ಪ್ರಕೃತಿಯೇ ಪರಬ್ರಹ್ಮನ ಪ್ರತ್ಯಕ್ಷ ರೂಪ: ಮುಕ್ತಾನಂದ ಶ್ರೀ

KannadaprabhaNewsNetwork |  
Published : Jul 23, 2026, 03:00 AM IST
ಹಸಿರೇ ಹರಿಯುವ ಹರಿನಾಮ: ಕರೀಂಜೆ ಶ್ರೀ ವೀರನಾರಾಯಣ ದೇವಸ್ಥಾನ ಸೇರಿದಂತೆ ನಾಲ್ಕು ಕ್ಷೇತ್ರಗಳಲ್ಲಿ ಅರಳಿದ ‘ಸಸ್ಯ ಶ್ಯಾಮಲಾ–2026’ದ ದಿವ್ಯ ಸಂಕಲ್ಪ” | Kannada Prabha

ಸಾರಾಂಶ

ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ವತಿಯಿಂದ ಪರಿಸರ ಪ್ರೇಮಿ ರಸಿಕ ಸ್ಮರಣಾರ್ಥ ಆಯೋಜಿಸಲಾದ ‘ಸಸ್ಯ ಶ್ಯಾಮಲಾ-2026’ ಸಾವಿರ ಗಿಡಗಳನ್ನು ನೆಡುವ ಹಾಗೂ ಹಂಚುವ ಹಸಿರು ಅಭಿಯಾನ ಪ್ರಯುಕ್ತ ಕರಿಂಜೆ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಜರುಗಿದ ಕಾರ್ಯಕ್ರಮ

ಮೂಡುಬಿದಿರೆ: ಪ್ರಕೃತಿಯೇ ಪರಬ್ರಹ್ಮನ ಪ್ರತ್ಯಕ್ಷ ರೂಪ. ಮರವನ್ನು ನೆಡುವುದು ಎಂದರೆ ಮಣ್ಣಿನಲ್ಲಿ ಸಸಿಯನ್ನಲ್ಲ, ಧರ್ಮದ ಬೀಜವನ್ನೇ ಬಿತ್ತುವುದು. ಪ್ರತಿಯೊಂದು ಗಿಡವೂ ದೇವರ ಉಸಿರು. ಪ್ರತಿಯೊಂದು ಮರದ ನೆರಳೂ ದೈವಾನುಗ್ರಹದ ವಿಸ್ತಾರ. ಪರಿಸರ ಸಂರಕ್ಷಣೆ ಇಂದಿನ ಅಗತ್ಯ. ಮಾತ್ರವಲ್ಲ ಅದು ಪ್ರತಿಯೊಬ್ಬರ ಆಧ್ಯಾತ್ಮಿಕ ಹೊಣೆಗಾರಿಕೆಯೂ ಆಗಿದೆ ಎಂದು ಕರಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದ್ದಾರೆ.ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ವತಿಯಿಂದ ಪರಿಸರ ಪ್ರೇಮಿ ರಸಿಕ ಸ್ಮರಣಾರ್ಥ ಆಯೋಜಿಸಲಾದ ‘ಸಸ್ಯ ಶ್ಯಾಮಲಾ-2026’ ಸಾವಿರ ಗಿಡಗಳನ್ನು ನೆಡುವ ಹಾಗೂ ಹಂಚುವ ಹಸಿರು ಅಭಿಯಾನ ಪ್ರಯುಕ್ತ ಕರಿಂಜೆ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶ ನೀಡಿದರು.ಅಭಿಯಾನದ ಪ್ರಯುಕ್ತ ಏರ್ಪಡಿಸಲಾದ ನಾಲ್ಕೂ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ‘ಹಸಿರೇ ಉಸಿರಾಗಲಿ… ನೆನಪೇ ಬೆಳಕಾಗಲಿ…’ ಎಂಬ ನಮ್ಮ ಸಂಕಲ್ಪ ಕೇವಲ ಘೋಷಣೆಯಲ್ಲ. ಅದು ಮುಂದಿನ ಪೀಳಿಗೆಗೆ ನೀಡುತ್ತಿರುವ ಜೀವದ ವಾಗ್ದಾನ ಎಂದರು.

ವಿದ್ಯಾರ್ಥಿಗಳ ಹೃದಯದಲ್ಲಿ ಪರಿಸರ ಪ್ರೀತಿಯ ಬೀಜ ಮೊಳಕೆಯೊಡೆದರೆ, ನಾಳೆಯ ಸಮಾಜ ಹಸಿರಿನ ಸಂಸ್ಕೃತಿಯಿಂದ ಸಮೃದ್ಧವಾಗುತ್ತದೆ ಎಂದರು.ಹಸಿರು ಯಜ್ಞದ ಪಯಣ:

