ಕನ್ನಡಪ್ರಭ ವಾರ್ತೆ ಬೆಳಗಾವಿ
ಕನ್ನಡ ನಾಮಫಲಕ ಅನುಷ್ಠಾನಕ್ಕೆ ಆಗ್ರಹಿಸಿ ಹೋರಾಟ ನಡೆಸಿದ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ಬಂಧನ ಖಂಡಿಸಿ ಕರವೇ ಕಾರ್ಯಕರ್ತರು ಭಾನುವಾರ ನಗರದ ಚನ್ನಮ್ಮ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.ಕರವೇ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡ ಕನ್ನಡಕ್ಕಾಗಿ ಹೋರಾಟ ನಡೆಸಿದ್ದಾರೆ. ಕನ್ನಡ ಪರವಾಗಿರಬೇಕಿದ್ದ ಸರ್ಕಾರ ಪೊಲೀಸರನ್ನು ಬಿಟ್ಟು ಬಂಧನ ಮಾಡಿಸಿದ್ದು ಖಂಡನೀಯ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಸರ್ಕಾರದ ಪ್ರತಿಕೃತಿ ದಹನಕ್ಕೆ ಮುಂದಾದ ಹೋರಾಟಗಾರರನ್ನು ಪೊಲೀಸರು ಬಲವಂತವಾಗಿ ತಡೆದರು. ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ಕನ್ನಡ ನಾಮಫಲಕ ಕಡ್ಡಾಯ ಸರ್ಕಾರ ಆದೇಶದ ಮೇರೆಗೆ ಕರವೇ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡರು ಅಭಿಯಾನ ಹಮ್ಮಿಕೊಂಡಿದರು, ಅಭಿಯಾನ ಹತ್ತಿಕ್ಕುವ ದೃಷ್ಟಿಯಿಂದ ಅವರನ್ನು ಸರ್ಕಾರ ಬಂಧಿಸಿದೆ. ಅವರನ್ನು ಬಿಡುಗಡೆ ಮಾಡದೆ ಹೋದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಬೆಳಗಾವಿ ವ್ಯಾಪಾರಿಗಳು ಹಾಗೂ ಅಂಗಡಿಗಳು ಕನ್ನಡದಲ್ಲಿ ನಾಮಫಲಕ ಹಾಕದೇ ಹೋದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.ಕನ್ನಡಪರ ಹೋರಾಟಗಾರರ ಮಹಾದೇವ ತಳವಾರ ಮಾತನಾಡಿ, ಒಂದು ತಿಂಗಳಿಂದ ಕನ್ನಡ ನಾಮಫಲಕ ಹಾಕುವಂತೆ ಜಾಗೃತಿ ಮೂಡಿಸಿದರೂ ಅಂಗಡಿಕಾರರು ನಾಮಫಲಕ ಹಾಕಿಲ್ಲ.ದಿದರ ವಿರುದ್ಧ ಹೋರಾಟ ಮಾಡಿದ ನಾರಾಯಣಗೌಡರನ್ನು ಬಂಧಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರುಪ್ರತಿಭಟನೆಯಲ್ಲಿ ಕರವೇ ಕಿತ್ತೂರು ತಾಲೂಕು ಅಧ್ಯಕ್ಷ ರುದ್ರಗೌಡ ಪಾಟೀಲ, ಗೌಡಪ್ಪ ಸಾಣಿಕೊಪ್ಪ, ವಿಶಾಲಗೌಡ ಪಾಟೀಲ ಸೇರಿದಂತೆ ಇತರ ಕನ್ನಡ ಪರ ಹೋರಾಟಗಾರರು ಭಾಗಿಯಾಗಿದ್ದರು.
--------ಪ್ರತಿಭಟನೆ ಸ್ಥಳದಲ್ಲೇ ಆಂಗ್ಲ ನಾಮಫಲಕ
ಒಂದು ಕಡೆ ಕನ್ನಡ ನಾಮಫಲಕ ಅಳವಡಿಸಬೇಕು ಎಂದು ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಪ್ರತಿಭಟನೆ ನಡೆಸುತ್ತಿದ್ದ ಚನ್ನಮ್ಮ ವೃತ್ತದಲ್ಲಿ ಅಳವಡಿಸಿದ ಫಲಕಗಳಲ್ಲಿ ಶೇ.60ಕ್ಕಿಂತ ಕನ್ನಡ ಬಳಕೆ ಜೊತೆಗೆ ಕನ್ನಡ ಶಬ್ಧ ತಪ್ಪಾಗಿ ಬರೆದು ಅವಮಾನ ಮಾಡಿದ್ದರೂ ಪ್ರತಿಭಟನಾಕಾರರು ನೋಡಿಯೂ ನೋಡದಂತೆ ತಮ್ಮ ಪಾಡಿಗೆ ತಾವು ಪ್ರತಿಭಟನೆ ನಡೆಸಿದರು.ಒಂದು ಕಡೆ ಕರವೇ ಹೋರಾಟಕ್ಕೆ ಮಣಿದ ಸರ್ಕಾರ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡಬೇಕೆಂದು ಸುಗ್ರೀವಾಜ್ಞೆ ಹೊರಡಿಸಿದೆ. ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಬೆಳಗಾಮ್ ಕ್ಲಬ್ ಅಳವಡಿಸಿದ ಹೊಸ ವರ್ಷಾಚರಣೆಯ ಹೋಲ್ಡಿಂಗ್ ಗಳಲ್ಲಿ ಶೇ.60ರಷ್ಟು ನಿಯಮ ಪಾಲನೆ ಮಾಡಿಲ್ಲ. ಮೊದಲಿಗೆ ಆಂಗ್ಲ ಭಾಷೆಗೆ ಆದ್ಯತೆ ನೀಡಿದ್ದು, ಕೆಳಗೆ ಸಣ್ಣ ಅಕ್ಷಗಳಲ್ಲಿ ಹೊಸ ವರ್ಷದ ಶುಭಾಷಯಗಳು ಎಂದು ಬರೆದಿದ್ದು, ಅದರಲ್ಲೂ ಲೋಪವಿದೆ. ಹೊಸ ಬದಲಾಗಿ ಹೋಸ ಎಂದು ಬರೆಯಲಾಗಿದೆ. ಬೆಳಗಾಮ್ ಕ್ಲಬ್ ಗೆ ಜಿಲ್ಲಾಧಿಕಾರಿ ಸೇರಿ ಹಿರಿಯ ಅಧಿಕಾರಿಗಳೇ ಸದ್ಯರಾಗಿದ್ದಾರೆ. ಆದರೂ ಕನ್ನಡ ಶಬ್ಧವನ್ನು ಸರಿಯಾಗಿ ಬರೆಸಿಲ್ಲ. ಇತ್ತ ಕನ್ನಡ ನಾಮಫಲಕಕ್ಕೆ ಹೋರಾಡುತ್ತಿರುವ ಕನ್ನಡಪರ ಹೋರಾಟಗಾರರು ಸಹ ಕಂಡೂ ಕಾಣದಂತೆ ಜಾಣ ಮೌನರಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.