ಕನ್ನಡಪ್ರಭ ವಾರ್ತೆ ಅರಕಲಗೂಡು
ಪಟ್ಟಣದ ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಮಾಜಿ ಹಾಗೂ ಹಾಲಿ ಸೈನಿಕರ ಸಂಘ . ರೋಟರಿ ಕ್ಲಬ್ ಸಹಯೋಗದಲ್ಲಿ 25ನೇ ಕಾರ್ಗಿಲ್ ವಿಜಯ ದಿವಸ್ ಆಚರಣೆಯನ್ನು ಆಚರಿಸಲಾಯಿತು.ಈ ವೇಳೆ ನಿವೃತ್ತ ಕಮಾಂಡರ್ ಚಂದ್ರಶೇಖರ್ ಮಾತನಾಡಿ, 1999ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಯುದ್ಧದಲ್ಲಿ ಭಾರತ ದಿಗ್ವಿಜಯ ಸಾಧಿಸಿದ ದಿನವಿದು. 1999ರ ಮೇ ತಿಂಗಳಿನಿಂದ ಜುಲೈವರೆಗೆ ಸುಮಾರು 60 ದಿನಗಳ ಕಾಲ ನಡೆದ ಯುದ್ಧವಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಲಡಾಕ್ ಜಿಲ್ಲೆಯಲ್ಲಿರುವ ಕಾರ್ಗಿಲ್‌ನಲ್ಲಿ ಅಕ್ರಮವಾಗಿ ನುಸುಳಿದ್ದ ಪಾಕಿಸ್ತಾನಿ ಸೇನೆಯನ್ನು ಬಗ್ಗು ಬಡಿಯಲು ಕಾರ್ಯಾಚರಣೆಗೆ ಭಾರತ ಇಟ್ಟಿದ್ದ ಹೆಸರು ಆಪರೇಷನ್ ವಿಜಯ. ಈ ಯುದ್ಧದಲ್ಲಿ ಭಾರತ ಗೆಲುವು ಸಾಧಿಸಿತು. ಆ ಗೆಲುವಿನ ಸ್ಮರಣಾರ್ಥವಾಗಿ ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ ಹಾಗೂ ಯುದ್ಧದಲ್ಲಿ ತ್ಯಾಗ ಬಲಿದಾನವನ್ನು ಮಾಡಿದ ವೀರಯೋಧರನ್ನು ಸ್ಮರಿಸಲಾಗುತ್ತಿದೆ ಎಂದು ಯುದ್ಧದ ಸಂದರ್ಭದ ಗೆಲುವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಂಶುಪಾಲ ಮಹೇಶ್ ಹೊಡೆನೂರು ಮಾತನಾಡಿ, ಅನ್ನ ಕೊಡುವ ರೈತ ದೇಶ ಕಾಯುವ ಯೋಧರ ತ್ಯಾಗ ಮತ್ತು ಸೇವೆ ಈ ದೇಶಕ್ಕೆ ಮಹತ್ವಪೂರ್ಣವಾದದ್ದು ತನ್ನ ಜೀವನದ ಕಷ್ಟಕಾರ್ಪಣ್ಯಗಳನ್ನು ಸಹಿಸಿಕೊಂಡು ಹಿಮಪರ್ವತಗಳಂತಹ ಪರ್ವತಗಳಲ್ಲಿ ದೇಶಕಾಯುವ ಯೋಧನ ಸೇವೆ ಶ್ಲಾಘನೀಯ ಎಂದರು. ತನ್ನ ಜೀವನವನ್ನು ದೇಶಕ್ಕಾಗಿ ಮುಡುಪಿಟ್ಟು ಕಾರ್ಗಿಲ್ ಪ್ರದೇಶವನ್ನು ಜಯಿಸಿದ ಯೋಧರನ್ನು ಸ್ಮರಿಸಿದರು.ನಂತರ ವಿದ್ಯಾರ್ಥಿಗಳಿಗೆ ಭಾರತ ರಾಷ್ಟ್ರೀಯ ಚಳವಳಿಯ ವಿಷಯ ಕುರಿತು ರಸಪ್ರಶ್ನೆಯನ್ನು ಏರ್ಪಡಿಸಿ ಬಹುಮಾನವನ್ನು ವಿತರಿಸಲಾಯಿತು. ಅರಕಲಗೂಡಿನ ಹಾಲಿ ಮತ್ತು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶಿವೇಗೌಡ, ಸದಸ್ಯರು, ಮತ್ತು ರೋಟರಿ ಕ್ಲಬ್‌ನ ಅಧ್ಯಕ್ಷ ವಿಜಯ್ ಕುಮಾರ್, ಸದಸ್ಯರು ಹಾಗೂ ಕಾಲೇಜಿನ ಉಪನ್ಯಾಸಕರು ಹಾಜರಿದ್ದರು.