ಈ ಮಹತ್ವದ ಹಸಿರು ಅಭಿಯಾನಕ್ಕೆ ಇರುವತ್ತೂರು ಕೊಳಕ್ಕೆ ಆದಿನಾಥ ಬಸದಿಯಲ್ಲಿ ಅರ್ಥಪೂರ್ಣ ಚಾಲನೆ ನೀಡಲಾಯಿತು.ಮುಖ್ಯ ಅತಿಥಿಯಾಗಿದ್ದ ನಿವೃತ್ತ ಪ್ರಾಂಶುಪಾಲ ಗುಣಪಾಲ ಕಡಂಬ ಮಾತನಾಡಿ, ಶಿಕ್ಷಣದ ಜೊತೆಗೆ ಪರಿಸರ ಸಂರಕ್ಷಣೆಯ ಸಂಸ್ಕಾರವನ್ನು ಬೆಳೆಸುತ್ತಿರುವ ಎಕ್ಸಲೆಂಟ್ ಸಂಸ್ಥೆಯ ಕಾರ್ಯ ಶ್ಲಾಘಿಸಿದರು.ಪ್ರಗತಿಪರ ಕೃಷಿಕ ಸುಭಾಶ್ಚಂದ್ರ ಚೌಟ, ಚಂದ್ರರಾಜ ಅಧಿಕಾರಿ, ಧರಣೇಂದ್ರ ಜೈನ್ ಮಾಂಟ್ರಾಡಿ, ಶಕುಂತಳಾ ಜೈನ್ ಬಜಗೋಳಿ ಉಪಸ್ಥಿತರಿದ್ದರು.ಮರಿಯಾಡಿಯ ನಡ್ಯೋಡಿ ದೈವಸ್ಥಾನದ ಪಾವನ ಪರಿಸರದಲ್ಲಿ ಮೂರನೇ ಹಂತದ ಕಾರ್ಯಕ್ರಮ ಜರುಗಿತು. ಹಿರಿಯ ಪತ್ರಕರ್ತ ಪ್ರಸನ್ನ ಹೆಗ್ಡೆ ಮಾತನಾಡಿ, ಕಾಲೇಜುಗಳು ಕೇವಲ ಪಠ್ಯದ ಕೇಂದ್ರಗಳಾಗದೆ ಪ್ರಕೃತಿಯ ಪರಮ ಪಾಠ ಕಲಿಸುವ ಸಂಸ್ಕಾರ ಕೇಂದ್ರಗಳಾಗಬೇಕು ಎಂದರು. ಮಾರೂರು ಖಂಡಿಗೆ ರಾಮದಾಸ ಆಸ್ರಣ್ಣ, ವಿಶ್ವನಾಥ ಕೋಟ್ಯಾನ್, ಉದ್ಯಮಿ ಆರ್.ಕೆ. ಭಟ್ ಇದ್ದರು.ಅಭಿಯಾನದ ನಾಲ್ಕನೇ ಕಾರ್ಯಕ್ರಮ ಕಲ್ಲಬೆಟ್ಟು ಶ್ರೀ ಮಹಾಮಾಯಿ ದೇವಸ್ಥಾನದ ಸನ್ನಿಧಿಯಲ್ಲಿ ನೆರವೇರಿತು. ದೇವಸ್ಥಾನದ ಕೋಶಾಧಿಕಾರಿ ರಮೇಶಚಂದ್ರ ಪಿ. ಪ್ರಾಸ್ತಾವಿಕವಾಗಿ ಮಾತನಾಡಿ, ದೇವಾಲಯಗಳು ಪ್ರಕೃತಿಯ ಸಂರಕ್ಷಣೆಯ ಸಂಕಲ್ಪ ಮೂಡುವ ಪುಣ್ಯಭೂಮಿಗಳಾಗಬೇಕು ಎಂದರು. ದೇವಸ್ಥಾನದ ಅಧ್ಯಕ್ಷ ಸೂರ್ಯ ಭಟ್, ಶಿವಾನಂದ ಪೈ, ಕಾರ್ಯದರ್ಶಿ ಕಮಲಾಕ್ಷ ರಾವ್ ಇದ್ದರು.ನಾಲ್ಕೂ ಕಾರ್ಯಕ್ರಮಗಳಲ್ಲಿ ಸಂಸ್ಥೆಯ ಉಪನ್ಯಾಸಕ ಡಾ. ವಾದಿರಾಜ ಕಲ್ಲೂರಾಯ, ಸಾರ್ವಜನಿಕ ಸಂಪರ್ಕಾಧಿಕಾರಿ ಸ್ವರೂಪ್ ಜೈನ್, ಎನ್‌ಎಸ್‌ಎಸ್‌ ಅಧಿಕಾರಿ ಅಶೋಕ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ, ಶಿಕ್ಷಕಿಯರಾದ ರಂಜಿತಾ, ವಿಮಲಾ, ಹರ್ಷಿತ ಬಂಗೇರ ಸೇರಿದಂತೆ ಸಂಸ್ಥೆಯ ಬೋಧಕ-ಬೋಧಕೇತರ ವೃಂದ, ವಿದ್ಯಾರ್ಥಿಗಳು, ದೇವಸ್ಥಾನದ ಪದಾಧಿಕಾರಿಗಳು ಹಾಗೂ ನೂರಾರು ಪರಿಸರಾಸಕ್ತ ಸಾರ್ವಜನಿಕರು ಭಾಗವಹಿಸಿದರು.

ಜನಮನ ಸೆಳೆದ ಸಸಿ ವಿತರಣೆ

ಅಭಿಯಾನದ ಅಂಗವಾಗಿ ಮಾವು, ಪೇರಳೆ, ನೆಲ್ಲಿಕಾಯಿ, ನೇರಳೆ, ಬೇವು ಸೇರಿದಂತೆ ಸುಮಾರು 50 ಬಗೆಯ ಫಲ ಹಾಗೂ ನೆರಳು ನೀಡುವ ಅಪರೂಪದ ಸಸಿಗಳನ್ನು ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೌಡಿಶೀಟರ್ ಪ್ರಕರಣ ದಾಖಲು : ಮುಖಂಡರ ವಿರೋಧ
ಕೆಎಲ್‌ಎಸ್‌ ಜಿಐಟಿ ಚೆಸ್ ಟೂರ್ನಮೆಂಟ್-2026 ಯಶಸ್ವಿ