ ಕಾರ್ಯಕರ್ತರ ಅಪರೂಪದ ಮಾನವೀಯ ಸೇವೆ ಸಲ್ಲಿಸಿದ್ದಾರೆ. ಕಳೆದ ೨೨ ವರ್ಷಗಳಿಂದ ಕನ್ನಡ ನಾಡು-ನುಡಿಯ ರಕ್ಷಣೆಯಲ್ಲಿ ತೊಡಗಿರುವ ಸಂಘಟನೆಯ ಕಾರ್ಯ ಶ್ಲಾಘನೀಯವಾಗಿದ್ದು, ಕನ್ನಡಪರ ಸೇವಾ ಪಯಣ ಮುಂದಿನ ವರ್ಷಗಳಲ್ಲಿಯೂ ನಿರಂತರವಾಗಿ ಸಾಗಲಿ ಎಂದು ಹಾರೈಸಿದರು.
ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ಅಧ್ಯಕ್ಷತೆ ವಹಿಸಿದ್ದರು. ರಾಜಾ ಮುಕುಂದ ನಾಯಕ, ಬಲಭೀಮನಾಯಕ ಬೈರಿಮಡ್ಡಿ, ರಾಜಾ ರಂಗಪ್ಪನಾಯಕ, ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ, ಶಂಕರನಾಯಕ, ಶ್ರೀನಿವಾಸ ನಾಯಕ ದರಬಾರಿ, ಭೀಮನಗೌಡ ಲಕ್ಷ್ಮೀ ಹೆಮನೂರು, ದೇವರಾಜ ಮಕಾಶಿ, ವೆಂಕಟೇಶ ಬೇಟೆಗಾರ, ವಿವಿಧ ಕನ್ನಡಪರ ಸಂಘಟನೆಗಳ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಳಿಕ ಟ್ರೆಂಡಿಂಗ್ ಸ್ಟಾರ್ ಮ್ಯೂಸಿಕ್‌ನ ಮೈಲಾರಿ ಮತ್ತು ಲಕ್ಷ್ಮಿ ವಿಜಯಪುರ ಅವರ ಗಾಯನ ವೈಭವ, ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳಾದ ದಾನಪ್ಪ, ದೀಕ್ಷಾ ಕುಂದಾಪುರ, ಉಲ್ಲಾಸ ಯು.ಕೆ.ಹುಲಿ ಹಾಗೂ ಕೊಪ್ಪಳ ಮಂಜು, ವಿನಾಯಕ ಬಾದಾಮಿ, ಜ್ಯೂನಿಯರ್ ಕಪ್ಪೆರಾಯ ಅವರಿಂದ ನಗೆ ಹಬ್ಬ, ಬಳ್ಳಾರಿಯ ಸೂರ್ಯ ಕಲಾ ಟ್ರಸ್ಟ್ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು. ಸ್ಥಳೀಯ ಕಲಾವಿದರಿಂದ ವಿಶೇಷ ರಸಮಂಜರಿ ಕಾರ‍್ಯಕ್ರಮ ಜರುಗಿತು. ವಿವಿಧ ಕಲಾತಂಡಗಳ ಆಕರ್ಷಕ ಪ್ರದರ್ಶನಗಳು ಪ್ರೇಕ್ಷಕರನ್ನು ರಂಜಿಸುವುದರೊಂದಿಗೆ ನಾಡಿನ ಸಾಂಸ್ಕೃತಿಕ ಸಂಭ್ರಮವನ್ನು ಇಮ್ಮಡಿಗೊಳಿಸಿದವು.
----ಫೋಟೊ-----
ಸುರಪುರ ಸಮೀಪದ ರಂಗಂಪೇಟೆಯಲ್ಲಿ ಕರವೇ ವತಿಯಿಂದ ಹಮ್ಮಿಕೊಂಡಿದ್ದ ಕರವೇ ರಾಜ್ಯೋತ್ಸವ ಸಂಭ್ರಮ ಕಾರ‍್ಯಕ್ರಮದಲ್ಲಿ ಸಾಧಕರಿಗೆ ಕುವೆಂಪು ಪ್ರಶಸ್ತಿ ನೀಡಲಾಯಿತು.