ಕನಕಗಿರಿ: ತಾಲೂಕಿನ ಕರಡಿಗುಡ್ಡದ ಹೊರವಲಯದ ಲಕ್ಷ್ಮೀವೆಂಕಟೇಶ್ವರ ಜಾತ್ರೆ ನಿಮಿತ್ತ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಸಂಜೆ ಗೋಧೂಳಿ ಸಮಯದಲ್ಲಿ ಆರಂಭವಾದ ರಥೋತ್ಸವ ಪಾದಗಟ್ಟೆಗೆ ತಲುಪಿತು. ವಿಶೇಷ ಪೂಜೆಯೊಂದಿಗೆ ಮರಳಿದ ರಥ ಮೂಲಸ್ಥಾನಕ್ಕೆ ಬಂದಿತು.
ನೆರೆದಿದ್ದ ಸಾವಿರಾರು ಭಕ್ತರು ರಥಕ್ಕೆ ಹೂಹಣ್ಣು, ಉತ್ತತ್ತಿ ಎಸೆದರು. ಬಂಕಾಪುರ, ಚಿಕ್ಕಮಾದಿನಾಳ, ಹಿರೇ ಮಾದಿನಾಳ, ವಿಠಲಾಪುರ, ಕನಕಗಿರಿ, ನಾಗಲಾಪುರ ಗ್ರಾಮಸ್ಥರು ಹೂವಿನಹಾರ ತಂದು ರಥಕ್ಕೆ ಸಮರ್ಪಿಸಿದರು. ನೆರೆಯ ಜಿಲ್ಲೆ ಹಾಗೂ ರಾಜ್ಯಗಳಿಂದ ನೂರಾರು ಭಕ್ತರು ಆಗಮಿಸಿದ್ದರು. ಹರಕೆ ಹೊತ್ತ ಭಕ್ತರು ದೀರ್ಘದಂಡ ನಮಸ್ಕಾರ, ರಥಕ್ಕೆ ಬಾವುಟ ನೀಡಿ ಭಕ್ತಿ ಭಾವ ಮೆರೆದರು.ನವಗ್ರಹ ಪ್ರತಿಷ್ಠಾಪನೆ: ಹೊಸಪೇಟೆಯಲ್ಲಿ ಕೆತ್ತನೆ ಮಾಡಲಾದ ನವಗ್ರಹ ಶಿಲಾಮೂರ್ತಿಗಳನ್ನು ಆಂಜನೇಯ ದೇಗುಲದಲ್ಲಿ ಪ್ರತಿಷ್ಠಾಪಿಸಲಾಯಿತು. ಭಕ್ತ ಶಿವಪ್ಪ ಗಂಗಾಮತ ಈ ಸೇವೆ ಸಲ್ಲಿಸಿದ್ದು, ಸಿರಗುಪ್ಪದ ಶ್ರೀನಿವಾಸ ಆಚಾರ್ ಪೌರೋಹಿತ್ಯದಲ್ಲಿ ಹೋಮ, ಹವನ ಶ್ರದ್ಧಾಭಕ್ತಿಯಿಂದ ಜರುಗಿದವು.